More

    ರಸ್ತೆ ಹುಡುಕಲು ಪರದಾಡಿದ ಸವಾರರು

    ಭಟ್ಕಳ: ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಗುರುವಾರವೂ ವರುಣನ ಆರ್ಭಟ ಮುಂದುವರಿದಿದೆ. ಬೆಳಗ್ಗೆ ಸುರಿದ ಧಾರಾಕಾರ ಮಳೆಯಿಂದಾಗಿ ಬಹುತೇಕ ವಾಹನ ಸವಾರರು ರಸ್ತೆ ಹುಡುಕಲು ಪರದಾಡಿದರು.

    ಸೋಮವಾರ ಮತ್ತು ಮಂಗಳವಾರದ ನಂತರ ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಧಾರಾಕಾರ ಮಳೆ ಸುರಿದು, ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿ ಮತ್ತೆ ಕೆರೆಯಾಗಿ ಮಾರ್ಪಾಡಾಯಿತು. ವಾಹನ ಸವಾರರಿಗೆ ರಸ್ತೆ ಹುಡುಕಲು ಸಾಧ್ಯವಾಗದೆ ಕೆಲ ವಾಹನಗಳು ಚರಂಡಿಗೆ ಇಳಿದವು.

    ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿರುವಂತೆ ಸ್ಥಳಕ್ಕೆ ಆಗಮಿಸಿದ ಕೆಲ ಯುವಕರು ವಾಹನ ಸವಾರರಿಗೆ ಮಾರ್ಗ ತೋರಿಸುವ ಕಾರ್ಯ ಮಾಡಿದರು. ಪಾದಚಾರಿಗಳು, ಕೂಲಿ ಕಾರ್ಮಿಕರು ರಸ್ತೆ ದಾಟಲು ಸಾಧ್ಯವಾಗದೆ ತೊಂದರೆ ಅನುಭವಿಸಿದರು. ಇದೇ ರೀತಿ ಬಿಟ್ಟುಬಿಡದೇ ನಿರಂತರವಾಗಿ ಮಳೆ ಸುರಿಯುತ್ತಿದ್ದರೆ ಭಟ್ಕಳ ಪಟ್ಟಣವೇ ಮುಳುಗಿ ಹೋಗುವ ಅಪಾಯವಿದೆ.

    ಶಂಶುದ್ದೀನ್ ವೃತ್ತದ ಹೆದ್ದಾರಿಯಲ್ಲಿ ನೀರು ಸಂಗ್ರಹಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದ್ದು, ದೂರದ ಪ್ರಯಾಣಿಕರ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸಿದರು. ಮಳೆಗಾಲದ ಪೂರ್ವದಲ್ಲೇ ಸರಾಗವಾಗಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳದ ಐಆರ್‌ಬಿ ಮತ್ತು ಪುರಸಭೆ ಅಧಿಕಾರಿಗಳು ಈ ಸಮಸ್ಯೆಗೆ ಕಾರಣರಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಂದಿಷ್ಟು ಸ್ಥಳೀಯರು ನಮಗೆ ಹೆದ್ದಾರಿಯಲ್ಲಿ ತೆರಳಲು ದೋಣಿಯ ವ್ಯವಸ್ಥೆ ಕಲ್ಪಿಸಿ. ಈ ರಸ್ತೆ ಮೇಲೆ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಕನಿಷ್ಠ ದೋಣಿಯ ವ್ಯವಸ್ಥೆಯನ್ನಾದರೂ ಕಲ್ಪಿಸಿ ಕೊಡಿ. ಇಲ್ಲವಾದರೆ ಬೆಳಗ್ಗೆ ಕೆಲಸಕ್ಕೆ ತೆರಳುವವರು ತೆರಳಲಾಗದೆ ರಜೆ ಮಾಡಬೇಕಾಗುತ್ತದೆ ಎಂದು ತಾಲೂಕಾಡಳಿತವನ್ನು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts