More

    ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ

    ಬೆಳಗಾವಿ: ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳು ಸೇರಿದಂತೆ ಎಲ್ಲ ಕಡೆ ಹಾಳಾಗಿರುವ ರಸ್ತೆಗಳನ್ನು ಶೀಘ್ರ ರಿಪೇರಿ ಮಾಡಬೇಕು. ಎಲ್ಲದಕ್ಕೂ ಇಲಾಖೆ ಸಚಿವರ ಬೆನ್ನುಬೀಳದೆ ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿರಿ ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೂಚಿಸಿದ್ದಾರೆ.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವರ್ಷ ಕಳೆದರೂ ರಸ್ತೆಗಳು ರಿಪೇರಿ ಭಾಗ್ಯ ಕಂಡಿಲ್ಲ. ಗೋಕಾಕ-ಯರಗಟ್ಟಿ ಮಾರ್ಗ ನಡುವಿನ ರಸ್ತೆ ಹಾಳಾಗಿರುವುದರಿಂದ ಈ ಭಾಗದಲ್ಲಿ ಓಡಾಡಲು ಪ್ರಯಾಣಿಕರು ತೊಂದರೆ ಪಡುತ್ತಿದ್ದಾರೆ. ಈ ಕುರಿತು ಚಿಕ್ಕೋಡಿ ಮತ್ತು ಬೆಳಗಾವಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಕ್ಷಣ ರಸ್ತೆ ರಿಪೇರಿ ಕಾಮಗಾರಿ ಆರಂಭಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

    ಕಾಮಗಾರಿಗೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮತನಾಡಿ, ಕಳೆದ ವರ್ಷ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಡಿ 541 ಕಾಮಗಾರಿಗಳಿಗೆ 8.71 ಕೋಟಿ ರೂ. ಅನುದಾನ ಪೈಕಿ 7.84 ಕೋಟಿ ರೂ. ಬಿಡುಗಡೆ ಆಗಿದೆ. 6.47 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ. ರಸ್ತೆ ದುರಸ್ತಿ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ. 2020-21ನೇ ಸಾಲಿನಲ್ಲಿ 20 ಕೋಟಿ ರೂ. ಅನುದಾನ ಬಿಡುಗಡೆ ಆಗಿದ್ದು, ತಕ್ಷಣ ಕಾಮಗಾರಿ ಆರಂಭಿಸಲು ಕ್ರಮ ವಹಿಸಲಾಗುವುದು. ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ರಸ್ತೆಗಳ ದುರಸ್ತಿಗೆ ಪ್ರತಿ 1ಕಿ.ಮೀ. ಗೆ 60 ಸಾವಿರ ರೂ. ವರೆಗೆ ಮಾತ್ರ ಖರ್ಚು ಮಾಡಬೇಕು. ಲೋಕೋಪಯೋಗಿ ಇಲಾಖೆಯವರು 1 ಕಿ.ಮೀ. ರಸ್ತೆ ದುರಸ್ತಿಗೆ ಕನಿಷ್ಠ 2 ಲಕ್ಷ ರೂ. ವರೆಗೆ ಖರ್ಚಾಗುತ್ತದೆ ಎನ್ನುತ್ತಾರೆ. ಆದರೆ, ಸರ್ಕಾರ 1 ಕಿ.ಮೀ.ಗೆ 60 ಸಾವಿರ ರೂ. ನೀಡುತ್ತಿದೆ. ಇದರಿಂದ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

    ಚರಂಡಿ ನಿರ್ಮಾಣಕ್ಕೆ ಸೂಚನೆ: ಜಿಲ್ಲೆಯ ಕೆಲ ರಸ್ತೆಯ ಎರಡು ಬದಿ ಚರಂಡಿನಿರ್ಮಾಣ ಮಾಡಿಲ್ಲ. ಇದರಿಂದ ಮಳೆಗಾಲದಲ್ಲಿ ರಸ್ತೆ ಹಾಳಾಗುವ ಜತೆಗೆ ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆ. ಕೆಲ ಕಡೆ ರಸ್ತೆ ಪಕ್ಕದ ಸ್ಥಳ ಒತ್ತುವರಿ ಮಾಡಿ, ಅಂಗಡಿ ಆರಂಭಿಸಿರುವುದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಚರಂಡಿ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಕೈಮಗ್ಗ ಮತ್ತು ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಸೂಚಿಸಿದರು.

    ಶಾಸಕರಾದ ಮಹಾದೇವಪ್ಪ ಯಾದವಾಡ, ಮಹಾಂತೇಶ ಕೌಜಲಗಿ, ಮಹೇಶ ಕುಮಠಳ್ಳಿ, ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಪಂ ಸಿಇಒ ದರ್ಶನ ಎಚ್.ವಿ., ಎಸ್‌ಪಿ ಲಕ್ಷ್ಮಣ ನಿಂಬರಗಿ, ಉಪಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ ಇತರರು ಇದ್ದರು.

    ಅರ್ಹರಿಗೆ ಮಾತ್ರ ಸೌಲಭ್ಯ ಸಿಗಲಿ

    ಸರ್ಕಾರದ ಸೌಲಭ್ಯಗಳನ್ನು ಕೆಲವರು ನಕಲಿ ಕಾರ್ಡ್ ಬಳಸಿ ಪಡೆಯುತ್ತಿರುವುದು ತಿಳಿದುಬಂದಿದೆ. ಇದರಿಂದ ಅರ್ಹರಿಗೆ ಅನ್ಯಾಯ ವಾದಂತಾಗುತ್ತದೆ. ಸರ್ಕಾರವನ್ನು ವಂಚಿಸುತ್ತಿರುವವರ ವಿರುದ್ಧ ಅಧಿಕಾರಿಗಳ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಎಚ್ಚರಿಸಿದರು.

    ಜಿಲ್ಲೆಯಲ್ಲಿ ಸ್ಲಂ ಪ್ರದೇಶ ಹೆಚ್ಚಳಕ್ಕೆ ಆಕ್ರೋಶ

    ನಗರ ಮತ್ತು ಗ್ರಾಮೀಣ ಪ್ರದೇಶಗಳು ಸಮಗ್ರ ಅಭಿವೃದ್ಧಿ ಹೊಂದುತ್ತಿವೆ. ಆದರೆ, ಜಿಲ್ಲೆಯಲ್ಲಿ ಸ್ಲಂಗಳ ಪ್ರದೇಶ ವ್ಯಾಪ್ತಿ ಹೆಚ್ಚಲು ಕಾರಣವೇನು? 4-5 ವರ್ಷಗಳಲ್ಲಿ 139 ನಿಂದ 160ಕ್ಕೆ ಸ್ಲಂಗಳ ಸಂಖ್ಯೆ ಹೆಚ್ಚಿದೆ. ಈ ಸಂಖ್ಯೆ ಬೆಳಗಾವಿ ನಗರದಲ್ಲಿ ಅಧಿಕ ಪ್ರಮಾಣದಲ್ಲಿದೆ. ಸ್ಥಳೀಯ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಭೆಯಲ್ಲಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts