More

    ನದಿ ತೀರ ನಿವಾಸಿಗಳಿಗೆ ಜಲಭಯ

    ಚಿಕ್ಕೋಡಿ: ಮಹಾರಾಷ್ಟ್ರದ ಪಶ್ವಿಮ ಘಟ್ಟ ಪ್ರದೇಶದಲ್ಲಿ ಹಾಗೂ ಚಿಕ್ಕೋಡಿ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿ ತೀರದಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ. ಹೀಗಾಗಿ ನದಿ ತೀರದ ನಿವಾಸಿಗಳಿಗೆ ‘ಜಲಭಯ’ ಕಾಡತೊಡಗಿದೆ.

    ಕೃಷ್ಣಾ ನದಿಯಲ್ಲಿ ಗುರುವಾರ ಬೆಳಗ್ಗೆ ನೀರಿನ ಹರಿವು 9 ಅಡಿಯಷ್ಟು ಏರಿಕೆ ಕಂಡು ಬಂದಿದೆ. ಹೀಗಾಗಿ ಉಪನದಿಗಳು ಉಕ್ಕಿ ಹರಿಯುತ್ತಿದ್ದು ದೂಧಗಂಗಾ, ವೇದಗಂಗಾ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳ ಹಂತದ 7 ಸೇತುವೆಗಳು ಜಲಾವೃತಗೊಂಡಿವೆ.

    ಬ್ಯಾರೇಜ್‌ಗಳಿಂದ ನೀರು ಹೊರಕ್ಕೆ: ಮಹಾರಾಷ್ಟ್ರದ ಯಾವುದೇ ಜಲಾಶಯಗಳಿಂದ ಇನ್ನೂ ನೀರು ಹೊರಬಿಟ್ಟಿಲ್ಲ. ಆದರೂ ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿರುವುದರಿಂದ ನದಿ ನೀರಿನ ಮಟ್ಟದಲ್ಲಿ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ರಾಜಾಪುರ ಬ್ಯಾರೇಜ್‌ನಿಂದ 1 ಲಕ್ಷ 2 ಸಾವಿರ ಕ್ಯೂಸೆಕ್, ದೂಧಗಂಗಾ ನದಿಯಿಂದ 29,920 ಕ್ಯೂಸೆಕ್ ನೀರು ಸೇರಿ ಕೃಷ್ಣಾ ನದಿಗೆ 1,31,920 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 87,500 ಕ್ಯೂಸೆಕ್, ಆಲಮಟ್ಟಿ ಜಲಾಶಯದಿಂದ 31,922 ನೀರು ಹೊರ ಬಿಡಲಾಗುತ್ತಿದೆ.

    ಪ್ರವಾಹ ಭೀತಿ: ಕೃಷ್ಣಾ ನದಿಗೆ ಯಡೂರ ಬಳಿ ಅಡ್ಡಲಾಗಿ ನಿರ್ಮಿಸಲಾಗಿರುವ ಯಡೂರ-ಕಲ್ಲೋಳ, ದೂಧಗಂಗಾ ನದಿಗೆ ಮಲಿಕವಾಡ ಗ್ರಾಮದ ಬಳಿ ನಿರ್ಮಿಸಲಾಗಿರುವ ಮಲಿಕವಾಡ-ದತ್ತವಾಡ ಸೇತುವೆ ಮತ್ತು ವೇದಗಂಗಾ ನದಿಗೆ ಅಡ್ಡಲಾಗಿರುವ ಸಿದ್ನಾಳ-ಹುನ್ನರಗಿ, ಕಾರದಗಾ- ಭೋಜ, ಬೋಜವಾಡಿ- ಕುನ್ನೂರ, ಜತ್ರಾಟ-ಬಿವಶಿ, ಸಿದ್ನಾಳ-ಅಕ್ಕೋಳ ಸೇರಿದಂತೆ ಕೆಳಹಂತದ 7 ಸೇತುವೆಗಳು ಜಲಾವೃತಗೊಂಡಿದ್ದು, ಎಲ್ಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ನದಿ ತೀರದ ಜನರಿಗೆ ಮತ್ತೆ ಪ್ರವಾಹ ಭೀತಿ ಆವರಿಸಿದೆ.

    ಮಳೆ ವಿವರ: ಚಿಕ್ಕೋಡಿ-64.4 ಮಿ.ಮೀ., ಸದಲಗಾ-88.4 ಮಿ.ಮೀ., ಅಂಕಲಿ- 48.2 ಮಿ.ಮೀ., ಜೋಡಟ್ಟಿ- 30.4 ಮಿ.ಮೀ., ನಾಗರಮುನ್ನೋಳಿ-35.6 ಮಿ.ಮೀ.ಮಳೆಯಾಗಿದೆ. ನದಿ ತೀರಗಳ ಜನರು ಹಾಗೂ ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ತಾಲೂಕಾಡಳಿತ ಸೂಚನೆ ನೀಡಿದೆ. ಅಲ್ಲದೆ, ತಾಲೂಕು ಆಡಳಿತ ನದಿ ತೀರದಲ್ಲಿಯೇ ಮೊಕ್ಕಾಂ ಹೂಡಿದ್ದು, ಎಚ್ಚರದಿಂದ ಇರುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts