More

    ಮಲೇರಿಯಾ ತಡೆಗೆ ಮುನ್ನೆಚ್ಚರಿಕೆಯೇ ಮದ್ದು  ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಹೇಳಿಕೆ   ನಗರದಲ್ಲಿ ಜಾಗೃತಿ ಜಾಥಾ

    ದಾವಣಗೆರೆ: ಮಲೇರಿಯಾ ಗಂಭೀರ ಕಾಯಿಲೆಯಾಗಿದ್ದರೂ, ಮುನ್ನೆಚ್ಚರಿಕೆ ಕ್ರಮಗಳಿಂದ ತಡೆಗಟ್ಟಬಹುದು ಎಂದು ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಿಂದ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ದಿನಾಚರಣೆ ಹಾಗೂ ಮತದಾನ ಜಾಗೃತಿ ಜಾಥಾಕ್ಕೆ  ಚಾಲನೆ ನೀಡಿ ಮಾತನಾಡಿದರು.
    ಬೇಸಿಗೆ ಮತ್ತು ಮಳೆಗಾಲದಲ್ಲಿ ಮಲೇರಿಯಾ ಜ್ವರ ಕಾಣಿಸಿಕೊಳ್ಳುತ್ತದೆ. ಅನಾಫಿಲಿಸ್ ಸೊಳ್ಳೆ ಕಚ್ಚಿದ ತಕ್ಷಣ ಪರಾವಲಂಬಿ ರೋಗಿಯ ಯಕೃತ್ತು ಮತ್ತು ರಕ್ತ ಕಣಗಳ ಮೇಲೆ ದಾಳಿ ಮಾಡಲಿದೆ. ಇದರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸುವುದೇ ಆರಂಭಿಕ ಚಿಕಿತ್ಸೆಯಾಗಿದೆ ಎಂದರು.
    ಮಲೇರಿಯಾದಿಂದ ಬಳಲುತ್ತಿರುವವರು ಮತ್ತು ಇದರಿಂದ ಮರಣ ಪ್ರಮಾಣ ಇಳಿಕೆ ಮಾಡಲು ಜಾಗತಿಕ ಗಮನ ಸೆಳೆಯಲು ಪ್ರತಿ ವರ್ಷ ಏ.25 ರಂದು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಹೆಚ್ಚು ಸಮಾನತೆ ಜಗತ್ತಿಗೆ, ಮಲೇರಿಯಾ ವಿರುದ್ಧ್ದ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷದಡಿ ಆಚರಣೆ ಮಾಡಲಾಗುತ್ತಿದೆ ಎಂದರು.
    ಪ್ರತಿ ಮತ ಅಮೂಲ್ಯ, ತಪ್ಪದೇ ಮತ ಚಲಾಯಿಸಿ, ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ, ನನ್ನ ಮತ ನನ್ನ ಧ್ವನಿ, ನನ್ನ ಶಕ್ತಿ ಯಾವುದೇ ಆಮಿಷ, ಬೆದರಿಕೆಗೆ ಮಣಿಯದೆ ತಪ್ಪದೆ ಮತ ಚಲಾಯಿಸಿ, ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬ ಘೋಷವಾಕ್ಯಗಳಿದ್ದ ಪ್ಲೆಕಾರ್ಡ್‌ಗಳ ಪ್ರದರ್ಶನದೊಂದಿಗೆ ಈ ಜಾಥಾ ಮತದಾನ ಜಾಗೃತಿಗೂ ಸಾಕ್ಷಿಯಾಯಿತು.  
    ಜಾಥಾದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಡಿಎಚ್‌ಒ ಡಾ. ಷಣ್ಮುಖಪ್ಪ , ಜಿಲ್ಲಾ ಮಲೇರಿಯಾ ನಿರ್ಮೂಲನಾಧಿಕಾರಿ ಡಾ. ಗಂಗಾಧರ್, ಆರ್.ಸಿ.ಎಚ್ ಅಧಿಕಾರಿ ಡಾ.ರೇಣುಕಾರಾಧ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಸುರೇಶ್ ಬಾರ್ಕಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts