More

    ‘ಡಾನ್ ಬಾಸ್ಕೊ’ ರಂಗಮಂದಿರಕ್ಕೆ ಹೊಸ ವಿನ್ಯಾಸ

    ಹರೀಶ್ ಮೋಟುಕಾನ ಮಂಗಳೂರು

    ಏಳು ದಶಕಗಳಿಂದ ಕೊಂಕಣಿ, ತುಳು, ಬ್ಯಾರಿ, ಕನ್ನಡ ಸೇರಿದಂತೆ ರಂಗಭೂಮಿಯ ವಿವಿಧ ಪ್ರಕಾರಗಳ ಪ್ರದರ್ಶನಕ್ಕೆ ಅವಕಾಶ ನೀಡಿದ ಮಂಗಳೂರಿನ ‘ಡಾನ್ ಬಾಸ್ಕೊ’ ರಂಗಮಂದಿರ ಮೂಲ ಚೆಲುವಿಗೆ ಧಕ್ಕೆಯಾಗದಂತೆ 2 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದ್ದು, ಹೊಸ ವಿನ್ಯಾಸದೊಂದಿಗೆ ಬದಲಾಗಲಿದೆ.

    ಕೊಂಕಣಿ ನಾಟಕ ಸಭಾ ಸಂಸ್ಥೆ ಮೂಲಕ 1943ರಲ್ಲಿ ಹುಟ್ಟಿದ ‘ಡಾನ್ ಬಾಸ್ಕೊ’ ನಾಟಕದ ಮೂಲಕ ನೈತಿಕ ಮೌಲ್ಯ, ಜೀವನ ಶೈಲಿ ಒಳಗೊಂಡ ಧಾರ್ಮಿಕ ಸಾಧನೆ ಎಂಬ ಉದ್ದೇಶದೊಂದಿಗೆ ರಂಗ ಮಂದಿರ ನಿರ್ಮಾಣಗೊಂಡಿತ್ತು. ಸುದೀರ್ಘ ಕಾಲ ನಾಟಕ, ಸಂಗೀತ, ನಾಟ್ಯ, ಯಕ್ಷಗಾನ ಸಹಿತ ವಿವಿಧ ಪ್ರಕಾರಗಳಲ್ಲಿ ‘ಡಾನ್ ಬಾಸ್ಕೊ’ ಸಾವಿರಾರು ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಿತ್ತು. ಕರಾವಳಿಯ ಮೊದಲ ರಂಗಮಂದಿರ ಎಂಬ ಮಾನ್ಯತೆಯೂ ಇದಕ್ಕಿದೆ.

    650 ಆಸನಗಳನ್ನು ಹೊಂದಿದ್ದು, ವಿಶಾಲವಾದ ಮೂರು ಸಾಲು ಕುರ್ಚಿ ಹಾಕಬಲ್ಲ ಉತ್ತಮ ವೇದಿಕೆಯಿದೆ. ನಾಟಕ ಸಂಬಂಧಿತ ಎಲ್ಲ ವ್ಯವಸ್ಥೆಗಳನ್ನೂ ಜೋಡಿಸಲು ಅವಕಾಶವಿದೆ. ಪ್ರಸಾಧನ ಕೊಠಡಿ, ತಾತ್ಕಾಲಿಕ ವಿಶ್ರಾಂತಿ ಸ್ಥಳ ಕೂಡ ಇದೆ. ಮುಂದೆ ನೆಲಕ್ಕೆ ಗ್ರಾನೈಟ್ ಅಳವಡಿಸಿ, ಹಳೇ ಕಾಲದ ಲೈಟ್, ಫ್ಯಾನ್ ತೆಗೆದು ಹೊಸದಾಗಿ ಜೋಡಣೆಗೊಳ್ಳಲಿದೆ.

    ಉದ್ಭವ ವೇದಿಕೆ ವಿಶೇಷ: ಡಾನ್ ಬಾಸ್ಕೊ ರಂಗಮಂದಿರದಲ್ಲಿ ಹಲವು ವಿಶೇಷಗಳಿವೆ. ಮರದಿಂದ ಮಾಡಿದ ವೇದಿಕೆಯಾಗಿದ್ದು, ಅದರ ಅಡಿ ಪ್ರಸಾಧನ ಕೊಠಡಿ ಇದೆ. ನಾಟಕ, ಯಕ್ಷಗಾನ ಪ್ರದರ್ಶನದ ಸಂದರ್ಭ ಸನ್ನಿವೇಶಗಳಿಗೆ ತಕ್ಕಂತೆ ಪಾತ್ರಧಾರಿ ಕೆಳಗಿನಿಂದ ಉದ್ಭವವಾಗುವಂತೆ ಮಾಡಲು ಅವಕಾಶವಿದೆ. ರಾಟೆ ತಿರುಗಿಸಿ ಪಾತ್ರಧಾರಿ ವೇದಿಕೆಗೆ ಬರುವಂತೆ ಮಾಡಲಾಗುತ್ತದೆ. ಹಿಂದಿನ ಕಾಲದ ನಾಟಕಗಳಲ್ಲಿ ದೇವರು ಪ್ರತ್ಯಕ್ಷವಾಗುವ ಸನ್ನಿವೇಶಗಳನ್ನು ಈ ಮೂಲಕ ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ಮಾಡುತ್ತಿದ್ದರು. ಕೆಲವು ವರ್ಷಗಳಿಂದ ಇದು ಹಾಳಾಗಿತ್ತು. ನವೀಕರಣದ ಸಂದರ್ಭ ಅದನ್ನು ಕೂಡ ಸರಿಪಡಿಸಲಾಗುತ್ತಿದೆ.

    ‘ಡಾನ್ ಬಾಸ್ಕೊ’ ಸುಮಾರು 70 ವರ್ಷಗಳಷ್ಟು ಹಳೇ ಕಟ್ಟಡ. ಮೂಲ ಸೌಂದರ್ಯಕ್ಕೆ ಧಕ್ಕೆಯಾಗದಂತೆ ನವೀಕರಣಗೊಳ್ಳುತ್ತಿದೆ. ರೂಫ್ ಕೆಲಸ, ಪ್ಲಾಸ್ಟರಿಂಗ್, ಆಸನ ವ್ಯವಸ್ಥೆ ಬದಲಾವಣೆ, 50 ಕಾರು ಪಾರ್ಕಿಂಗ್‌ಗೆ ಸ್ಥಳಾವಕಾಶ ಸೇರಿದಂತೆ ವಿವಿಧ ಕೆಲಸಗಳು ನಡೆಯುತ್ತಿದೆ. ಸಭಾಂಗಣಕ್ಕೆ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸುವ ಯೋಜನೆಯೂ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾ ಚಟುವಟಿಕೆಗಳಿಗೆ ಪೂರಕವಾಗಿ, ಕಡಿಮೆ ದರದಲ್ಲಿ ಅವಕಾಶ ನೀಡಲು ಉದ್ದೇಶಿಸಲಾಗಿದೆ. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

    ಲಿಸ್ಟನ್ ಡೆರಿಕ್ ಡಿಸೋಜ
    ಉಪಾಧ್ಯಕ್ಷರು, ಕೊಂಕಣಿ ನಾಟಕ ಸಭಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts