More

    ರಸ್ತೆಗೆ ಹಾಕಿದ ಮರು ದಿನವೇ ಕಿತ್ತುಬಂದ ಡಾಂಬಾರು ; ಇಂಜಿನಿಯರ್‌ಗಳ ಕಾರ್ಯವೈಖರಿಗೆ ತಬ್ಬಿಬ್ಬಾದ ಗ್ರಾಮಸ್ಥರು

    ತಿಪಟೂರು: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾಂಬಾರು ರಸ್ತೆ, ನಿರ್ಮಾಣಗೊಂಡ ಮರುದಿನವೇ ಕಿತ್ತು ಬರುತ್ತಿದ್ದು, ಇಂಜಿನಿಯರ್‌ಗಳ ಕಾರ್ಯವೈಖರಿಗೆ ಗ್ರಾಮಸ್ಥರು ತಬ್ಬಿಬ್ಬಾಗಿದ್ದಾರೆ.

    ನೊಣವಿನಕೆರೆ ಹೋಬಳಿ ಕಸವನಹಳ್ಳಿಯಿಂದ ಹುಲ್ಲೇನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣದ ಸಲುವಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸುಮಾರು 5.72 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದ್ದು ರಸ್ತೆ ನಿರ್ಮಾಣದ ಅಂದಾಜು ಮೊತ್ತ 4.72 ಕೋಟಿ ರೂಪಾಯಿ.

    ಟೆಂಡರ್ ಪ್ರಕ್ರಿಯೆ ಮುಗಿದ ನಂತರ ರಸ್ತೆ ನಿರ್ಮಾಣ ಆಗಿದೆ. 15 ದಿನಗಳಿಂದ ರಸ್ತೆ ನಿರ್ಮಾಣ ಕಾರ್ಯ ಮುಂದುವರಿದಿದೆ. ಆದರೆ, ಕಾಮಗಾರಿ ಮುಂದೆ ಸಾಗಿದಂತೆ ಹಿಂದಿನಿಂದ ಹೊಸದಾಗಿ ನಿರ್ಮಿಸಲಾಗಿರುವ ಡಾಂಬಾರು ರಸ್ತೆ ಕಿತ್ತು ಬರುತ್ತಿದೆ. ಹುಲ್ಲೇನಹಳ್ಳಿ ರೈತ ಮಂಜಣ್ಣ ಎನ್ನುವವರು ಸ್ವತಃ ರಸ್ತೆ ಕಾಮಗಾರಿ ಗುಣಮಟ್ಟ ಪರೀಕ್ಷಿಸಿದ್ದು, ರಸ್ತೆಗೆ ಅಂಟಿಕೊಂಡಿರಬೇಕಾದ ಡಾಂಬಾರು, ತರಗೆಲೆಯಂತೆ ಕೈಗೆ ಸಿಗುತ್ತಿರುವುದನ್ನು ಕಂಡಿದೆ. ನಾಲ್ಕೂ ಮುಕ್ಕಾಲು ಕೋಟಿ ರೂಪಾಯಿ ವೆಚ್ಚದ ಕಳಪೆ ಕಾಮಗಾರಿ ಕುರಿತು ಸಂಬಂಧಪಟ್ಟ ಅಧಿಕಾರಿ ಗಮನಕ್ಕೆ ತಂದಾಗ, ಕಳಪೆ ಕಾಮಗಾರಿ ನಡೆದಿರುವುದನ್ನು ಒಪ್ಪಿಕೊಂಡಿರುವ ಇಂಜಿನಿಯರ್ ಇದುವರೆಗೂ ಸೂಕ್ತ ಕ್ರಮಕ್ಕೆ ಮುಂದಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ರಸ್ತೆ ನಿರ್ಮಾಣಕ್ಕೆ ಅನುದಾನ ಸಿಗುವುದೆ ದುಸ್ತರವಾಗಿರುವಾಗ, ಲಭ್ಯವಾಗಿರುವ ಅನುದಾನದಲ್ಲಿ ಉತ್ತಮ ರಸ್ತೆ ನಿರ್ಮಿಸುವುದು ಬಿಟ್ಟು, ಕಳಪೆ ಕಾಮಗಾರಿ ಮಾಡುವ ಮೂಲಕ ಸಾರ್ವಜನಿಕರ ತೆರಿಗೆ ಹಣದ ಲೂಟಿ ಹೊಡೆಯಲಾಗುತ್ತಿದೆ. ಕೂಡಲೇ ಹೊಸ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ವಹಿಸಬೇಕು.
    ಕಸವನಹಳ್ಳಿ ಗ್ರಾಮಸ್ಥರು

    ತಿಪಟೂರು-ತುರುವೇಕೆರೆ ರಸ್ತೆಯಲ್ಲಿ ಬರುವ ಕೈದಾಳ ಗೇಟ್‌ನಿಂದ ಚಿಗ್ಗಾವಿವರೆಗಿನ ಡಾಂಬಾರು ರಸ್ತೆ ಕಳಪೆಯಿಂದ ಕೂಡಿದೆ ಎಂದು ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ, ಈಗ, ಅದಕ್ಕಿಂತಲೂ ಕಳಪೆ ರಸ್ತೆ, ಕಸವನಹಳ್ಳಿಯಿಂದ ಹುಲ್ಲೇನಹಳ್ಳಿ ಮಾರ್ಗದ ಎಂಡಿ.ಆರ್.ರಸ್ತೆಗೆ ಸಂಪರ್ಕ ಕಲ್ಪಿಸುವ ಡಾಂಬಾರು ರಸ್ತೆ ನಿರ್ಮಾಣವಾಗುತ್ತಿದ್ದು, ಕಾಮಗಾರಿಯಾದ ತಕ್ಷಣವೇ ಕೈನಿಂದ ಗುಡಿಸುವಷ್ಟರ ಮಟ್ಟಿಗೆ ಡಾಂಬಾರು ಕಿತ್ತು ಬರುತ್ತಿದೆ. ಕೂಡಲೇ ಶಾಸಕರು ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರಗೆ ತೆರಿಗೆ ಹಣ ಹಾಳಾಗದಂತೆ ತಡೆಯಬೇಕಿದೆ.
    ರಾಜಣ್ಣ ಬಸ್ತಿಹಳ್ಳಿ

    ಕಳಪೆ ಕಾಮಗಾರಿ ಗಮನಕ್ಕೆ ಬಂದಿದೆ. ಹೊಸದಾಗಿ ನಿರ್ಮಿಸಲಾದ ರಸ್ತೆ ಪೈಕಿ 3 ಕಿಮೀ ಉದ್ದದ ರಸ್ತೆ ಉತ್ತಮವಾಗಿದೆ. ರಸ್ತೆ ನಿರ್ಮಾಣ ಸಂದರ್ಭ ವೈಬ್ರೇಟರ್ ಸಮಸ್ಯೆಯಿಂದ ಯಂತ್ರದಿಂದ ಆಯಿಲ್ ಸೋರಿಕೆಯಾದ ಪರಿಣಾಮ 2 ಕಿ.ಮೀ. ಉದ್ದದ ರಸ್ತೆಯ ಡಾಂಬಾರು ಕಿತ್ತು ಬಂದಿರುವುದು ನಿಜ. ಇನ್ನೆರೆಡು ದಿನದಲ್ಲಿ ಹೊಸದಾಗಿ 2 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗುವುದು.
    ತೇಜಮೂರ್ತಿ, ಎಇಇ ಪಿಎಂಜಿಎಸ್‌ವೈ ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts