More

    ಜಪಾನ್‌ನಲ್ಲಿ ಮಂಡ್ಯ ಸಂಸ್ಕೃತಿ ಅನಾವರಣ: ರಿಪಬ್ಲಿಕ್ ಸೆಂಟ್ರಲ್‌ನ ಸ್ಕೂಲ್‌ನ ವಿದ್ಯಾರ್ಥಿಗಳು ಆಯ್ಕೆ

    ಮಂಡ್ಯ: ಜಪಾನ್‌ನಲ್ಲಿ ಮಂಡ್ಯ ಜಿಲ್ಲೆಯ ಸಂಸ್ಕೃತಿ, ಆಚಾರ, ವಿಚಾರವನ್ನು ಪರಿಚಯಿಸುವ ವಿಶೇಷ ಕಾರ್ಯಕ್ರಮಕ್ಕೆ ತಾಲೂಕಿನ ಸಿದ್ದಯ್ಯನಕೊಪ್ಪಲು ಗ್ರಾಮದ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಏ.23ರಿಂದ ನಡೆಯಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಸಮಾರಂಭದಲ್ಲಿ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸಲಿರುವ ವಿದ್ಯಾರ್ಥಿಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಲೆಯ ಅಧ್ಯಕ್ಷ ಮಂಜು, ಜಿಲ್ಲೆಯಿಂದ ನಾಲ್ಕು ಶಾಲೆಗಳು ಮಾತ್ರ ಜಪಾನ್‌ನಲ್ಲಿ ನಡೆಯಲಿರುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದವು. ಆದರೆ, ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಶಾನ್ ಸ್ಟೀವನ್ ಡಾಲ್ಮೇಡ, ಧನ್ಯಾ ಜೆ.ಗೌಡ ಮಾತ್ರ ಆಯ್ಕೆಯಾಗಿದ್ದಾರೆ. ಈ ಇಬ್ಬರು ಜಿಲ್ಲೆಯ ಜಾನಪದ, ದೇಗುಲ ಸಂಸ್ಕೃತಿ, ಮದುವೆ ಪದ್ಧತಿ, ಆಧುನಿಕ ಶಿಕ್ಷಣ ಪದ್ಧತಿ ಬಗ್ಗೆ ಜಪಾನ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ ಭಾರತದ ಭಾವೈಕ್ಯತೆಯನ್ನು ವಿದೇಶದಲ್ಲಿ ವಿನಿಮಯ ಮಾಡಲಿದ್ದಾರೆ. ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಮತ್ತು ಉಪಯೋಗದ ಬಗ್ಗೆ ಅಧ್ಯಯನ ಮಾಡಲಿದ್ದಾರೆ ಎಂದು ವಿವರಿಸಿದರು.
    ಜಪಾನ್ ಸರ್ಕಾರದ ಸಹಯೋಗದಲ್ಲಿ ಇಥಾಮಿ ಇಂಟರ್‌ನ್ಯಾಷನಲ್ ಕಲ್ಚರಲ್ ಹೆಸರಿನ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿದೆ. ಇದರ ಮೂಲಕ ಭವಿಷ್ಯದಲ್ಲಿ ನಮ್ಮ ಮಕ್ಕಳು ಜಪಾನ್‌ನಲ್ಲಿ, ಜಪಾನ್‌ನ ಮಕ್ಕಳು ನಮ್ಮ ಶಾಲೆಯಲ್ಲಿ ಓದಲು ಅವಕಾಶವಿದೆ. ಆರು ಹಂತದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಮಕ್ಕಳು ಉತ್ತಮ ಪ್ರದರ್ಶನ ನೀಡಿ ಜಪಾನ್ ಪ್ರವಾಸಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಆಯ್ಕೆಯಾಗಿರುವ ಇಬ್ಬರು ವಿದ್ಯಾರ್ಥಿಗಳಿಗೆ ಶಾಲೆಯಿಂದಲೇ ಪಾಸ್‌ಪೋರ್ಟ್ ಮಾಡಿಸಿಕೊಡಲಾಗಿದೆ. ವಿಮಾನ ಪ್ರಯಾಣ ವೆಚ್ಚ, ವಿಸಾ ಹಾಗೂ ಇತರ ಸೌಲಭ್ಯಗಳನ್ನು ಇಥಾಮಿ ಇಂಟರ್‌ನ್ಯಾಷನಲ್ ಕಲ್ಚರಲ್ ಸಂಸ್ಥೆಯೇ ಭರಿಸುತ್ತಿದೆ. 15 ದಿನಗಳ ಪ್ರವಾಸ ಇದಾಗಿದೆ ಎಂದು ಹೇಳಿದರು.
    ವಿದ್ಯಾರ್ಥಿಗಳಾದ ಶಾನ್ ಸ್ಟೀವನ್ ಡಾಲ್ಮೇಡ, ಧನ್ಯಾ ಜೆ.ಗೌಡ, ಪಾಲಕರಾದ ಜವನೇಗೌಡ, ಸ್ಟೀವನ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts