More

    ಜಡಿಗೇನಹಳ್ಳಿಯಲ್ಲಿ ಕಂದಾಯ ಸಚಿವ ಗ್ರಾಮವಾಸ್ತವ್ಯ; 21 ರಂದು ಡಿಸಿ ನಡೆ ಹಳ್ಳಿಯ ಕಡೆ

    ಹೊಸಕೋಟೆ: ಸಾರ್ವಜನಿಕರ ಕುಂದುಕೊರತೆ ಆಲಿಸಿ ಬಗೆಹರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮವಾದ ಜಿಲ್ಲಾಧಿಕಾರಿ ನಡೆ-ಹಳ್ಳಿಯ ಕಡೆ ಕಾರ್ಯಕ್ರಮವನ್ನು ಜ.21 ರಂದು ಹೊಸಕೋಟೆ ತಾಲೂಕು ಜಡಿಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದು,  ಕಂದಾಯ ಸಚಿವ ಆರ್.ಅಶೋಕ್ ಭಾಗಿಯಾಗಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ ಎಂದು ಡಿಸಿ ಆರ್.ಲತಾ ತಿಳಿಸಿದರು.

    ಜಡಿಗೇನಹಳ್ಳಿಯಲ್ಲಿ ಮಂಗಳವಾರ ಕಾರ್ಯಕ್ರಮ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

    ಅಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸಚಿವರಿಗೆ ಗ್ರಾಮಸ್ಥರಿಂದ ಸ್ವಾಗತ, ಗಿಡ ನೆಡುವುದು, ಮಳಿಗೆಗಳ ಉದ್ಘಾಟನೆ, ಆರೋಗ್ಯ ಶಿಬಿರ, ವೇದಿಕೆ ಕಾರ್ಯಕ್ರಮ, ಸೌಲಭ್ಯಗಳ ವಿತರಣೆ, ಸಚಿವರಿಂದ ಅಹವಾಲು ಸ್ವೀಕಾರ, ಗ್ರಾಮ ಸಭೆ, ವಸತಿ ನಿಲಯದಲ್ಲಿ ಸಚಿವರ ವಾಸ್ತವ್ಯ, ಜ.22ರ ಭಾನುವಾರ ಸಚಿವರು ದಲಿತರ ಮನೆಗಳಿಗೆ ತೆರಳಿ ಉಪಾಹಾರ ಸೇವಿಸಲಿದ್ದಾರೆ ಎಂದು ತಿಳಿಸಿದರು.

    ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆ ಜಂಟಿಯಾಗಿ ಸರ್ವೇ ನಡೆಸಿ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಬೇಕು, ನಿವೇಶನರಹಿತರಿಗೆ ನಿವೇಶನ ಒದಗಿಸಲು ಭೂಮಿ ಗುರುತಿಸಬೇಕು. ಆಶ್ರಯ ಯೋಜನೆಗೆ, ಸ್ಮಶಾನಕ್ಕೆ ಭೂಮಿ ಮಂಜೂರು, ಹದ್ದುಬಸ್ತು ಪೋಡಿ, ಪಹಣಿ ಕಾಲಂ 3 ಮತ್ತು 9ಕ್ಕೆ ವ್ಯತ್ಯಾಸ ಸರಿಪಡಿಸುವ ಬಗ್ಗೆ ಆದೇಶ ಹೊರಡಿಸುವುದು, ಗ್ರಾಮದಲ್ಲಿ ಪೌತಿ ಹೊಂದಿದ ಖಾತೆದಾರರನ್ನು ಗುರುತಿಸಿ ಪೌತಿ ಖಾತೆ ಬದಲಾವಣೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

    ಗ್ರಾಮದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಪಿಂಚಣಿ ಮಂಜೂರು ಮಾಡಬೇಕು. ಅಂಗವಿಕಲರಿಗೆ ಸಾಧನ-ಸಲಕರಣೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಅಂಗವಿಕಲರ ಕಲ್ಯಾಣಾಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿ, ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟಣೆ ಕಾರ್ಯಕ್ರಮಗಳ ಮಾಹಿತಿ ಹಂಚಿಕೊಂಡರು.

    ಪೂರ್ವ ತಯಾರಿ ಅವಶ್ಯ: ಸಮಸ್ಯೆಗಳ ಬಗ್ಗೆ ಅಹವಾಲು ಸ್ವೀಕರಿಸುವ ಕಾರ್ಯ ನಡೆಯಲಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಕೌಂಟರ್ ತೆರೆದು ಅರ್ಜಿ ಸ್ವೀಕಾರಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳಬೇಕು, ಕಂದಾಯ ಇಲಾಖೆ ಸೇವೆಗಳೊಂದಿಗೆ ವಿವಿಧ ಇಲಾಖೆಗಳ ಸೇವೆಗಳನ್ನು ಜನರಿಗೆ ಒದಗಿಸಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಂದಾಜು ಇಪ್ಪತ್ತು ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಸವಲತ್ತು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಮಾಹಿತಿ ನೀಡಿದರು.

    ಶುಚಿತ್ವ ಕಾಪಾಡಿಕೊಳ್ಳಬೇಕು: ರಾತ್ರಿ ಊಟದ ನಂತರ ಹಾಸ್ಟೆಲ್‌ನಲ್ಲಿ ಸಚಿವರು, ಅಧಿಕಾರಿಗಳು ವಾಸ್ತವ್ಯ ಹೂಡಲಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್‌ನಲ್ಲಿ ಶುಚಿತ್ವ ಸೇರಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮಗಳಲ್ಲಿ ಸ್ವಚ್ಛತಾ ಕ್ರಮಗಳ ಬಗ್ಗೆ ಮುಂಜಾಗ್ರತೆ ವಹಿಸಿ, ಸಂಬಂಧಪಟ್ಟ ಇಲಾಖೆಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಿಇಒ ಕೆ.ರೇವಣ್ಣಪ್ಪ ತಿಳಿಸಿದರು.

    ಪ್ರತಿ ಗ್ರಾಮಗಳನ್ನು ಸಂಪೂರ್ಣ ಸ್ವಾವಲಂಬಿ ಮತ್ತು ಮಾದರಿ ಗ್ರಾಮಗಳನ್ನಾಗಿಸುವ ರೂಪಿಸುವ ವಿನೂತನ ಕಾರ್ಯಕ್ರಮದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಗ್ರಾಮಗಳಿಗೆ ಭೇಟಿ ನೀಡುವುದರಿಂದ, ಗ್ರಾಮಗಳಲ್ಲಿನ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

    ಹೊಸಕೋಟೆ ತಾಲೂಕು ಜಡಿಗೇನಹಳ್ಳಿಯಲ್ಲಿ ಡಿಸಿ ನಡಿಗೆ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯಲ್ಲಿ ಡಿಸಿ ಆರ್.ಲತಾ ಮಾತನಾಡಿದರು. ಜಿಪಂ ಸಿಇಒ ಕೆ.ರೇವಣಪ್ಪ, ಉಪ ಕಾರ್ಯದರ್ಶಿ ಡಾ.ನಾಗರಾಜ, ತಹಸೀಲ್ದಾರ್ ಮಹೇಶ್‌ಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts