More

    ಮೀಸಲಾತಿ ಕೊರತೆಯಿಂದ ಉದ್ಯೋಗ ಸಮಸ್ಯೆ

    ಹುಕ್ಕೇರಿ: ರಾಜ್ಯದಲ್ಲಿ ಲಿಂಗಾಯತ ಸಮಾಜ ಬಹುಸಂಖ್ಯಾತವಾಗಿದ್ದರೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿಯಾಗಿಲ್ಲ. ಈ ಸಮಾಜದ ಯುವ ಜನಾಂಗ ಮೀಸಲಾತಿ ಕೊರತೆಯಿಂದ ಉದ್ಯೋಗ ಸಮಸ್ಯೆ ಅನುಭವಿಸುತ್ತದ್ದಾರೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ, ಜಿಪಂ ಸದಸ್ಯ ಪವನ ಕತ್ತಿ ಕಳವಳ ವ್ಯಕ್ತಪಡಿಸಿದ್ದಾರೆ.

    ಪಟ್ಟಣದ ಅಡವಿಸಿದ್ದೇಶ್ವರ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಂಚಮಸಾಲಿ ಲಿಂಗಾಯತ ಸಮಾಜದ ಶರಣು ಶರಣಾರ್ಥಿ ಜಾಥಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಹಳ್ಳಿಯಿಂದ ರಾಜ್ಯದ ರಾಜಧಾನಿವರೆಗೆ ಮೀಸಲಾತಿ ಕೂಗು ಮುಟ್ಟಿಸಲು 10 ಲಕ್ಷಕ್ಕೂ ಹೆಚ್ಚು ಸಮಾಜದ ಜನರನ್ನು ಸೇರಿಸಿದ್ದು ದಾಖಲೆಯಾಗಿದೆ. ಜಗದ್ಗುರುಗಳು ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ 750 ಕಿ.ಮೀ ಪಾದಯಾತ್ರೆ ಹಮ್ಮಿಕೊಂಡಿದ್ದು ಸಮಾಜದ ಮೇಲಿರುವ ಅವರ ಕಳಕಳಿ ಬಿಂಬಿಸುತ್ತದೆ. ಅದಕ್ಕಾಗಿ ಸಮಾಜ ಸದಾ ಕಾಲ ಅವರಿಗೆ ಋಣಿ ಆಗಿರುತ್ತದೆ. ಈ ಮೀಸಲಾತಿ ಹೋರಾಟವನ್ನು ರಾಷ್ಟ್ರ ರಾಜಧಾನಿಗೂ ತೆಗೆದುಕೊಂಡು ಹೋಗಲು ನಿರ್ಧರಿಸಿದರೆ ತಮ್ಮ ಕುಟುಂಬ ಎಲ್ಲ ರೀತಿಯಿಂದ ಬೆಂಬಲಿಸುತ್ತದೆ ಎಂದರು.

    ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಶ್ರೀಗಳು ಸಮಾಜದ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಜತೆಗೆ ನಾವೆಲ್ಲ ಇದ್ದೇವೆ. ಮುಂಬರುವ ದಿನಗಳಲ್ಲಿ ಸರ್ಕಾರ ಮೀಸಲಾತಿ ನೀಡದಿದ್ದರೆ ಈ ಹೋರಾಟಕ್ಕೆ 20 ಲಕ್ಷಕ್ಕೂ ಹೆಚ್ಚು ಜನ ಸೇರುವ ಮೂಲಕ ಹೋರಾಟ ಮತ್ತಷ್ಟು ತೀವ್ರವಾಗಲಿದೆ ಎಂದರು.

    ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ನಿರ್ಣಯಿಸಲು ಸರ್ಕಾರ ಅಧಿವೇಶನದಲ್ಲಿ 6 ತಿಂಗಳ ಕಾಲವಕಾಶ ಕೇಳಿಕೊಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನುಡಿದಂತೆ ನಡೆಯುತ್ತಾರೆಂಬ ವಿಶ್ವಾಸವಿದೆ. ಒಂದು ವೇಳೆ ಅಷ್ಟರಲ್ಲಿ ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದು ನಿಶ್ಚಿತವೆಂಬ ಎಚ್ಚರಿಕೆ ನೀಡಿದರು.

    ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮಾಜ ತಾಲೂಕು ಘಟಕದಿಂದ ಜಗದ್ಗುರುಗಳನ್ನು ಸತ್ಕರಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ನಾಗರಾಳದ ಬಿ.ಎಸ್.ಪಾಟೀಲ, ಜಯಗೌಡ ಪಾಟೀಲ, ವೀರಶೈವ ಸಮಾಜ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಗ್ರಾಮದೇವತೆ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸಂಜಯ ನಾಯಿಕ ಇದ್ದರು. ಪಂಚಮಸಾಲಿ ಸಮಾಜ ತಾಲೂಕು ಅಧ್ಯಕ್ಷ ಶಿವಗೌಡ(ಗುಂಡು) ಪಾಟೀಲ ಸ್ವಾಗತಿಸಿದರು. ಭೀಮಾನಂದ ಮುದಕಣ್ಣವರ ನಿರೂಪಿಸಿದರು. ಸುಭಾಷ ನಾಯಿಕ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts