More

    ಕಾಫಿ ನಾಡಲ್ಲಿ ರೆಡ್ ಅಲರ್ಟ್ ಘೋಷಣೆ

    ಕಾಫಿ ನಾಡಲ್ಲಿ ರೆಡ್ ಅಲರ್ಟ್ ಘೋಷಣೆ

    ಚಿಕ್ಕಮಗಳೂರು: ಕಾಫಿ ನಾಡಿನ ಮಲೆನಾಡಿನಲ್ಲಿ ಮೂರು ದಿನಗಳಿಂದ ಆಶ್ಲೇಷ ಮಳೆ ಆರ್ಭಟಿಸುತ್ತಿರುವುದರಿಂದ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಭಾರಿ ಗಾಳಿಗೆ ಮರಗಳು ಬಿದ್ದು ಮನೆಗಳು ಜಖಂಗೊಂಡಿದ್ದು, ವಿದ್ಯುತ್ ಕಂಬಗಳು ತುಂಡಾಗಿವೆ. ಮಳೆ ಇನ್ನೂ ಬಿರುಸುಗೊಳ್ಳುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.

    ಆಶ್ಲೇಷ ಮಳೆ ಪ್ರವೇಶವಾದ ಭಾನುವಾರ ರಾತ್ರಿಯಿಂದಲೇ ಮಳೆಯ ರಭಸ ಹೆಚ್ಚಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ನದಿ, ತೊರೆಗಳು ಉಕ್ಕಿ ಹರಿಯತೊಡಗಿದ್ದು, ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಿದ್ದರೆ, ಸಾಕಷ್ಟು ಕಡೆಗಳಲ್ಲಿ ಮರಗಳು ಸಹ ಧರೆಗುರುಳಿವೆ. ಸಾಕಷ್ಟು ಕಡೆಗಳಲ್ಲಿ ಜನವಸತಿಗಳಿಗೂ ಹಾನಿಯಾಗಿವೆ. ಬುಧವಾರ ಮಳೆಗಿಂತ ಗಾಳಿಯೇ ಹೆಚ್ಚಾಗಿ ಅನಾಹುತ ಉಂಟುಮಾಡಿದೆ.

    ಚಿಕ್ಕಮಗಳೂರು ತಾಲೂಕಿನಲ್ಲಿ ಸುಮಾರು 20 ಮನೆಗಳಿಗೆ ಹಾನಿಯಾಗಿವೆ. ಕಸಬಾ ಹೋಬಳಿಯಲ್ಲಿ 14 ಮನೆಗಳು, ಖಾಂಡ್ಯದಲ್ಲಿ 4 ಹಾಗೂ ಆವತಿಯಲ್ಲಿ 2 ಮನೆಗಳು ಮಳೆಗಾಳಿಯ ಹೊಡೆತಕ್ಕೆ ಸಿಲುಕಿ ಭಾಗಶಃ ಹಾನಿಗೆ ಒಳಗಾಗಿವೆ. ಆ ಮನೆಗಳಲ್ಲಿ ವಾಸವಿದ್ದವರು ಪರ್ಯಾಯ ವ್ಯವಸ್ಥೆಯ ಮೊರೆ ಹೋಗುವ ಅನಿವಾರ್ಯತೆಯಲ್ಲಿದ್ದಾರೆ.

    ಮೂಡಿಗೆರೆ, ಎನ್.ಆರ್.ಪುರ ಮತ್ತು ತರೀಕರೆ ತಾಲೂಕುಗಳಲ್ಲಿ ಬೆಳೆದ ಬಾಳೆ ಬೆಳೆಗೆ ತೀವ್ರವಾದ ಗಾಳಿಯಿಂದ ಹಾನಿಯಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರುತ್ತದೆಯೋ ಇಲ್ಲವೋ ಎಂದು ರೈತರು ಚಿಂತೆಯಲ್ಲಿದ್ದಾರೆ. ಮಳೆ ಇದೇ ರೀತಿ ಮುಂದುವರಿದರೆ ಕಾಫಿ ಉದುರುವಿಕೆ ತಲೆದೋರಬಹುದು. ಅಂತೆಯೇ ಕಾಳುಮೆಣಸು ಬೆಳೆಗೆ ಕೊಳೆರೋಗ ಬಾಧಿಸಬಹುದು. ಸಮರ್ಪಕವಾಗಿ ಬಸಿಗಾಲುವೆ ನಿರ್ವಹಣೆ ಮಾಡಿರದೆ ಇದ್ದಲ್ಲಿ ಶುಂಠಿ ಬೆಳೆ ಕೊಳೆಯುವ ಸಾಧ್ಯತೆ ಇದೆ.

    ಮುಳುಗಿದ ಹೆಬ್ಬಾಳೆ ಸೇತುವೆ: ಕಳಸ ತಾಲೂಕಿನಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಬುಧವಾರ ಮುಳುಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತ್ತು.

    ಬುಧವಾರ ಬೆಳಗಿನ ಜಾವ ನೀರು ಇಳಿಮುಖವಾದರೂ ನಂತರ ಮತ್ತೆ ಏರಿಕೆ ಕಂಡು ಸಂಜೆವರೆಗೂ ಸೇತುವೆ ಮೇಲೆ ನೀರು ಹರಿಯತು. ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಕೆಲ ಸವಾರರು ವಾಹನಗಳನ್ನು ನದಿ ದಾಟಿಸಲು ಯತ್ನಿಸಿದರು.

    ಮೂಡಿಗೆರೆ: ತಾಲೂಕಿನಲ್ಲಿ ಗಾಳಿಮಳೆ ಆರ್ಭಟ ಬುಧವಾರವೂ ಮುಂದುವರಿದಿದೆ. ಅನೇಕ ಕಡೆ ಕಾಫಿ, ಕಾಳುಮೆಣಸು, ಅಡಕೆ, ಬಾಳೆ ಮರಗಳು ಗಾಳಿ ರಭಸಕ್ಕೆ ನೆಲಕಚ್ಚಿವೆ. ಭತ್ತದ ಗದ್ದೆಗಳು ಜಲಾವೃತವಾಗಿವೆ. ಗ್ರಾಮಾಂತರ ಭಾಗದಲ್ಲಿ ಸೋಮವಾರ ರಾತ್ರಿ, ಪಟ್ಟಣದಲ್ಲಿ ಮಂಗಳವಾರ ರಾತ್ರಿಯಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

    ಮಹಲ್ಗೋಡು ಸೇತುವೆ ಮುಳುಗಡೆ: ಬಾಳೆಹೊನ್ನೂರು ಹೋಬಳಿಯಲ್ಲಿ ಆಶ್ಲೇಷ ಮಳೆ ಅಬ್ಬರ ಮೂರನೇ ದಿನವೂ ಮುಂದುವರಿದ್ದು ಒಂದು ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

    ಬಿ.ಕಣಬೂರು ಗ್ರಾಪಂ ಸೀಕೆ ಗ್ರಾಮದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಮಾಗುಂಡಿ ಸಮೀಪದ ಕಳಸ-ಹೊರನಾಡು ರಸ್ತೆಯ ಮಹಲ್ಗೋಡು ಸೇತುವೆ ಮೇಲೆ ಬುಧವಾರ ಬೆಳಗ್ಗೆ ನೀರು ಉಕ್ಕಿ ಹರಿದಿದ್ದರಿಂದ ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

    ಜನಜೀವನ ಅಸ್ತವ್ಯಸ್ತ: ಕೊಪ್ಪ ತಾಲೂಕಿನಲ್ಲಿ ಆಶ್ಲೇಷ ಮಳೆ ಆರ್ಭಟ ಮುಂದುವರಿದಿದ್ದು, ಮರಗಳು ಉರುಳಿ, ಗುಡ್ಡ ಕುಸಿದು ಮನೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts