More

    ಆಮಿಷಗಳಿಗೆ ಮತದಾರರನ್ನು ಬಲಿಕೊಡಬಾರದು, ಶಾಸಕ ಶರತ್‌ಬಚ್ಚೇಗೌಡ ಕಿವಿಮಾತು

    ವಿಜಯವಾಣಿ ಸುದ್ದಿಜಾಲ ಹೊಸಕೋಟೆ
    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಚುನಾವಣೆಗಳು ಸಂವಿಧಾನದ ಚೌಕಟ್ಟಿನಲ್ಲಿ ನಿರ್ಭಯವಾಗಿ, ಪಾರದರ್ಶಕವಾಗಿ ನಡೆಯಬೇಕೇ ಹೊರತು ಮತದಾರರಿಗೆ ಹಣ ಅಥವಾ ಆಮಿಷಗಳನ್ನೊಡ್ಡಿ ಬಲಿಪಶು ಮಾಡಬಾರದು ಎಂದು ಶಾಸಕ ಶರತ್‌ಬಚ್ಚೇಗೌಡ ಹೇಳಿದರು.
    ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಬೋಧನಹೊಸಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರ್ಪಡೆಯಾದ ಮುಖಂಡರಿಗೆ ಸ್ವಾಗತಕೋರಿ ಮಾತನಾಡಿದರು.
    ಸುಳ್ಳು ಆಶ್ವಾಸನೆ, ಬೆದರಿಕೆ ಮೂಲಕ ಬಲವಂತವಾಗಿ ಪಕ್ಷಗಳಿಗೆ ಸೆಳೆಯುವ ತಂತ್ರ ಬಹಳ ದಿನ ನಡೆಯುವುದಿಲ್ಲ, ಜನರು ಪ್ರಜ್ಞಾವಂತರಿದ್ದಾರೆ, ಆದ್ದರಿಂದ ಪಕ್ಷ ತೊರೆದು ಬಿಜೆಪಿ ಸೇರಿದ್ದ ಹಲವರು ಮತ್ತೆ ಮರಳಿ ಗೂಡಿಗೆ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
    ಸಂಘಟನೆಗೆ ಒತ್ತು ಕೊಡಿ: ರಾಜ್ಯದಲ್ಲಿ ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಸಾಮಾನ್ಯ ಜನರ ಪರವಾದ ಕಾಂಗ್ರೆಸ್ ಬಗ್ಗೆ ಎಲ್ಲ ಕಡೆ ಒಲವಿದೆ, ಆದ್ದರಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕ್ಷೇತ್ರದಲ್ಲಿ ಮತ್ತಷ್ಟು ಸಂಘಟನೆಗೆ ಒತ್ತು ನೀಡಬೇಕು ಎಂದು ಶರತ್ ಕರೆ ನೀಡಿದರು.

    ಒಗ್ಗಟ್ಟು ಒಡೆಯುವ ಕುತಂತ್ರ: ಒಂದೇ ಕುಟುಂಬದಂತಿದ್ದ ನಮ್ಮ ಒಗ್ಗಟ್ಟು ಒಡೆಯಲು ಬಿಜೆಪಿಯ ಕೆಲವು ಮುಖಂಡರು ಸುಳ್ಳು ಆಶ್ವಾಸನೆ ನೀಡಿ ನಮ್ಮ ದಾರಿ ತಪ್ಪಿಸಿದ್ದರು ಎಂದು ಮುತ್ತಸಂದ್ರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆರ್.ಲಕ್ಷ್ಮಣ ಮೂರ್ತಿ ಹೇಳಿದರು.
    ನಮ್ಮನ್ನು ಬಲವಂತವಾಗಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಆದರೆ ಈಗ ನಮಗೆ ವಾಸ್ತವದ ಅರಿವಾಗಿದೆ, ಆದ್ದರಿಂದ ಶಾಸಕರ ಸಮ್ಮುಖದಲ್ಲಿ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದೇವೆ. ಪಕ್ಷ ನಿಷ್ಠೆಯನ್ನು ಇನ್ನು ಮುಂದೆ ಬಿಡುವುದಿಲ್ಲ ಎಂದು ಹೇಳಿದರು.
    ನಾವು ಮಾತ್ರ ಅಧಿಕಾರ ಅನುಭವಿಸಬೇಕು ಎಂಬ ಮನೋಭಾವ ನಮ್ಮಲಿಲ್ಲ, ಇದರ ಪರಿಣಾಮವಾಗಿ ಸಮ್ಮ ಸಮುದಾಯದ ಮುನ್ನಡೆಗೆ ಸಮರ್ಥರಿರುವ ಹಲವು ಮುಖಂಡರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ, ಇದಕ್ಕೆ ಬಚ್ಚೇಗೌಡರೂ ಸಹಕಾರ ಮಾಡಿಕೊಂಡೇ ಬಂದಿದ್ದಾರೆ, ಅಂಥ ನಾಯಕರ ಕುಟುಂಬಕ್ಕೆ ನಾವು ನಿಷ್ಠೆಯಿಂದಿರುತ್ತೇವೆ ಎಂದರು.
    ಸಂಸದ ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡ ವಿದ್ಯಾವಂತರು ಅಷ್ಟೇ ನಿಷ್ಠಾವಂತರಾಗಿದ್ದು, ಅವರ ಆಡಳಿತ ವೈಖರಿ, ಕಾರ್ಯಕ್ಷಮತೆ ಹಾಗೂ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳಿಂದ ನಾವೆಲ್ಲರು ಅವರ ಕುಟುಂಬದ ಅಭಿಮಾನಿಗಳಾಗಿದ್ದೇವೆ. ಆದರೆ ಹೋಬಳಿಯ ಕೆಲ ಮುಖಂಡರು ಗೊಂದಲ ಮೂಡಿಸಿ ಬಿಜೆಪಿಗೆ ಸೆಳೆದಿದ್ದರು, ಅರೆಮನಸ್ಸಿನಿಂದಲೇ ಬಿಜೆಪಿ ಸೇರಿದ್ದೇವೆ ಆದರೆ ಈಗ ಮನಸ್ಸು ತಿಳಿಯಾಗಿದೆ ಗೊಂದಲಗಳು ದೂರವಾಗಿದ್ದು, ಶಾಸಕರ ನೇತೃತ್ವದಲ್ಲಿ ಮತ್ತೆ ಮಾತೃಪಕ್ಷಕ್ಕೆ ಮರಳಿದ್ದೇವೆ ಎಂದು ಮುಖಂಡ ಮೋಟಾರ್ ರಾಜಪ್ಪ ಹೇಳಿದರು.
    ಚುನಾವಣೆ ಸಂದರ್ಭದಲ್ಲಿ ಆಮಿಷಗಳಿಗೆ ಒಳಗಾಗಿ ಅಸಮರ್ಥ ನಾಯಕನನ್ನು ಆಯ್ಕೆ ಮಾಡಿದರೆ ಮುಂದೆ ನಮ್ಮ ಮಕ್ಕಳು ಅದರ ಪರಿಣಾಮ ಎದುರಿಸಬೇಕಾಗುತ್ತದೆ, ಆದ್ದರಿಂದ ಭವಿಷ್ಯದ ದೃಷ್ಟಿಯಿಂದ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಕೆಪಿಸಿಸಿ ಸದಸ್ಯ ಲಕ್ಷ್ಣಣ್‌ಸಿಂಗ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts