More

    ನಷ್ಟದಲ್ಲಿ ಭತ್ತ ಬೆಳೆಗಾರರು

    ಸೋಮವಾರಪೇಟೆ: ಭತ್ತದ ಕಣಜವೆಂದೇ ಪ್ರಖ್ಯಾತವಾಗಿದ್ದ ಸೋಮವಾರಪೇಟೆ ತಾಲೂಕಿನಲ್ಲಿ ಭತ್ತ ಬೆಳೆಗಾರರು ನಷ್ಟದ ಹಾದಿಯಲ್ಲಿದ್ದಾರೆ.

    ಮುಂಗಾರು ವಿಳಂಬದಿಂದ ವಾಡಿಕೆ ಮಳೆ ಶೇ.50ರಷ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ಭತ್ತ ಇಳುವರಿಯೂ ಶೇ.50ರಷ್ಟು ಕಡಿಮೆಯಾಗಿದೆ. ಗ್ರಾಮೀಣ ಭಾಗದಲ್ಲಿ ಮಳೆಯ ಕೊರತೆಯಿಂದ ಭತ್ತದ ಪೈರುಗಳ ಬೆಳವಣಿಗೆ ಕುಂಠಿತವಾಗಿ, ಭತ್ತ ಜೊಳ್ಳಾಗಿರುವುದನ್ನು ಕಂಡು ಕೃಷಿಕರು ಆತಂಕಗೊಂಡಿದ್ದಾರೆ.

    ಜುಲೈ ತಿಂಗಳಿನಲ್ಲಿ ಒಂದು ವಾರ ಮಳೆ ಸುರಿದಿದ್ದನ್ನು ಹೊರತುಪಡಿಸಿದರೆ, ನಂತರ ಸರಿಯಾಗಿ ಮಳೆಯಾಗಲಿಲ್ಲ. ಕೊಳವೆ ಬಾವಿ, ಕೆರೆ, ಹೊಂಡಗಳ ನೀರನ್ನು ಉಪಯೋಗಿಸಿಕೊಂಡು ಬಹುತೇಕ ಕೃಷಿಕರು ಭತ್ತ ನಾಟಿ ಕಾರ್ಯ ಮುಗಿಸಿದ್ದರು. ನಂತರ ಮಳೆಯಿಲ್ಲದೆ ಭತ್ತದ ಕಡೆ ಆಸಕ್ತಿ ಕಳೆದುಕೊಂಡರು. ಬರದ ನಡುವೆಯೂ ಬೆಳೆದಿದ್ದ ಭತ್ತದ ಬೆಳೆ ಹೂ ಬಿಡುವ ಸಮಯ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಅಕಾಲಿಕ ಮಳೆ ಸುರಿದು ಬೆಳೆ ಹಾನಿಯಾಯಿತು. ಒಟ್ಟಾರೆ ಪ್ರಸಕ್ತ ವರ್ಷ ಭತ್ತ ಬೆಳೆಗಾರರಿಗೆ ಕರಾಳವಾಗಿದೆ. ಸಿಕ್ಕಷ್ಟು ಫಸಲು ಸಿಗಲಿ ಎಂದು ಭತ್ತ ಕೊಯ್ಲು ಪ್ರಾರಂಭಿಸಿದ್ದಾರೆ.

    ಕಾಡುಪ್ರಾಣಿಗಳ ಹಾವಳಿ: ಕೂತಿ, ಯಡದಂಟೆ, ಹರಪಳ್ಳಿ, ಸಿಂಗನಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳು ಭತ್ತದ ಗದ್ದೆಗೆ ನುಗ್ಗಿ ಹಾನಿ ಮಾಡಿವೆ. ಯಡವಾರೆ, ಸಜ್ಜಳ್ಳಿ, ಐಗೂರು, ಸಂಪಿಗೆಕೊಲ್ಲಿ ಗ್ರಾಮಗಳಲ್ಲಿ ಕಾಡಾನೆಗಳು ಮತ್ತು ಕಾಡುದನಗಳು ಭತ್ತದ ಗದ್ದೆಗೆ ನುಗ್ಗಿ ತಿಂದು, ತುಳಿದು ಹಾನಿಪಡಿಸಿವೆ.

    ಸೂಕ್ತ ಪರಿಹಾರವಿಲ್ಲ: ಫಸಲು ಹಾನಿ ಸಂಭವಿಸಿದರೂ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುವುದಿಲ್ಲ. ಫಸಲು ಹಾನಿಯ ಬಗ್ಗೆ ಕೃಷಿ ಇಲಾಖೆ ಸಮೀಕ್ಷೆ ಮಾಡುತ್ತಿಲ್ಲ. ಗದ್ದೆಯಲ್ಲಿ ಫಸಲು ಹಾನಿಯ ಅಂದಾಜು ಸಿಗುವುದಿಲ್ಲ. ಭತ್ತ ಕೊಯ್ಲು ಮಾಡಿ, ಸಂಗ್ರಹ ಮಾಡುವ ಸಂದರ್ಭ ಕೃಷಿಕನಿಗೆ ಮಾತ್ರ ಫಸಲು ಹಾನಿ ಬಗ್ಗೆ ತಿಳಿಯುತ್ತದೆ. ನಷ್ಟವನ್ನು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮನವರಿಗೆ ಮಾಡಿಕೊಡಲು ಸಾಧ್ಯವಿಲ್ಲ. ಕಂಪ್ಯೂಟರ್ ಮಾಹಿತಿ ತೆಗೆದುಕೊಳ್ಳುವುದಿಲ್ಲ ಎಂದು ಸಿಬ್ಬಂದಿ ನೆಪ ಹೇಳುತ್ತಾರೆ ಎಂಬುದು ಯಡೂರು ಗ್ರಾಮದ ರೈತ ಎ.ಆರ್.ಕುಶಾಲಪ್ಪ ಅವರ ನೋವಿನ ನುಡಿ.

    ತಾಲೂಕಿನಲ್ಲಿ ಭತ್ತ ಹಾಗೂ ಜೋಳ ಸೇರಿ ಅಂದಾಜು 1.62 ಕೋಟಿ ರೂ. ಬೆಳೆ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಬಾಣವಾರ, ಅರೆಯೂರು, ಗಣಗೂರು, ಸಂಗಯ್ಯನಪುರ, ಅಬ್ಬೂರುಕಟ್ಟೆ, ಅರೆಯೂರು, ಹೊಸಳ್ಳಿ, ಎಲಕನೂರು, ನೇರಳೆ, ಆಲೂರು, ಸಿದ್ದಲಿಂಗಪುರದಲ್ಲಿ ಅತಿ ಹೆಚ್ಚು ಜೋಳ ಬೆಳೆಯುತ್ತಾರೆ. ವಾಡಿಕೆಗಿಂತ ಅರ್ಧದಷ್ಟು ಮಾತ್ರ ಮಳೆ ಕೊರತೆ ಹಾಗೂ ಅಕಾಲಿಕ ಮಳೆಯಿಂದ ಜೋಳದ ಬೆಳೆ ನಾಶವಾಗಿದೆ.

    ಕಾರ್ಮಿಕರ ಸಮಸ್ಯೆ: ಕಳೆದ ಒಂದು ತಿಂಗಳಿನಿಂದ ಅಕಾಲಿಕ ಮಳೆ ಹಾಗೂ ಮೋಡದ ವಾತಾವರಣದಿಂದ ಭತ್ತ, ಕಾಫಿ ಕೊಯ್ಲು ವಿಳಂಬ ಮಾಡಲಾಗಿತ್ತು. ಕಳೆದ ಒಂದು ವಾರದಿಂದ ಬಿಸಿಲಿನ ವಾತಾವರಣವಿದ್ದು, ಕಾಫಿ ಕೊಯ್ಲು ಭರದಿಂದ ಸಾಗಿದೆ. ಇದರಿಂದ, ಭತ್ತ ಕೊಯ್ಲಿಗೆ ಕಾರ್ಮಿಕರ ಕೊರತೆ ಎದುರಾಗಿದೆ.
    ಹಿಂದಿನ ವರ್ಷಗಳಲ್ಲಿ ಭತ್ತ ಕೊಯ್ಲಿನ ಸಂದರ್ಭದಲ್ಲಿ ಬಯಲು ಸೀಮೆಯಿಂದ ಕಾರ್ಮಿಕರ ತಂಡಗಳು ಗ್ರಾಮಗಳಿಗೆ ಬಂದು ತಿಂಗಳುಗಟ್ಟಲೆ ಇದ್ದು, ಭತ್ತ ಕೆಲಸ ಮುಗಿಸಿ ಹೋಗುತ್ತಿದ್ದರು. ಈ ಬಾರಿ ಕಾರ್ಮಿಕರ ಕೊರತೆ ಉಂಟಾಗಿದೆ.

    ಅಕಾಲಿಕ ಮಳೆಯಿಂದ ಬೇಸತ್ತ ಕೃಷಿಕರು ಭತ್ತ ಬೆಳೆಯಲು ಹಿಂದೇಟು ಹಾಕಿದ ಪರಿಣಾಮ, ಕಾರ್ಮಿಕರಿಗೆ ಸಾಕಾಗುಷ್ಟು ಕೂಲಿ ಸಿಗುವುದಿಲ್ಲ ಎಂದು ತಿಳಿದು ಕಳೆದ ನಾಲ್ಕೈದು ವರ್ಷಗಳಿಂದ ಸಾಕಷ್ಟು ಸಂಖ್ಯೆಯ ಕಾರ್ಮಿಕರು ಬರುತ್ತಿಲ್ಲ. ಈ ಕಾರಣದಿಂದ ಸ್ಥಳೀಯ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಬೇರೆ ದಾರಿ ಇಲ್ಲದೆ ಬೆಳೆಗಾರರು ಸ್ಥಳೀಯರಿಗೆ ಅಧಿಕ ಕೂಲಿಯನ್ನು ಕೊಡಲೇಬೇಕಾದ ಅನಿವಾರ್ಯತೆ ಒದಗಿದೆ. ಗದ್ದೆ ಬಯಲಿಗೆ ರಸ್ತೆ ಸಂಪರ್ಕ ಇದ್ದವರು, ಟ್ಯಾಕ್ಟರ್ ಮೂಲಕ ಬೆಳೆಯನ್ನು ಕಣಕ್ಕೆ ಸಾಗಿಸುತ್ತಿದ್ದಾರೆ. ರಸ್ತೆ ಸಂಪರ್ಕವಿಲ್ಲದವರು ತಲೆಹೊರೆಯಲ್ಲೇ ಕಣಕ್ಕೆ ಸಾಗಿಸಬೇಕಾಗಿದೆ. ಒಟ್ಟಿನಲ್ಲಿ ಭತ್ತ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ಇಲ್ಲ ಎಂಬುದು ಕೃಷಿಕರು ದೂರು.

    2023-24ನೇ ಸಾಲಿನಲ್ಲಿ ಉದ್ದೇಶಿತ 9,500 ಹೆಕ್ಟೇರ್ ಪೈಕಿ 7,195 ಹೆಕ್ಟೇರ್‌ನಲ್ಲಿ ಮಾತ್ರ ಭತ್ತ ನಾಟಿ ಮಾಡಲಾಗಿದೆ. ಈ ಸಾಲಿನಲ್ಲಿ ನಿರೀಕ್ಷಿತ 2011 ಮಿ.ಮೀ ಮಳೆ ಬದಲಾಗಿ ಕೇವಲ 1017 ಮಿ.ಮೀ ಮಳೆಯಾಗುವ ಮೂಲಕ ಶೇ 50ರಷ್ಟು ಮಳೆ ಕೊರತೆ ಕಂಡು ಬಂದಿದೆ. ಭತ್ತದ ನಾಟಿ ಕಾರ್ಯ ವಿಳಂಬ, ಬೆಳವಣಿಗೆ ಹಂತದಲ್ಲಿ ಮಳೆ ಹಾಗೂ ತೇವಾಂಶದ ಕೊರತೆಯಿಂದ ಇಳುವರಿ ಕಡಿಮೆಯಾಗಿದೆ. ಸೋಮವಾರಪೇಟೆ ವ್ಯಾಪ್ತಿಯ ಶನಿವಾರಸಂತೆ, ಹೆಬ್ಬಾಲೆ, ಶಿರಂಗಾಲ, ಗರ್ವಾಲೆ, ಸೂರ್ಲಬ್ಬಿ, ಹುಲುಸೆ, ಕೂಡಿಗೆಯಲ್ಲಿ ಹೆಚ್ಚಿನ ಸಮಸ್ಯೆ ಕಂಡುಬಂದಿದೆ.
    ಯಾದವ ಬಾಬು
    ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಸೋಮವಾರಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts