ಬ್ಯಾಡಗಿ: ವಿದ್ಯುತ್ ಬಳಕೆಯ ಪಾವತಿ ಮೊತ್ತ ದುಪ್ಪಟ್ಟಾಗಿದ್ದರಿಂದ ಜನರು ಬಿಲ್ ಸಂದಾಯಿಸಲು ಹಿಂದೇಟು ಹಾಕುತ್ತಿದ್ದು, ತಾಲೂಕಿನ ಶಿಡೇನೂರು ಗ್ರಾಮಸ್ಥರು ಸಭೆ ಸೇರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಜರುಗಿದೆ.
ವಿದ್ಯುತ್ ಬಿಲ್‌ಗಳನ್ನು ರೀಡರ್‌ಗಳು ಮನೆ ಮನೆಗೆ ನೀಡುತ್ತಿದ್ದಂತೆ ಗ್ರಾಮಸ್ಥರು ದೇವಸ್ಥಾನದಲ್ಲಿ ಸಭೆ ನಡೆಸಿ, ನಾವು ಪ್ರತಿ ತಿಂಗಳು ಬರುವುದಕ್ಕಿಂತ ಎರಡು ಪಟ್ಟು ಬಿಲ್ ಹೆಚ್ಚಾಗಿದೆ. ಬಹುತೇಕ ಗ್ರಾಹಕರು ಬಳಕೆ ಪ್ರಮಾಣದ ಮೇಲೆ 150 ರಿಂದ 500 ರೂಪಾಯಿವರೆಗೆ ಬಿಲ್ ಸಂದಾಯಿಸುತ್ತಿದ್ದರು. ನಾವು ಬಳಕೆ ಮಾಡಿರುವುದು ಅತಿ ಕಡಿಮೆ ಯೂನಿಟ್. ಇತರ ಕಾಲಂನಲ್ಲಿ ಹೆಚ್ಚಿನ ಮೊತ್ತ ತೋರಿಸಲಾಗಿದೆ. ಇದು ಏನೆಂದು ತಿಳಿಯದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯೂನಿಟ್ ದರ ಏರಿಕೆ ಆಗಿದೆ. ಅಲ್ಲದೆ, ಸ್ಥಿರ ಮೊತ್ತ ಹೆಚ್ಚಿಗೆ ಮಾಡಿರುವುದು ಸರಿಯಲ್ಲ. ಹೆಚ್ಚಿನ ಮೊತ್ತದ ಬಿಲ್ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ, ಹೆಸ್ಕಾಂ ಇಂಜಿನಿಯರ್ ಆಗಲಿ, ಸಿಬ್ಬಂದಿ ಆಗಲಿ ಸ್ಪಷ್ಟ ಉತ್ತರ ನೀಡಲು ನಿರಾಕರಿಸುತ್ತಿದ್ದಾರೆೆ. ವಿದ್ಯುತ್ ನಿಗಮ ಹಾಗೂ ಮೇಲಧಿಕಾರಿಗಳ ನಿರ್ದೇಶನ ಪಾಲಿಸುವುದಷ್ಟೇ ನಮ್ಮ ಕೆಲಸ ಎನ್ನುತ್ತಿದ್ದಾರೆ. ಬಿಲ್ ವಸೂಲಿಗೆ ಬರುವ ಸಿಬ್ಬಂದಿ ಮಾತನಾಡಿಸಿದರೆ, ಹೆಸ್ಕಾಂ ಕಚೇರಿಗೆ ತೆರಳಿ ಮಾಹಿತಿ ಪಡೆದುಕೊಳ್ಳಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸಭೆ ಏರ್ಪಡಿಸಿ, ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು. ಯಾವುದೇ ಕಾರಣಕ್ಕೂ ನಾವು ಬಿಲ್ ಪಾವತಿಸುವುದಿಲ್ಲ ಎಂದು ಹೇಳಿದರು.
ಎಸ್.ಬಿ. ಒಡೆಯನಪುರ, ಬಿ.ಎಂ. ಮಲ್ಲಾಡದ, ಕೆ.ಆಯ್. ಮಳ್ಳಪ್ಪನವರ, ಈರಪ್ಪ ಬಿದರಿ, ಬಸವರಾಜ ಮಾಸಣಗಿ, ಶಿದ್ದನಗೌಡ್ರ ಪಾಟೀಲ, ಈರನಗೌಡ ತೆವರಿ, ಗೋಪಾಲಪ್ಪ ಪೂಜಾರ, ಜಿ.ಎಸ್. ಕೊಪ್ಪದ ನಾಗಪ್ಪ ತೆವರಿ ಇತರರಿದ್ದರು.
ಹೆಸ್ಕಾಂ ನೀತಿಯಿಂದ ಬಡವರು ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ವಿದ್ಯುತ್ ದರ ಏರಿಸಿ ವಿನಾಕಾರಣ ತೊಂದರೆ ನೀಡಲಾಗುತ್ತಿದೆ. ಪಾವತಿಗಳಲ್ಲಿ ಮುದ್ರಿಸಿರುವುದು ಅಸ್ಪಷ್ಟವಾಗಿದೆ. ಅದರಲ್ಲಿ ಇತರೆ ವೆಚ್ಚ ಹಾಗೂ ಸರಾಸರಿ ಕ್ರಮಾಂಕ ಹೊಂದಾಣಿಕೆ ಇಲ್ಲವಾಗಿದೆ. ಶೀಘ್ರದಲ್ಲೆ ಗ್ರಾಮ ಪಂಚಾಯತಿ ಮಟ್ಟದಿಂದಲೇ ಹೋರಾಟ ಆರಂಭಿಸುತ್ತೇವೆ.
I ಕಿರಣಕುಮಾರ ಗಡಿಗೋಳ, ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ
ಸರ್ಕಾರ ಹಾಗೂ ನಮ್ಮ ಮೇಲಧಿಕಾರಿಗಳ ನಿರ್ದೇಶನದಂತೆ ನಾವು ಕಾರ್ಯನಿರ್ವಹಿಸಬೇಕಿದೆ. ಸಿಬ್ಬಂದಿ ಬಿಲ್‌ಗಳನ್ನು ಕ್ರಮಬದ್ಧವಾಗಿ ನೀಡಿದ್ದಾರೆ. ವ್ಯತ್ಯಾಸಗಳಿದ್ದಲ್ಲಿ ಕಚೇರಿಗೆ ದೂರು ಸಲ್ಲಿಸಬಹುದು. ದರ ಇತ್ಯಾದಿ ವಿಚಾರದಲ್ಲಿ ಮೇಲಧಿಕಾರಿಗಳ ಆದೇಶ ಪಾಲಿಸುತ್ತೇವೆ.I ಹಾಲೇಶ ಅಂತರವಳ್ಳಿ, ಹೆಸ್ಕಾಂ ಇಂಜಿನಿಯರ್