More

    ಕಾಮ, ಅರ್ಥ ನಿಯಂತ್ರಿಸುವುದೇ ಧರ್ಮ: ಕೂಡಲಿ ಶ್ರೀ

    ಶಿವಮೊಗ್ಗ: ನಾವು ಹೇಳಿದಂತೆಯೇ ಪ್ರಪಂಚ ನಡೆಯಬೇಕು ಎಂಬುದು ಕೆಲ ಧರ್ಮದವರ ಅಪೇಕ್ಷೆ. ಇದಕ್ಕಾಗಿ ಪೈಶಾಚಿಕ ಶಕ್ತಿಗಳು ಕೆಲಸ ಮಾಡುತ್ತಿದೆ. ಅವರ ಆಶಯಕ್ಕೆ ಹಿಂದು ಧರ್ಮ ಅಡ್ಡಿಯಾಗಿದೆ. ಇದನ್ನು ಸಹಿಸಲು ಅಂಥವರಿಗೆ ಸಾಧ್ಯವಾಗುತ್ತಿಲ್ಲ ಎಂದು ಕೂಡಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಹೇಳಿದರು.

    ಜಿಲ್ಲಾ ಬ್ರಾಹ್ಮಣ ಮಹಾಸಭಾ ಏರ್ಪಡಿಸಿದ್ದ ಶಾಕಲ ಋಕ್ಸಂಹಿತಾ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀಗಳು, ಹಿಂದು ಧರ್ಮವನ್ನು ಕ್ಷೀಣವಾಗಿಸಲು ಕೆಲ ಧರ್ಮದವರು ಶಿಕ್ಷಣದ ಹೆಸರಿನಲ್ಲಿ ಸೇವೆ ಆರಂಭಿಸಿದ್ದಾರೆ. ಅದರ ಮೂಲಕ ನಮ್ಮ ಸಂಸ್ಕೃತಿ ಮೇಲೆ ಪ್ರಭಾವ ಬೀರುವ ಪ್ರಯತ್ನವಾಗುತ್ತಿದೆ. ಈ ಬಗ್ಗೆ ಹಿಂದುಗಳಿಗೆ ಎಚ್ಚರ ಅವಶ್ಯ ಎಂದರು.
    ಅರ್ಥ, ಕಾಮಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಧರ್ಮ ಮಾಡಬೇಕಿದೆ. ಅರ್ಥ ಹಾಗೂ ಕಾಮವನ್ನು ಪೂರೈಸಿದಷ್ಟೂ ಅಗ್ನಿಗೆ ತುಪ್ಪ ಸುರಿದು ಇನ್ನಷ್ಟು ಪ್ರಜ್ವಲಿಸಲು ಅವಕಾಶ ನೀಡಿದಂತಾಗುತ್ತದೆ. ಕಾಮ ಹಾಗೂ ಅರ್ಥಕ್ಕೆ ಅಂತ್ಯವೇ ಇಲ್ಲ. ಇವುಗಳನ್ನು ನಿಯಂತ್ರಿಸುವುದೇ ಧರ್ಮ. ಯಾವುದನ್ನು ಬಯಸಬೇಕು, ಎಷ್ಟು ಅಗತ್ಯವಿದೆ ಎಂಬುದನ್ನು ಧರ್ಮ ನಮಗೆ ತಿಳಿಸುತ್ತದೆ ಎಂದರು.
    ಯಾಗಗಳೇ ಧರ್ಮ ಎಂದು ಉಪನಿಷತ್ ತಿಳಿಸಿದೆ. ಸಾಂಗವಾಗಿ ವೇದಾಧ್ಯಯನ ಮಾಡಬೇಕು. ಯಾಗಗಳನ್ನು ಮಾಡುವುದೇ ಬ್ರಾಹ್ಮಣ ಧರ್ಮ. ವೇದಾಧ್ಯಯನ ಮಾಡಿದವರನ್ನು ಬ್ರಾಹ್ಮಣ ಎನ್ನುತ್ತಾರೆ. ಪ್ರಸ್ತುತ ಆರ್ಥಿಕ, ಸಾಮಾಜಿಕ ಸನ್ನಿವೇಶದಲ್ಲಿ ಅನೇಕ ಬದಲಾವಣೆ ಆಗಿದೆ. ಈಗ ಪುನಃ ವೇದಾಧ್ಯಯನ ಜಾಗೃತಿ ಮೂಡುತ್ತಿರುವುದು ಒಳ್ಳೆಯ ಬೆಳವಣಿಗೆ. ವೇದಗಳನ್ನು ಕಲಿಯದಿದ್ದರೂ ಅದನ್ನು ಆಲಿಸಬೇಕು ಎಂದು ತಿಳಿಸಿದರು.
    ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್, ಶಿಕ್ಷಣದ ಉದ್ದೇಶದಿಂದ ಆರಂಭವಾದ ಮಹಾಸಭಾ 106 ವರ್ಷ ಪೂರೈಸಿದೆ. ಇದರ ಉದ್ದೇಶ ಈಡೇರಿದೆ. ಆರ್ಥಿಕವಾಗಿ ಹಿಂದುಳಿದ 750 ವಿಪ್ರ ಕುಟುಂಬಗಳಿಗೆ ಮಾಸಿಕವಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಣಕ್ಕಾಗಿ ಆರ್ಥಿಕ ಶಕ್ತಿ ಒದಗಿಸಲಾಗುತ್ತಿದೆ ಎಂದು ಹೇಳಿದರು.
    ಸಂಹಿತಾ ಪಾರಾಯಣ ಹಾಗೂ ಯಜ್ಞ ಆರಂಭಿಸಲು ಪ್ರೇರಣೆ ನೀಡಿದವರು ಅ.ಪ.ರಾಮಭಟ್ಟರು. ಮಹಾಸಭಾದಿಂದ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸಗಳು ನಡೆಯುತ್ತಿವೆ. ವಸಂತ ಶಿಬಿರದ ಮೂಲಕ ವೇದ ಮಂತ್ರಗಳನ್ನು ಕಲಿಸಲಾಗುತ್ತಿದೆ. 250ಕ್ಕೂ ಹೆಚ್ಚು ಗೋವುಗಳಿಗಾಗಿ ಗೋಶಾಲೆ ತೆರೆಯಲಾಗಿದೆ ಎಂದು ಮಹಾಸಭಾದ ಚಟುವಟಿಕೆಗಳನ್ನು ವಿವರಿಸಿದರು.
    ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸಿದ ಅನೇಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts