More

    ಸ್ವಾಮಿನಾಥನ್ ಆಯೋಗ ವರದಿ ಜಾರಿಗೊಳಿಸಲು ಮನವಿ

    ಶಿಗ್ಗಾಂವಿ: ರೈತರ ಸಾಲ ಮನ್ನಾ, ಬೆಂಬಲ ಬೆಲೆ ಘೊಷಣೆ ಹಾಗೂ ಸ್ವಾಮಿನಾಥನ್ ಆಯೋಗ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕು ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸಂತೋಷ ಹಿರೇಮಠ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಜಿಲ್ಲಾ ಘಟಕದ ಅಧ್ಯಕ್ಷ ರಾಮು ತಳವಾರ ಮಾತನಾಡಿ, ರಾಜ್ಯದಲ್ಲಿ ಸತತವಾಗಿ ಅತಿವೃಷ್ಟಿ ಹಾಗೂ ಪ್ರಸ್ತುತ ಭೀಕರ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೆಲಸವಿಲ್ಲದೆ ಕೂಲಿ ಕಾರ್ವಿುಕರು ಉದ್ಯೋಗ ಅರಿಸಿ ಗುಳೇ ಹೋಗುವ ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೆ, ಅನೇಕ ರೈತರು ಸಾಲದ ಬಾಧೆಯಿಂದ ಹೊರಬರಲು ಸಾಧ್ಯವಾಗದೆ ಕೃಷಿ ಜಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ವಿಫಲವಾಗಿವೆ. ದೇಶದ ಆರ್ಥಿಕತೆಗೆ ಬಹುದೊಡ್ಡ ಪಾಲು ಕೃಷಿ ಕ್ಷೇತ್ರವೇ ಆಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಸೇರಿದಂತೆ ಬೆಂಬಲ ಬೆಲೆ ಘೊಷಣೆ ಮಾಡುವ ಮೂಲಕ ಸ್ವಾಮಿನಾಥನ್ ಆಯೋಗ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

    ಜಿಲ್ಲಾ ರೈತ ಘಟಕದ ಅಧ್ಯಕ್ಷ ಶರಣಪ್ಪ ಶಾಂತಗೇರಿ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲದ ಪರಿಣಾಮ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಬೇಸಿಗೆಯಲ್ಲಿ ಇದರ ಪರಿಣಾಮ ಇನ್ನಷ್ಟು ಹೆಚ್ಚಾಗಲಿದೆ. ಈ ವರ್ಷ ಹಿಂಗಾರು ಮಳೆಯು ಸಂಪೂರ್ಣವಾಗಿ ಕೈ-ಕೊಟ್ಟಿದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ಸರ್ಕಾರ ಕೂಡಲೇ ಮೇವು ಖರೀದಿಗೆ ಮುಂದಾಗಬೇಕು. ರೈತರ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

    ತಾಲೂಕು ರೈತ ಘಟಕದ ಅಧ್ಯಕ್ಷ ವೀರಭದ್ರಗೌಡ ಪೋಲಿಸಗೌಡ್ರ, ಬಂಕಾಪುರ ಹೋಬಳಿ ಘಟಕದ ಅಧ್ಯಕ್ಷ ಮಲ್ಲಪ್ಪ ಮಾಕಾಪುರ, ರಮೇಶ ಈಟಿ, ಗದಿಗೆಪ್ಪಗೌಡ ಪೋಲಿಸಗೌಡ್ರ, ತಮ್ಮಣಗೌಡ ಹಿರೇಗೌಡ್ರ, ನೀಲಕಂಠಪ್ಪ ಹುಬ್ಬಳ್ಳಿ, ಫಕೀರಪ್ಪ ಹೂಗಾರ, ವಿಶ್ವನಾಥಗೌಡ ಪಾಟೀಲ, ಯಲ್ಲಪ್ಪರೆಡ್ಡಿ ಹೊರಕೆರಿ, ರಾಜು ಲಮಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts