More

    ಮೀಸಲು ಬದಲು, ಕೆಲವರಿಗೆ ದಿಗಿಲು!

    ಬೆಳಗಾವಿ: ಸರ್ಕಾರವು ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್ ಮೀಸಲಾತಿ ಪ್ರಕಟಿಸಿರುವ ಬೆನ್ನಲ್ಲೇ, ಚುನಾವಣೆಯಲ್ಲಿ ಸ್ಪರ್ಧಿಸಲು ವಾರ್ಡ್‌ಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದ ಆಕಾಂಕ್ಷಿಗಳು ಇದೀಗ ಮೀಸಲಾತಿ ಬದಲಾವಣೆಯಿಂದ ದಿಗಿಲುಗೊಂಡಿದ್ದಾರೆ.

    ರಾಜ್ಯ ಸರ್ಕಾರವು 2018ರಲ್ಲಿಯೇ ಪಾಲಿಕೆಯ 58 ವಾರ್ಡ್‌ಗಳ ಮೀಸಲಾತಿ ಪ್ರಕಟಿಸಿತ್ತು. ಆದರೆ, ಕೋರ್ಟ್‌ನಲ್ಲಿ ಕೆಲವರು ತಕಾರರು ಅರ್ಜಿ ಸಲ್ಲಿಸಿದ್ದರಿಂದ ಮೀಸಲಾತಿ ಅರ್ಧದಲ್ಲಿಯೇ ಮೊಟಕುಗೊಂಡಿತ್ತು.

    ಚುನಾವಣೆಯಿಂದಲೇ ದೂರ: 2014ರ ವಾರ್ಡ್ ಮೀಸಲಾತಿ ಪಟ್ಟಿ ಆಧಾರದಲ್ಲಿಯೇ ಚುನಾವಣೆ ಜರುಗಲಿದೆ ಎಂದು ಪಾಲಿಕೆಯ ಮಾಜಿ ಸದಸ್ಯರು, ಆಕಾಂಕ್ಷಿಗಳು ವಾರ್ಡ್ ಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಇದೀಗ 2021ರಲ್ಲಿ ಸರ್ಕಾರವು ಹೊಸದಾಗಿ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಿಸಿದ್ದರಿಂದ ಸ್ಪರ್ಧಾಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಅಲ್ಲದೆ, ಕೆಲವರಿಗೆ ಸ್ಪರ್ಧಿಸಲು ವಾರ್ಡ್ ಮೀಸಲಾತಿ ಅಡ್ಡಿಯಾಗಿದ್ದರಿಂದ ಚುನಾವಣೆಯಿಂದಲೇ ದೂರ ಸರಿಯುವ ಅನಿವಾರ್ಯತೆ ಎದುರಾಗಿದೆ.

    ಸ್ವಲ್ಪ ಬದಲಾವಣೆ: ಪಾಲಿಕೆಯ 58 ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರವು 2018 ಮತ್ತು 2021ರಲ್ಲಿ ಪ್ರಕಟಿಸಿದ್ದ ವಾರ್ಡ್ ಮೀಸಲಾತಿಯಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಅದರಲ್ಲಿ ಪ್ರಮುಖವಾಗಿ ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಮಹಿಳಾ ಮತ್ತು ಪುರುಷರಿಗೆ ಮೀಸಲಾಗಿದ್ದ ವಾರ್ಡ್‌ಗಳಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಸಾಮಾನ್ಯ ವರ್ಗಗಳಿಗೆ ಮೀಸಲಿಡಲಾಗಿದೆ.

    2 ತಿಂಗಳಲ್ಲಿ ಚುನಾವಣೆ: ಈಗಾಗಲೇ ವಾರ್ಡ್‌ಗಳ ವ್ಯಾಪ್ತಿ ಮರುವಿಂಗಡಣೆ ಮತ್ತು ಮೀಸಲಾತಿ ವಿಷಯದಲ್ಲಿ ಉಂಟಾದ ಸಮಸ್ಯೆಯಿಂದಾಗಿ ವರ್ಷ ಕಳೆದರೂ ಚುನಾವಣೆ ನಡೆಯುತ್ತಿಲ್ಲ. 2014ರ ಮಾರ್ಚ್ 10ರಂದು ಅಸ್ತಿತ್ವಕ್ಕೆ ಬಂದಿದ್ದ ಸದಸ್ಯರ ಅಧಿಕಾರ ಅವಧಿ 2019ರ ಮಾರ್ಚ್ 10ಕ್ಕೆ ಪೂರ್ಣಗೊಂಡಿತ್ತು. ಇದೀಗ ಹೊಸದಾಗಿ ಮೀಸಲಾತಿ ಪಟ್ಟಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪಾಲಿಕೆಗೆ ಚುನಾವಣೆ ಜರುಗುವ ಸಾಧ್ಯ ಇದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಪಕ್ಷಗಳ ಕಚೇರಿಗೆ ಓಡಾಟ, ಟಿಕೆಟ್‌ಗಾಗಿ ದುಂಬಾಲು: ಎರಡು ದಶಕಗಳಿಂದ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿಕೊಂಡು ಬರುತ್ತಿದ್ದ ಪಾಲಿಕೆಯ ಮಾಜಿ ಸದಸ್ಯರು ಇದೀಗ ವಾರ್ಡ್ ಮೀಸಲಾತಿ ಬದಲಾವಣೆಯಿಂದ ಅತಂತ್ರರಾಗಿದ್ದಾರೆ. ಪಕ್ಷಗಳ ಚಿಹ್ನೆ ಅಡಿ ಚುನಾವಣೆ ಜರುಗಲಿರುವುದರಿಂದ ಆಕಾಂಕ್ಷಿಗಳು ಹೊಸ ಸಾಧ್ಯತೆಗಳನ್ನು ಅರಸುತ್ತಿದ್ದಾರೆ. ಆಯಾ ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಕಚೇರಿಗೆ ಅಲೆದಾಡುತ್ತಿದ್ದಾರೆ. ಕೆಲವರು ಹಾಲಿ ಮತ್ತು ಮಾಜಿ ಶಾಸಕರ ಮನವೊಲಿಸಲು ನಾನಾ ಕಸರತ್ತು ಆರಂಭಿಸಿದ್ದಾರೆ. ಮತ್ತೊಂದೆಡೆ, ಕಾರ್ಯಕರ್ತರಿಗೇ ಟಿಕೆಟ್ ನೀಡಲು ಪಕ್ಷಗಳ ನಾಯಕರು ನಿರ್ಧರಿಸಿದ್ದರಿಂದ, ಕೆಲವರಿಗೆ ನಿರಾಸೆ ಉಂಟಾಗಿದೆ ಎನ್ನಲಾಗಿದೆ.

    ಮಹಾನಗರ ಪಾಲಿಕೆಯ ವಾರ್ಡ್ ಮೀಸಲಾತಿ ಪಟ್ಟಿ ಕುರಿತು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸದಿದ್ದರೆ ಸರ್ಕಾರವು ಮೀಸಲಾತಿ ಪಟ್ಟಿ ಅಂತಿಮಗೊಳಿಸಲಿದೆ. ಸದ್ಯ ಯಾವುದೇ ತಕರಾರರು ಅರ್ಜಿಗಳು ಸಲ್ಲಿಕೆಯಾಗಿಲ್ಲ.
    | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts