More

    ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಿರಿ, ತಾಲೂಕು ಕಚೇರಿ ಎದುರು ಕಾರ್ಮಿಕರ ಪ್ರತಿಭಟನೆ, ದೆಹಲಿಯ ರೈತ ಹೋರಾಟಕ್ಕೆ ಸಿಐಟಿಯು ಬೆಂಬಲ

    ನೆಲಮಂಗಲ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ತಾಲೂಕು ಸಿಐಟಿಯು ಕಾರ್ಮಿಕರು ಪ್ರತಿಭಟನೆ ನಡೆಸಿದರು.

    ನಗರದ ತಾಲೂಕು ಕಚೇರಿ ಎದುರು ಶುಕ್ರವಾರ ಸಮಾವೇಶಗೊಂಡ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸಿಐಟಿಯು ತಾಲೂಕು ಸಮಿತಿ ಅಧ್ಯಕ್ಷ ತಿರುಮಲಾಚಾರಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

    ನಂತರ ಮಾತನಾಡಿದ ಅವರು, ದೇಶದ ಲಕ್ಷಾಂತರ ಸಂಖ್ಯೆಯ ರೈತರು ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆ ಜಾರಿಗೊಳಿಸಿರುವುದನ್ನು ವಿರೋಧಿಸುತ್ತಿದ್ದಾರೆ. 45 ದಿನಗಳಿಂದ ರೈತ ಸಂಘಟನೆಗಳು ದೆಹಲಿಯಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ತಮ್ಮ ಕುಟುಂಬಗಳನ್ನು ತೊರೆದು ಬೀದಿಗಿಳಿದು, ಚಳಿ, ಗಾಳಿ ಮಳೆ, ಬಿಸಿಲು ಲೆಕ್ಕಿಸದೇ ಹೋರಾಟ ಮಾಡುತ್ತಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ 40ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೂ ಅವರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶದ ನೂರಾರು ಕಾರ್ಮಿಕ ಸಂಘಟನೆಗಳು ನವೆಂಬರ್ 26ರಂದು ಪ್ರತಿಭಟಿಸಿದ್ದವು. ಅಂದಾಜು 20 ಕೋಟಿ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಆದರೂ, ತಿದ್ದುಪಡಿ ಕೈಬಿಡದೆ ಕೇಂದ್ರ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘಟನೆ ರಾಜ್ಯ ಸಮಿತಿ ನಿರ್ದೇಶನದಂತೆ ಬೃಹತ್ ಪ್ರತಿಭಟನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಸಿ. ನರಸಿಂಹಮೂರ್ತಿ ತಿಳಿಸಿದರು.

    ಕಾರ್ಯದರ್ಶಿ ವೀರಣ್ಣ, ತಾಲೂಕು ಸಮಿತಿ ಖಜಾಂಚಿ ಮೊಹಮ್ಮದ್ ಸಾದಿಕ್, ಕಾರ್ಮಿಕ ಮುಖಂಡರಾದ ಮಲ್ಲೇಶ್, ಸುರೇಶ್, ವಿನಯ್, ಹರಿನಾಥ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts