More

    ಮದುವೆಗೆ ಗೆಸ್ಟ್ ಲಿಸ್ಟ್, 50 ಅತಿಥಿಗಳಿಗೆ ವಿವಾಹ ಸೀಮಿತ

    ಮಂಗಳೂರು: ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಮಧ್ಯೆ ಈಗಾಗಲೇ ನಿಗದಿಯಾಗಿರುವ ಮದುವೆ ಸಮಾರಂಭಗಳನ್ನು 50 ಜನರಿಗೆ ಸೀಮಿತವಾಗಿ ಆಯೋಜಿಸಲು ಅವಕಾಶವಿದೆ. ಮದುವೆ ಮನೆಯವರು 50 ಜನರ ಹೆಸರಿನ ಪಟ್ಟಿಗೆ ಸ್ಥಳೀಯಾಡಳಿತ ಸಂಸ್ಥೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

    ಶನಿವಾರ ಹಾಗೂ ಭಾನುವಾರ ಹಲವು ಮದುವೆ ನಿಗದಿಯಾಗಿರುವ ಮಾಹಿತಿ ಇದೆ. ವಿವಾಹ ಕಾರ್ಯಕ್ರಮದಲ್ಲಿ 50 ಜನರಿಗಷ್ಟೇ ಅವಕಾಶವಿದ್ದು, ಸದ್ಯಕ್ಕೆ ಆ ಎಲ್ಲ ಮದುವೆಯಲ್ಲಿ ಭಾಗವಹಿಸುವವರಿಗೆ ಪಾಸ್ ನೀಡುವುದು ಕಷ್ಟ. ಆದ್ದರಿಂದ ಮದುವೆಯಲ್ಲಿ ಭಾಗವಹಿಸುವ 50 ಮಂದಿಯನ್ನು ಒಳಗೊಂಡ ಅತಿಥಿ ಪಟ್ಟಿ (ಗೆಸ್ಟ್ ಲಿಸ್ಟ್)ಗೆ ಸ್ಥಳೀಯಾಡಳಿದಿಂದ ಅನುಮತಿ ಪಡೆಯಬೇಕು. ಈ ಅನುಮತಿ ಪತ್ರದಲ್ಲಿ ನೀಡಲಾಗಿರುವ ಹೆಸರಿನವರಿಗೆ ಮಾತ್ರ ಮದುವೆಯ ನಿಗದಿತ ಸ್ಥಳಗಳಲ್ಲಿ ಕರ್ಫ್ಯೂ ಸಂದರ್ಭ ತೆರಳಲು ಅವಕಾಶ. ಅತಿಥಿ ಪಟ್ಟಿಯಲ್ಲಿ ಹೆಸರಿರುವವರು ಅನುಮತಿ ಪತ್ರದ ಪ್ರತಿ, ಮದುವೆ ಆಮಂತ್ರಣ ಪತ್ರಿಕೆ ಹಾಗೂ ತಮ್ಮ ಫೋಟೋ ಇರುವ ಗುರುತಿನ ಚೀಟಿ(ಆಧಾರ್ ಕಾರ್ಡ್, ಪಾನ್‌ಕಾರ್ಡ್, ವಾಹನ ಚಾಲನಾ ಪರವಾನಿಗೆ)ಯನ್ನು ತಪಾಸಣಾ ಅಧಿಕಾರಿಗಳಿಗೆ ತೋರಿಸಬೇಕು. ಪಟ್ಟಿಯಲ್ಲಿ ಇಲ್ಲದವರಿಗೆ ಅಥವಾ ಅದೇ ಹೆಸರಿನ ಬೇರೊಬ್ಬರಿಗೆ ಸಂಚಾರಕ್ಕೆ ಅಥವಾ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ ಎಂದರು.

    ಧಾರ್ಮಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧ: ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಬುಧವಾರ ರಾತ್ರಿಯಿಂದಲೇ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ದೇವಳದ ಜಾತ್ರೆ, ಬ್ರಹ್ಮಕಲಶ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕರು, ಸಿಬ್ಬಂದಿ ಉಪಸ್ಥಿತಿಯಲ್ಲಿ ನಡೆಯಬಹುದು.

    ಬೆಳಗ್ಗೆ 6ರಿಂದ 10ರವರೆಗೆ ಸಾಮಗ್ರಿ ಖರೀದಿ: ವೀಕೆಂಡ್ ಕರ್ಫ್ಯೂ ಸಂದರ್ಭ ಶನಿವಾರ ಮತ್ತು ಭಾನುವಾರ ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದೆ. ಜನ ತಮ್ಮ ಮನೆ ಪಕ್ಕದ ಅಂಗಡಿ, ಮಳಿಗೆಗಳಿಂದ ಖರೀದಿಸಬಹುದು. ಅನಗತ್ಯವಾಗಿ ಕಾರು, ಬೈಕ್‌ಗಳಲ್ಲಿ ತಿರುಗಾಡಿದರೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಸೋಂಕು ಹರಡುವುದನ್ನು ತಡೆಯಲು ಸಾರ್ವಜನಿಕರು ಜಿಲ್ಲಾಡಳಿತ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಎಸ್.ಶಶಿಕುಮಾರ್ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts