More

  ಕಾರ್ಖಾನೆ ಪುನಶ್ಚೇತನಕ್ಕೆ ಪ್ರಾಮಾಣಿಕ ಪ್ರಯತ್ನ

  ಭದ್ರಾವತಿ: ಮೈಸೂರು ಮಹಾರಾಜರ ಕಾಲದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರು ಕಟ್ಟಿದ ಕಾರ್ಖಾನೆಯನ್ನು ನಷ್ಟದ ಕೂಪದಿಂದ ಹೊರತೆಗೆದು ಉಳಿಸಿಕೊಳ್ಳುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

  ಹಳೇನಗರದ ಕನಕಮಂಟಪ ಮೈದಾನದಲ್ಲಿ ಸೋಮವಾರ ಲೋಕಸಭಾ ಚುನಾವಣೆ ಮೈತ್ರಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.
  ಈ ಹಿಂದೆ ನಷ್ಟದಲ್ಲಿದ್ದ ಕಾರ್ಖಾನೆಯನ್ನು ಕೇಂದ್ರದ ಸೈಲ್ ಆಡಳಿತಕ್ಕೆ ಒಳಪಡಿಸಿ ಬಂಡವಾಳ ತೊಡಗಿಸುವ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಲು ದೇವೇಗೌಡರಿಂದ ಸಾಧ್ಯವಾಗಿತ್ತು. ಅಂಥದ್ದೇ ಸಮಸ್ಯೆ ಈಗ ಮರುಕಳಿಸಿದೆ. ಕಾರ್ಮಿಕರು ಆತಂಕಪಡುವುದು ಬೇಡ. ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಿ.ವೈ.ರಾಘವೇಂದ್ರ ಅವರ ಜತೆಗೂಡಿ ವಿಐಎಸ್‌ಎಲ್ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲು ದೆಹಲಿಗೆ ತೆರಳಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
  ಶಿವಮೊಗ್ಗ ಜಿಲ್ಲೆಯಲ್ಲಿ ರೈಲು, ರಸ್ತೆ, ಮೇಲ್ಸೇತುವೆ ಕಾಮಗಾರಿಗಳು ಸೇರಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಅವರಿಂದ ನಡೆದಿದೆ. ಈ ಬಾರಿ ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿ ಕಳುಹಿಸಿಕೊಡಿ. ಇಬ್ಬರೂ ಸೇರಿ ಮೋದಿ ಅವರ ಕೈ ಹಿಡಿದು ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡುತ್ತೇವೆ ಎಂದರು.
  ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಮಾತನಾಡಿ, ಅಪ್ಪಾಜಿ ಗೌಡ ಅವರಿಗೆ ಆಶೀರ್ವಾದ ಮಾಡಿದಂತೆ ರಾಘವೇಂದ್ರ ಅವರಿಗೂ ಆಶೀರ್ವಾದ ಮಾಡುತ್ತೀರಿ ಎಂಬ ಭರವಸೆಯಿಂದ ಇಲ್ಲಿಗೆ ಕರೆತಂದಿದ್ದೇನೆ. ನೀವೆಲ್ಲರೂ ಕಮಲದ ಗುರುತಿಗೆ ಮತ ಹಾಕುವ ಮೂಲಕ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ಮತಗಳನ್ನು ನೀಡಿ ಗೆಲುವಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
  ಸಾಲದ ಹೊರೆ ಜನರ ಮೇಲೆ: ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಈಗಾಗಲೇ 1.5 ಸಾವಿರ ಕೋಟಿ ಸಾಲ ಮಾಡಿದೆ. ಅದನ್ನು ಸಿದ್ದರಾಮಯ್ಯ ಆಗಲಿ, ಡಿ.ಕೆ.ಶಿವಕುಮಾರ್ ಆಗಲಿ ತೀರಿಸುವುದಿಲ್ಲ. ಯೋಜನೆಗಳ ಲಾಭ ಪಡೆಯುತ್ತಿರುವ ನೀವೇ ಕಟ್ಟಬೇಕು. ಈಗಲೇ ಹಣ ಹಾಕಿ ಎಂದು ಖಾಲಿ ಚೆಂಬು ಪ್ರದರ್ಶನ ಮಾಡುತ್ತಿದ್ದಾರೆ. ಇಂತಹ ಸರ್ಕಾರ ಬೇಕೇ, ಬೇಡವೇ ಎಂಬುದನ್ನು ಮತದಾರರು ಯೋಚಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್ ನೇತೃತ್ವದ ಸರ್ಕಾರ ಪಿಕ್‌ಪಾಕೆಟ್ ಸರ್ಕಾರ. ಗಂಡನ ಜೇಬಿನಿಂದ ಹಣ ಕಿತ್ತು ಹೆಂಡತಿಗೆ ಕೊಡುವ ಕೆಲಸ ಮಾಡುತ್ತಿದೆ. ಮಹಿಳೆಯರಿಗೆ 2 ಸಾವಿರ ರೂ., ಬಸ್‌ನಲ್ಲಿ ಉಚಿತ ಪ್ರಯಾಣ, ಬಾಂಡ್ ವಿತರಣೆ ಕಾರ್ಯಕ್ರಮಗಳು ಲೋಕಸಭೆ ಚುನಾವಣೆಯವರೆಗೆ ಮಾತ್ರ. ಹೆಚ್ಚು ದಿನ ನಡೆಯುವುದಿಲ್ಲ. ಇಲ್ಲಿನ ನಗರಸಭೆ ಅಧಿಕಾರ ಸಹ ಮೈತ್ರಿ ಸರ್ಕಾರದ ಕೈ ಸೇರಲಿದೆ
  ಕನಸು ನನಸು ಮಾಡುವೆ: ಇಂದಿನ ಚುನಾವಣೆ ನನ್ನ ಗೆಲುವಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲ. ರೈತರ, ಬಡವರ, ಯುವಕರ ಭವಿಷ್ಯಕ್ಕಾಗಿ ನಡೆಯುತ್ತಿರುವ ಚುನಾವಣೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು 3 ಬಾರಿ ಸಂಸದನಾಗಲು ಸಾಧ್ಯವಾಗಿದೆ. ಜಿಲ್ಲೆಯ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಅವೆಲ್ಲವನ್ನೂ ನಿವಾರಿಸುವ ಕೆಲಸ ನಾನು ಮಾಡುತ್ತೇನೆ ಈ ಬಾರಿ ನನಗೇ ಆಶೀರ್ವಾದ ಮಾಡಿ ಎಂದು ಲೋಕಸಭಾ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮನವಿ ಮಾಡಿದರು. ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆ ಸೇರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ದಿ. ಎಂ.ಜೆ.ಅಪ್ಪಾಜಿ ಗೌಡ ಅವರ ಅಪೇಕ್ಷೆಯಾಗಿತ್ತು. ಶಾರದಕ್ಕ ಅವರ ಜತೆಗೂಡಿ ಅಪ್ಪಾಜಿ ಅವರ ಕನಸನ್ನು ನನಸು ಮಾಡುತ್ತೇನೆ ಎಂದು ಭರವಸೆ ನೀಡಿದರು.
  ವಕೀಲ ಚಂದ್ರೇಗೌಡ ಹಾಗೂ ಕುಮಾರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರಾದಾ ಪೂರ‌್ಯಾನಾಯ್ಕ, ತಾಲೂಕು ಅಧ್ಯಕ್ಷ ಕರುಣಾಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಣ್ಣ, ಬಿಜೆಪಿ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುಳಾ, ವಿಧಾನಪರಿಷತ್ ಸದಸ್ಯ ಎಸ್.ಎಲ್,ಬೋಜೇಗೌಡ, ರಘುಪತಿ ಭಟ್, ಪ್ರಮುಖರಾದ ಮಂಗೋಟೆ ರುದ್ರೇಶ್, ಕುಮ್ರಿ ಚಂದ್ರಣ್ಣ, ಜೆ.ಪಿ.ಯೋಗೇಶ್, ಎಂ.ಎ.ಅಜಿತ್, ಆನಂದ್‌ಕುಮಾರ್, ಮಂಜುನಾಥ್ ಕದಿರೇಶ್, ಉಮೇಶ್, ಮಧುಸೂದನ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts