More

    ಗ್ರಾಮಾಭಿವೃದ್ಧಿ ಹೊರತು ದೇಶದ ಅಭಿವೃದ್ಧಿ ಅಸಾಧ್ಯ

    ಸಿದ್ರಾಮ ಮಾಳಿ, ರೇವತಗಾಂವ

    ಮನೆ ಮುಂದೆ ಚರಂಡಿ ನೀರು, ಸೊಳ್ಳೆಗಳ ಕಾಟ, ಹಂದಿಗಳ ಹಾವಳಿ, ಕೆಟ್ಟ ವಾಸನೆ ನಡುವೆ ಬದುಕು ಸಾಗಿಸಬೇಕಾದ ಅನಿವಾರ್ಯತೆ…
    ಹೌದು, ಇದು ರೇವತಗಾಂವ ಗ್ರಾಮದ ವಾರ್ಡ್ ನಂ.3ರ ತಳವಾರ ಓಣಿಯ ದುಸ್ಥಿತಿ. ಈ ಓಣಿಯಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಇಲ್ಲಿನ ನಿವಾಸಿಗಳು ಜೀವನ ನಡೆಸುವುದು ದುಸ್ತರವಾಗಿದೆ.
    ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗ್ರಾಮದಲ್ಲಿನ ನಲ್ಲಿ ನೀರು ಹಾಗೂ ಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಮನೆ ಮುಂದೆ ಮಲಿನ ನೀರು ಸಂಗ್ರಹಗೊಂಡು ಸಾಂಕ್ರಾಮಿಕ ರೋಗಗಳ ತಾಣವಾಗಿದೆ. ಸುತ್ತಲಿನ ಮನೆಯಲ್ಲಿ ರಾತ್ರಿ ವೇಳೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ನಿವಾಸಿಗಳು ಸಂಬಂಧಪಟ್ಟ ಗ್ರಾಪಂ ಸಿಬ್ಬಂದಿಗೆ ಹಾಗೂ ಈ ಹಿಂದಿನ ವಾರ್ಡ್ ಸದಸ್ಯರು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಹೀಗೆ ನೀರು ಸಂಗ್ರಹಗೊಳ್ಳುತ್ತಿರುವುದು ವರ್ಷ ಕಳೆದರೂ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂಬುದು ವಾರ್ಡ್ ನಿವಾಸಿಗಳ ಆರೋಪ.

    ರೋಗ ರುಜಿನುಗಳು ಬರದ ಹಾಗೆ ನೋಡಿಕೊಳ್ಳುವುದು ಗ್ರಾಮ ಪಂಚಾಯಿತಿಯವರ ಕಾರ್ಯವಾಗಿದ್ದು, ಚರಂಡಿ ನೀರು ನಿಲ್ಲದ ಹಾಗೇ ಚರಂಡಿ ನಿರ್ಮಾಣ ಮಾಡಿ ನೀರು ಹರಿದು ಹೋಗುವಂತೆ ಮಾಡಬೇಕಾಗಿದೆ.
    ವೃದ್ಧರು, ಮಹಿಳೆಯರು, ಮಕ್ಕಳು ಮೂಗು ಮುಚ್ಚಿಕೊಂಡು ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿ ನಿರ್ಮಾಣ ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕೆಂದು ಮಹಿಳೆಯರು ಆಗ್ರಹಿಸಿದರು.

    ಮನೆ ಮುಂಭಾಗ ಚರಂಡಿ ನೀರು ನಿಂತಿರುವುದರಿಂದ ಗಬ್ಬು ವಾಸನೆ ಬರುತ್ತಿದೆ. ಮನೆ ಕಿಟಕಿ-ಬಾಗಿಲು ಮುಚ್ಚಿಕೊಂಡರೂ ಸೊಳ್ಳೆಗಳ ಕಾಟ ಹೇಳತೀರದಾಗಿದೆ. ಗ್ರಾಮದ ಅಭಿವೃದ್ಧಿ ಮಾಡಲಾಗದ ಸದಸ್ಯರು ನಮಗೆ ಬೇಕಾ? ಗ್ರಾಮ ಅಭಿವೃದ್ಧಿಯಾಗದ ಹೊರತು ದೇಶದ ಅಭಿವೃದ್ಧಿ ಹೇಗೆ ಸಾಧ್ಯ?. ಸಾಮಾಜಿಕ ಕಳಕಳಿ ಹೊಂದಿರುವ ಜನರ ಧ್ವನಿಗೆ ಮನ್ನಣೆ ನೀಡುವ ಪ್ರಾಮಾಣಿಕ ವ್ಯಕ್ತಿಗಳನ್ನು ಆರಿಸಿ ತರುವುದು ಸೂಕ್ತ.
    ರೇಣುಕಾ ಕೋಳಿ, ವಾರ್ಡ್ ನಿವಾಸಿ

    ವಾರ್ಡ್ ನಂ. 3ರಲ್ಲಿ ಸರಾಗವಾಗಿ ನೀರು ಹರಿಯದೆ ಒಂದೆಡೆ ಸಂಗ್ರಹವಾಗಿದೆ ಎಂಬ ದೂರು ಬಂದಿದೆ. ತಕ್ಷಣ ಸಿಬ್ಬಂದಿಯನ್ನು ಕಳುಹಿಸಿ ಸಮಸ್ಯೆ ಪರಿಹರಿಸಲು ಯತ್ನಿಸುವೆ.
    ಎಚ್.ವಿ. ರಜಪೂತ, ಪಿಡಿಒ, ರೇವತಗಾಂವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts