More

    ಕಿಸಾನ್ ಕಾಂಗ್ರೆಸ್ ಘಟಕಕ್ಕೆ ಟಿಕೆಟ್ ಮೀಸಲಿಡಿ

    ವಿಜಯಪುರ: ಪ್ರಸಕ್ತ ವಿಧಾನ ಸಭೆ ಚುನಾವಣೆಯಲ್ಲಿ ದೇವರಹಿಪ್ಪರಗಿ ಕ್ಷೇತ್ರವನ್ನು ಕಿಸಾನ್ ಕಾಂಗ್ರೆಸ್ ಘಟಕಕ್ಕೆ ಮೀಸಲಿಡಬೇಕೆಂದು ಘಟಕದ ಜಿಲ್ಲಾಧ್ಯಕ್ಷ ಬಾಪುಗೌಡ ಮಲ್ಲನಗೌಡ ಪಾಟೀಲ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದರು.

    ಹೂವಿನ ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ, ದೇವರಹಿಪ್ಪರಗಿ ವಿಧಾನ ಸಭೆ ಚುನಾವಣೆ ಉಸ್ತುವಾರಿಯಾಗಿ ಕೆಲಸ ಮಾಡಿದ್ದು, 2019ರ ಎಂಎಲ್‌ಸಿ ಚುನಾವಣೆಯಲ್ಲಿ ಎಂ.ಬಿ. ಪಾಟೀಲರ ಸಹೋದರ ಸುನೀಲಗೌಡರ ಪರ ಕೆಲಸ ಮಾಡಿದ್ದೇನೆ.

    ದೇವರಹಿಪ್ಪರಗಿ ಕ್ಷೇತ್ರದ ಉಸ್ತುವಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ಇದೀಗ ಎಂ.ಬಿ. ಪಾಟೀಲರಿಗೆ ಟಿಕೆಟ್ ಕೇಳಲು ಹೋದರೆ ಸಮೀಕ್ಷೆಯ ನೆಪ ಹೇಳುತ್ತಾರೆ.

    ಆದರೆ, ಸಮೀಕ್ಷೆಯಲ್ಲಿ ಇಲ್ಲದೇ ಇರುವವರ ಹೆಸರು ಇದೀಗ ಮುನ್ನೆಲೆಗೆ ಬಂದಿದೆ. ಹೀಗಾಗಿ ಹೈಕಮಾಂಡ್ ಗಮನ ಹರಿಸಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ದೇವರಹಿಪ್ಪರಗಿ ಕ್ಷೇತ್ರದಿಂದ ಟಿಕೆಟ್ ಬಯಸಿ ಈಗಾಗಲೇ ಕೆಪಿಸಿಸಿಗೆ ಅರ್ಜಿ ಸಲ್ಲಿಸಲಾಗಿದೆ. 19 ವರ್ಷಗಳ ಕಾಲ ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ರೈತ ಪರ ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಹೀಗಾಗಿ ಜನರು ಈ ಬಾರಿ ನನ್ನ ಸ್ಪರ್ಧೆಗೆ ಒಲವು ತೋರುತ್ತಿದ್ದಾರೆ.

    ಟಿಕೆಟ್ ಸಿಗುವ ಭರವಸೆಯೂ ಇದೆ. ಹಾಗೊಂದು ವೇಳೆ ಟಿಕೆಟ್ ಸಿಗದೇ ಹೋದರೆ ಬೇರೆ ಯಾರಿಗೆ ಟಿಕೆಟ್ ನೀಡಿದರೂ ಚುನಾವಣೆ ಜವಾಬ್ದಾರಿ ನಿಭಾಯಿಸಲು ಸಿದ್ಧನಿಲ್ಲ ಎಂದರು.

    ಈಗಾಗಲೇ ಎಸ್.ಆರ್. ಪಾಟೀಲ ಹೆಸರು ಕೇಳಿ ಬರುತ್ತಿರುವುದು ನಿಜ. ಅನೇಕರು ಆಕಾಂಕ್ಷಿಗಳಿದ್ದು ಎಲ್ಲರೂ ಟಿಕೆಟ್‌ಗೆ ಶ್ರಮಿಸುತ್ತಿದ್ದಾರೆ. ಆದರೆ, ನಿಸ್ವಾರ್ಥದಿಂದ, ಪ್ರಾಮಾಣಿಕವಾಗಿ ಪಕ್ಷ ಸಂಘಟಿಸಿರುವ ನನ್ನ ಹೊರತಾಗಿ ಯಾರಿಗೆ ಟಿಕೆಟ್ ನೀಡಿದರೂ ನಾನು ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲವೆಂದು ಪ್ರಶ್ನೆಯೊಂದಕ್ಕೆ ಕಡ್ಡಿ ಮುರಿದಂತೆ ಉತ್ತರಿಸಿದರು.

    ಕರ್ನಾಟಕ ಕಿಸಾನ ಕಾಂಗ್ರೆಸ್ ಅಧ್ಯಕ್ಷರು ದೇವರ ಹಿಪ್ಪರಗಿ ಮತಕ್ಷೇತ್ರವನ್ನು ಕಿಸಾನ ಕಾಂಗ್ರೆಸ್‌ಗೆ ಮೀಸಲಿಡಬೇಕೆಂದು ಈಗಾಗಲೇ ಬೇಡಿಕೆಯನ್ನೂ ಮಂಡಿಸಿದ್ದಾರೆ. ಅಲ್ಲದೇ, ರಾಷ್ಟ್ರೀಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸುಕಪಾಲಸಿಂಗ್ ಖೈರ್ ಕೂಡ ನನ್ನ ಹೆಸರನ್ನೇ ಶಿಫಾರಸು ಮಾಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಇಷ್ಟು ವರ್ಷ ಕೆಲಸ ಮಾಡಿದ್ದಕ್ಕೆ ನ್ಯಾಯ ಸಿಕ್ಕಂತಾಗಿದೆ ಎಂದು ಭಾವಿಸಿದ್ದೆ.

    ಈ ಹಂತದಲ್ಲಿಯೇ ಕಾಂಗ್ರೆಸ್ ಪಕ್ಷದ ಹಿರಿಯರಾದ ಎಸ್.ಆರ್. ಪಾಟೀಲ ಅವರು ನನ್ನ ಟಿಕೆಟ್ ತಪ್ಪಿಸಿ ತಾವು ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಕಿಸಾನ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪಕುಮಾರ ಬಿಸ್ಕಿನ್, ಬಹದ್ದೂರ ಚವಾಣ್, ನಗರ ಬ್ಲಾಕ್ ಅಧ್ಯಕ್ಷ ಖೂಬು ಜಾಧವ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts