More

    ಪಿತ್ತದಗಂಧೆಯ ಶಮನ ಉಪಾಯ

    ಧನ್ವಂತರಿಯಾವುದೇ ವ್ಯಕ್ತಿಗಾದರೂ ಚರ್ಮದ ಕಾಯಿಲೆ ಬಂತೆಂದರೆ ಆಯುರ್ವೆದ ವೈದ್ಯರಲ್ಲಿಗೆ ಚಿಕಿತ್ಸೆಗೆ ತೆರಳಿದಾಗ ವಿಶೇಷವೊಂದು ಕಾದಿರುತ್ತದೆ. ವೈದ್ಯನು ನೀಡುವ ಚಿಕಿತ್ಸಾ ಸಲಹೆಯಲ್ಲಿ ರಕ್ತಶುದ್ಧಿ ಮಾಡುವ ಔಷಧಗಳು ಸೇರಿಕೊಂಡಿರುತ್ತವೆ. ರೋಗಿ ಆಗತಾನೇ ರಕ್ತ ತಪಾಸಣೆ ಮಾಡಿಕೊಂಡಿದ್ದು ಆ ಪರೀಕ್ಷೆಗಳೆಲ್ಲವೂ ಸಹಜ ಮಟ್ಟವನ್ನು ಹೊಂದಿದೆ ಎಂದಾದರೆ ರಕ್ತವು ಸರಿಯಿದೆ ಎಂದೇ ಅರ್ಥ ತಾನೇ? ಹಾಗಿದ್ದರೂ ರಕ್ತ ಶುದ್ಧಿಗೆ ಔಷಧ ಕೊಡುತ್ತಾರೆ ಎಂಬುದರಲ್ಲೇ ಆ ವಿಶೇಷ ಅಡಗಿದೆ. ಏಕೆಂದರೆ ಆಯುರ್ವೆದ ಹೇಳುವ ಶುದ್ಧ ರಕ್ತವೇ ಬೇರೆ! ಸರಳವಾಗಿ ವಿಶ್ಲೇಷಿಸಬೇಕೆಂದರೆ ಚರ್ಮದ ಕಾಯಿಲೆ ಅದ್ಯಾವುದೇ ಇರಲಿ, ರಕ್ತದಲ್ಲಿ ದೋಷವಿಲ್ಲದೆ ಅದು ಹುಟ್ಟಿಕೊಳ್ಳುವುದಿಲ್ಲ. ಒಂದೇ ಮೂಲದ ನೀರಿನಿಂದ ಎಲ್ಲರ ಆರೋಗ್ಯಕ್ಕೂ ತೊಂದರೆಯಾಗುತ್ತಿದೆ ಎಂದರೆ ಆ ನೀರಿನಲ್ಲಿ ದೋಷವಿದೆ ಎಂದೇ ಅರ್ಥ. ಅಂತೆಯೇ ರಕ್ತದ ಅಶುದ್ಧತೆ. ರಕ್ತಧಾತು ಸಹಜವಾಗಿದ್ದಾಗ ಏನೆಲ್ಲಾ ಗುಣಕಾರ್ಯಗಳು, ರಕ್ತಧಾತು ವೃದ್ಧಿಯಾಗಿದ್ದಾಗ ಅಥವಾ ಕ್ಷೀಣವಾದಾಗ ಕಂಡುಬರುವ ಲಕ್ಷಣಗಳು, ರಕ್ತದ ಮೇಲೆ ವಾತ, ಪಿತ್ತ, ಕಫಗಳ ಊರ್ಜಿತತೆ ಹಾಗೂ ಹೀನತೆಯಿಂದಾಗುವ ಪರಿಣಾಮಗಳನ್ನೆಲ್ಲಾ ಆಯುರ್ವೆದ ವಿವರಿಸಿದೆ. ಇದಲ್ಲದೆ ರೋಗ ಸಂದರ್ಭದಲ್ಲಿ ಶರೀರದಲ್ಲಾಗುವ ಬದಲಾವಣೆ, ಗುಣಲಕ್ಷಣಗಳನ್ನು ತಿಳಿಹೇಳಿದೆ. ಇವೆಲ್ಲವನ್ನೂ ಸಂಯೋಜಿಸಿಕೊಂಡು ಸೂಕ್ಷ್ಮವಾಗಿ ಅವಲೋಕಿಸಿದಾಗ ಚರ್ಮವ್ಯಾಧಿಗಳಲ್ಲಿ ರಕ್ತದ ಗುಣ ವಿಕೃತಿ ಕಂಡುಬರುವುದರಿಂದ ರಕ್ತವನ್ನು ಶುದ್ಧಿಮಾಡುವ ರಕ್ತಶೋಧಕ ಔಷಧಿಗಳನ್ನು ನೀಡಿ ತನ್ಮೂಲಕ ಚರ್ಮ ರೋಗಗಳನ್ನು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಾಗುವುದು ಆಯುರ್ವೆದದ ಸಾರ್ವಕಾಲಿಕ ವಿಶೇಷತೆಯಾಗಿದೆ.

    ಶೀತಪಿತ್ತ ಅರ್ಥಾತ್ ಪಿತ್ತದಗಂಧೆ ಕಾಯಿಲೆ ಇದ್ದಾಗಲೂ ಅದನ್ನು ಸಂಪೂರ್ಣವಾಗಿ ಗುಣಪಡಿಸುವಲ್ಲಿ ರಕ್ತಶೋಧಕಗಳು ಮಹತ್ವಪೂರ್ಣ ಭೂಮಿಕೆಯನ್ನು ಹೊಂದಿವೆ. ಕೆಲವಾರು ವರ್ಷಗಳಿಂದ ಅರ್ಟಿಕೇರಿಯಾ ತೊಂದರೆ ಇದ್ದಾಗ ದೀರ್ಘಕಾಲದ ರಕ್ತಶುದ್ಧಿಗೊಳಿಸುವ ಔಷಧಿಗಳು, ದೇಹದ ವ್ಯಾಧಿ ಕ್ಷಮತ್ವ ಹೆಚ್ಚಿಸುವ ರೋಗ ನಿರೋಧಕ ಶಕ್ತಿವರ್ಧಕ ಔಷಧಗಳು ಹಾಗೂ ನೇರವಾಗಿ ವ್ಯಾಧಿಗೆ ಸಂಬಂಧಿತ ಚಿಕಿತ್ಸಾ ಕ್ರಮ ಈ ಮೂರರ ಅಗತ್ಯವಿರುತ್ತದೆ. ಮೂವತ್ತು ನಲವತ್ತು ವರ್ಷಗಳಿಂದ ಈ ಕಾಯಿಲೆ ಇದೆಯೆಂದು ರೋಗಿಯು ತೊಂದರೆಗಳಿಂದ ನರಳಿ ಬಳಲಿ ಬಂದಾಗ ಹಾಗೂ ರೋಗವು ತೀವ್ರ ಸ್ವರೂಪದಲ್ಲಿದ್ದಾಗ ಶರೀರ ಶುದ್ಧಿಯ ಚಿಕಿತ್ಸಾ ವಿಶೇಷಗಳಾದ ವಮನಕರ್ಮ, ವಿರೇಚನ ಕರ್ಮಗಳೆಂಬ ಪಂಚಕರ್ಮ ಚಿಕಿತ್ಸೆಗಳು ರೋಗಿಯ ಪಾಲಿಗೆ ವರದಾನವಾಗುತ್ತವೆ. ದೇಸಿ ಗೋವಿನ ಹಳೆಯ ತುಪ್ಪ ಹಾಗೂ ಸೈಂಧವ ಲವಣ ಸೇರಿಸಿ ಮಾಡುವ ಅಭ್ಯಂಗ, ಸಾಸಿವೆ ಎಣ್ಣೆಯಿಂದ ಅಭ್ಯಂಗ, ವಿವಿಧ ತಿಕ್ತಕ ಘೃತಗಳ ಬಳಕೆಯು ಪಂಚಕರ್ಮ ಚಿಕಿತ್ಸೆ ಈ ರೋಗಿಗಳಿಗೆ ಇನ್ನಷ್ಟು ನೆರವಾಗುತ್ತವೆ. ರಕ್ತಶುದ್ಧಿಕರಣವೇ ಗುರಿಯಾಗಿರುವ ರಕ್ತಮೋಕ್ಷಣ ಎಂಬ ಪಂಚ ಕರ್ಮ ಚಿಕಿತ್ಸೆಯೂ ಪಿತ್ತದಗಂಧೆ, ಕೋಠ, ಉದರ್ದ ರೋಗಗಳಲ್ಲಿ ಪರಿಣಾಮಕಾರಿ ಆಗಿದ್ದು ತನ್ನದೇ ಆದ ಛಾಪನ್ನು ಹೊಂದಿದೆ.

    ಬಿಸಿನೀರು ಸ್ನಾನ, ಬಿಸಿನೀರು ಪಾನ, ಒಂದು ವರ್ಷ ಹಳೆಯದಾದ ಗೋಧಿ, ಜೋಳ, ಹೆಸರುಕಾಳು, ಹುರುಳಿಕಾಳುಗಳು ಶೀತಪಿತ್ತ ರೋಗ ನಿವಾರಣೆಗೆ ಹಿತವಾದವುಗಳು. ಅಲ್ಪ ಪ್ರಮಾಣದಲ್ಲಿ ಹಾಗಲಕಾಯಿ ಬಳಕೆ, ಮೂಲಂಗಿ, ಹೀರೆಕಾಯಿ, ಪಡುವಲಕಾಯಿ, ಸೋರೆಕಾಯಿ, ಬೂದಗುಂಬಳಕಾಯಿ, ಸೌತೆಕಾಯಿ ಮೊದಲಾದ ತರಕಾರಿಗಳು, ಸಾವಯವ ದ್ರಾಕ್ಷಿ, ದಾಳಿಂಬೆ, ಜೇನುತುಪ್ಪ, ಪಿತ್ತಕಡಿಮೆ ಮಾಡುವ ಕಹಿ ಹಾಗೂ ಖಾರ ರುಚಿಯ ಕಷಾಯಗಳು ಸಾಮಾನ್ಯವಾಗಿ ಹಿತವನ್ನು ಉಂಟು ಮಾಡುತ್ತವೆ. ಸೊಗದೆಬೇರು, ಖದಿರ, ಮಂಜಿಷ್ಠ, ಅರಿಶಿನ, ಲಾವಂಚ, ಶ್ರೀಗಂಧ, ರಕ್ತಚಂದನ, ದೊಡ್ಡಪತ್ರೆ, ತುಳಸಿ, ಗರಿಕೆ, ಕರಿಬೇವು, ಕೊತ್ತಂಬರಿ, ದಾಲ್ಚಿನಿ ಮೊದಲಾದ ಅನೇಕ ಸಾಂಬಾರ ಪದಾರ್ಥಗಳು ಆಯುರ್ವೆದ ಚಿಕಿತ್ಸೆಯಲ್ಲಿ ಬಳಸಲ್ಪಡುತ್ತವೆ. ಕಾಚಿಗಿಡದ ತೊಗಟೆಯಿಂದ ಮಾಡುವ ಕೆಂಪುಬಣ್ಣದ ಕುಡಿಯುವ ನೀರು, ಲಾವಂಚದ ನೀರು, ಸೊಗದೆಬೇರಿನ ರುಚಿಕರ ಶರಬತ್ತು, ಆಹಾರದಲ್ಲಿ ಅರಿಶಿನದ ಬಳಕೆ ಅತ್ಯಂತ ಲಾಭದಾಯಕ. ಬದನೆಕಾಯಿ, ಸಿಹಿಗುಂಬಳಕಾಯಿ, ನುಗ್ಗೆಕಾಯಿ, ಶೇಂಗಾ, ಶೀತಲ ಪದಾರ್ಥ ಸೇವನೆ, ಮಿತಿಮೀರಿ ಹಾಲು, ಬೆಣ್ಣೆ ಸೇವನೆ, ಸಿಹಿತಿನಿಸುಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳು, ಮದ್ಯಪಾನ, ಕರಾವಳಿ ಪ್ರದೇಶದ ಪ್ರಾಣಿಗಳ ಮಾಂಸ, ಮೀನು ಸೇವನೆ, ಅತಿಯಾದ ಲೈಂಗಿಕ ಕ್ರಿಯೆ, ಸಿಹಿ, ಹುಳಿ, ಜಿಡ್ಡು ಭರಿತ ಭೋಜನ, ಅತಿಪ್ರಮಾಣದಲ್ಲಿ ಆಹಾರ ಸೇವನೆ, ವಿರುದ್ಧ ಗುಣದ ಆಹಾರ ಭಕ್ಷಣೆ, ದಕ್ಷಿಣ ಹಾಗೂ ಪೂರ್ವ ದಿಕ್ಕಿನ ಗಾಳಿಗೆ ತೆರೆದುಕೊಳ್ಳುವುದು, ತಂಗಾಳಿಗೆ ಮೈಯೊಡ್ಡುವುದು, ತಣ್ಣೀರು ಸ್ನಾನ, ಬೆಂಕಿಯಿಂದ ಮೈ ಕಾಯಿಸಿಕೊಳ್ಳುವುದು- ಇವೆಲ್ಲವೂ ಅಪಥ್ಯವಾಗಿದ್ದು ಇವುಗಳಿಂದ ದೂರವಿದ್ದಷ್ಟು ಕ್ಷೇಮ. ಶರೀರ ಕ್ಷಮತೆ ಹಾಗೂ ರಕ್ತದ ಪರಿಶುದ್ಧತೆ ಇವು ಶೀತಪಿತ್ತ ನಿಮೂಲನೆಗೆ ಆಯುರ್ವೆದ ನೀಡಿದ ದಿವ್ಯಮಂತ್ರ.

    ಬಿಗ್​ಬಾಸ್​-ನಟ ಕಿಚ್ಚ ಸುದೀಪ್​ ಕುರಿತು ಹೇಳಿಕೆ; ಯಾರೋ ನನ್ನ ಮಾತುಗಳನ್ನು ತಿರುಚಿದ್ದಾರೆ ಎಂದ ರಕ್ಷಕ್​ ಬುಲೆಟ್​

    ರೀಲ್ಸ್ ಮಾಡ್ತಾ ಫುಲ್‌ ಆ್ಯಕ್ಟೀವ್ ಇದ್ದ ಟೀಚರ್ ಕೊಲೆ ಪ್ರಕರಣ; ಹತ್ಯೆ ಹಿಂದಿನ ಕಾರಣ ಬಿಚ್ಚಿಟ್ಟ ಎಸ್​ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts