More

    ಜೆಡಿಎಸ್ ನಾಯಕ ಕುಮಾರಸ್ವಾಮಿಗೆ ಅಮಿತ್ ಶಾ ಅಭಯ

    ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಗೆ ಧಕ್ಕೆ ತರಬಹುದು ಎಂಬ ಅನುಮಾನಗಳ ನಡುವೆ ಎಚ್.ಡಿ. ಕುಮಾರಸ್ವಾಮಿ ಮತ್ತು ಅಮಿತ್ ಶಾ ಶನಿವಾರ ತಡ ರಾತ್ರಿ ಮಹತ್ವದ ಮಾತುಕತೆ ನಡೆಸಿದ್ದಾರೆ.

    ಈ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣ, ಎಚ್.ಡಿ.ರೇವಣ್ಣ ಬಂಧನ ಮತ್ತು ಮೈತ್ರಿ ಬಗ್ಗೆ ಚರ್ಚೆಗಳಾಗಿವೆ. ಈ ವೇಳೆ ಜೆಡಿಎಸ್‌ನ ಮಿತ್ರ ಪಕ್ಷವಾಗಿ ಬಿಜೆಪಿ ನಿಮ್ಮ ಜತೆ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭರವಸೆ ನೀಡಿದರೆನ್ನಲಾಗಿದೆ.
    ಮಹಿಳೆ ಅಪಹರಣ, ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್ ಪ್ರಕರಣದಿಂದಾಗಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಯಾವುದೇ ರೀತಿಯ ಅಡ್ಡಿ ಉಂಟಾಗುವುದಿಲ್ಲ ಎಂದು ಅಭಯ ನೀಡಿದ್ದಾರೆ.

    ಈ ಪ್ರಕರಣದಿಂದ ಮೈತ್ರಿಗೆ ಮುಜುಗರವಾಗಿರುವುದು ನಿಜ. ನೀವು ಈಗಾಗಲೇ ದೃಢವಾದ ನಿರ್ಧಾರವನ್ನು ತೆಗೆದುಕೊಂಡು ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದೀರಿ. ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಸ್‌ಐಟಿ ಬಂಧನದಲ್ಲಿರುವ ರೇವಣ್ಣ ಅವರನ್ನೂ ಸಹ ನೀವು ಸಮರ್ಥಿಸಿಕೊಂಡಿಲ್ಲ. ಈ ಪ್ರಕರಣ ಹೊರಬಂದ ನಂತರ ನಾನು ನಿಮ್ಮ ಎಲ್ಲ ಹೇಳಿಕೆಗಳನ್ನು ಗಮನಿಸಿದ್ದೇನೆ. ಪಕ್ಷ ಉಳಿಸುವ ನಿಟ್ಟಿನಲ್ಲಿ ನೀವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸ್ವಾಗತಾರ್ಹ. ಕಾನೂನು ಹೋರಾಟದಲ್ಲಿ ನಾವು ನಿಮ್ಮ ಜತೆಗಿರುತ್ತೇವೆ. ನೀವು ಧೈರ್ಯ ಕಳೆದುಕೊಳ್ಳಬೇಡಿ ಎಂದು ವಿಶ್ವಾಸ ತುಂಬುವ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗಿದೆ.

    ಮೈತ್ರಿಗೆ ಧಕ್ಕೆ ಇಲ್ಲ, ಧೈರ್ಯದಿಂದಿರಿ

    ಈ ಪ್ರಕರಣದಿಂದಾಗಿ ಮೈತ್ರಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ಇಂತಹ ಪ್ರಕರಣಗಳು ನಡೆದಾಗ ಯಾವುದೇ ರಾಜಕೀಯ ಪಕ್ಷಗಳಿಗೆ ಮುಜುಗರವಾಗುತ್ತದೆ. ನಾವು ನಿಮಗೆ ಸಂಪೂರ್ಣವಾಗಿ ಕಾನೂನಿನ ಹೋರಾಟಕ್ಕೆ ಬೆಂಬಲ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
    ಕಾನೂನಿಗೆ ತಲೆ ಬಾಗುವುದಾಗಿ ನೀವು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ತಪ್ಪು ಮಾಡಿಲ್ಲ ಎಂದರೆ ಖಂಡಿತವಾಗಿಯೂ ಕಾನೂನು ಹೋರಾಟದಲ್ಲಿ ಜಯ ಸಿಕ್ಕೇ ಸಿಗುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಧೈರ್ಯ ಹೇಳಿದ್ದಾರೆ.

    ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತ

    ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ನಮ್ಮ ಪಕ್ಷದ ಆಂತರಿಕ ಸಮೀಕ್ಷೆಯೂ ಅದನ್ನೇ ಹೇಳಿದೆ. ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ. ಕರ್ನಾಟಕದಲ್ಲಿ ನಾವು ನಮ್ಮ ನಿರೀಕ್ಷೆಯಷ್ಟೇ ಸ್ಥಾನಗಳನ್ನು ಗೆಲ್ಲುತ್ತೇವೆ. 2028 ವಿಧಾನಸಭೆ ಚುನಾವಣೆವರೆಗೂ ನಮ್ಮ ಮೈತ್ರಿ ಮುಂದುವರೆಯಬೇಕು. ಈ ಪ್ರಕರಣವನ್ನು ಕಾನೂನು ರೀತಿಯಲ್ಲಿ ಹೋರಾಟ ನಡೆಸಿ ಎಂದು ಹೇಳಿ ಅಮಿತ್ ಶಾ ಅವರು ಕುಮಾರಸ್ವಾಮಿಗೆ ವಿಶ್ವಾಸ ತುಂಬಿದ್ದಾರೆ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts