More

    ಬಾಳೆ, ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ

    ಶಿಗ್ಗಾಂವಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಸೂಕ್ತ ಮಾರುಕಟ್ಟೆ ಸಿಗದೇ ಸಂಕಷ್ಟದಲ್ಲಿರುವ ಬಾಳೆ, ಮಾವು ಬೆಳಗಾರರ ಸಹಾಯಕ್ಕೆ ಬಾರದ ತೋಟಗಾರಿಕೆ ಇಲಾಖೆ ಅಧಿಕಾರಿಯನ್ನು ಜಿ.ಪಂ. ಅಧ್ಯಕ್ಷ ಬಸವರಾಜ ದೇಸಾಯಿ ತರಾಟೆಗೆ ತೆಗೆದುಕೊಂಡ ಘಟನೆ ತಾಪಂ ಕಚೇರಿಯಲ್ಲಿ ಮಂಗಳವಾರ ನಡೆಯಿತು.

    ಕರೊನಾ ಜಾಗೃತಿ ಪರಿಶೀಲನೆ ಕುರಿತು ತಾಪಂ ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಪಂ ಅಧ್ಯಕ್ಷರು, ಈ ಮೊದಲು ನೆರೆ, ಈಗ ಕರೊನಾ ಲಾಕ್​ಡೌನ್ ನಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈಗ ರೈತನಿಗೆ ಉಳಿದಿರುವುದು ಕಟಾವಿಗೆ ಬಂದಿರುವ ಬಾಳೆ ಮತ್ತು ಮಾವು ಮಾತ್ರ. ಇದಕ್ಕೆ ಮಾರುಕಟ್ಟೆ ಕಲ್ಪಿಸದಿದ್ದರೆ ರೈತ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾನೆ. ಕೂಡಲೆ ರೈತರ ಹೊಲಗಳಿಗೆ ಭೇಟಿ ನೀಡಿ, ಕಟಾವಿಗೆ ಬಂದಿರುವ ಬೆಳೆಗಳ ಮಾರಾಟಕ್ಕೆ ಮಾರ್ಗದರ್ಶನ ನೀಡುವಂತೆ ಸೂಚಿಸಿದರು. ಇದರಲ್ಲಿ ಕರ್ತವ್ಯಲೋಪ ಎಸಗಿದ್ದಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ತಾಲೂಕಿನಲ್ಲಿ ಏಪ್ರಿಲ್, ಮೇ, ಜೂನ್ ವರೆಗೂ ಬೇಕಾಗುವಷ್ಟು ಬೀಜ, ಗೊಬ್ಬರದ ದಾಸ್ತಾನು ಮಾಡಲಾಗಿದೆ. ಕೃಷಿ ಚಟುವಟಿಕೆಗಳಿಗೆ ಬಳಸುವ ಟ್ರ್ಯಾಕ್ಟರ್​ಗಳಿಗೆ ಡೀಸೆಲ್ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಕೃಷಿ ಅಧಿಕಾರಿ ಎಸ್. ದೀಕ್ಷಿತ್ ಮಾಹಿತಿ ನೀಡಿದರು.

    ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳ ಮೂಲಕ ಎರಡು ತಿಂಗಳ ಪಡಿತರವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಮೇ 1ರಿಂದ ಕೇಂದ್ರ ಸರ್ಕಾರ ನೀಡಿರುವ ಪಡಿತರ ಹಂಚಲಾಗುವುದು ಎಂದು ಆಹಾರ ನಿರೀಕ್ಷಕ ಶಿವಾನಂದ ಅಜ್ಜಂಪುರ ಮಾಹಿತಿ ನೀಡಿದರು.

    ಶಿಶು ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಕರೊನಾ ಜಾಗೃತಿ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರಕಾಣಿ, ಸಿಡಿಪಿಒ ಅಣ್ಣಪ್ಪ ಹೆಗಡೆ, ಅರಣ್ಯ ಅಧಿಕಾರಿ ಬಿ.ಎಸ್. ಪೂಜಾರ ಇತರರು ಇದ್ದರು.

    ಶೇ. 80 ಜನರ ತಪಾಸಣೆ: ತಾಲೂಕು ವೈದ್ಯಾಧಿಕಾರಿ ಡಾ. ಹನುಮಂತಪ್ಪ ಕುಡಚಿ ಮಾತನಾಡಿ, ತಾಲೂಕಿನಲ್ಲಿ ದಿನಕ್ಕೆ ಕನಿಷ್ಠ 250 ರಂತೆ ಈಗಾಗಲೇ 1,14,345 ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ 119 ಜನರ ರಕ್ತ ಮತ್ತು ಕಫದ ಮಾದರಿ ಪರೀಕ್ಷೆ ಮಾಡಲಾಗಿದೆ. ಶೇ. 80 ರಷ್ಟು ಜನರ ತಪಾಸಣೆ ಕಾರ್ಯ ಮಾಡಲಾಗಿದೆ. ಆರೋಗ್ಯ ತಪಾಸಣೆಯಲ್ಲಿ ಶಿಗ್ಗಾಂವಿ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts