More

    ಧರ್ಮ, ದೇಶದ ಕೆಲಸದಲ್ಲಿ ಕಾಂಗ್ರೆಸ್ ಮುಂಚೂಣಿ

    ಬಾಗಲಕೋಟೆ: ಧರ್ಮ ಹಾಗೂ ದೇಶದ ವಿಷಯದಲ್ಲಿ ನಾವು ಬಿಜೆಪಿಯಿಂದ ಕಲಿಯಬೇಕಾ? ಧರ್ಮ ಮತ್ತು ದೇಶದ ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ಕೆಲಸವನ್ನು ಬಿಜೆಪಿಗೆ ಯಾವಾಗಲೂ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ ಕಮಲ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

    ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅವರು ರಾಮ ಮಂದಿರ ಕಟ್ಟಿದ್ದು ನಾವೇ. ಇದು ಬಿಜೆಪಿಯವರು ಕಟ್ಟಿದ್ದು ಎಂದರೆ ಹೇಗೆ? ತಮ್ಮ ಪಕ್ಷದ ಆಸ್ತಿ ತರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಹಿಂದೆ ಕಾಂಗ್ರೆಸ್ ಪಕ್ಷ ಬಂಗಾರಪ್ಪ ಸಿಎಂ ಇದ್ದಾಗ ದೇವಸ್ಥಾನ ನಿರ್ಮಾಣಕ್ಕಾಗಿಯೇ ಆರಾಧನೆ ಎನ್ನುವ ಯೋಜನೆ ತಂದಿದ್ದರು. ಆಗ ಪ್ರತಿ ಹಳ್ಳಿಯಲ್ಲಿ ದೇವಸ್ಥಾನ ಕಟ್ಟಲಾಗಿದೆ. ಧರ್ಮ ಎಂದರೆ ಬರೀ ದೊಡ್ಡವರು, ಶ್ರೀಮಂತರಲ್ಲ. ಸಣ್ಣ ಸಣ್ಣ ಜಾತಿಯವರಿಗೆ ಮಂದಿರ ಕಟ್ಟಲು ಆಗಲ್ಲ. ಆದರೆ, ಅವರು ಅಪಾರ ದೈವ ಭಕ್ತರು. ಅವರೆಲ್ಲ ದುರ್ಗಮ್ಮ ದೇವರಿಗೆ ಕೈ ಮುಗಿಯುತ್ತಾರೆ. ಅಂತವರಿಗೆಲ್ಲ ನಾವು ಮಂದಿರ ಕಟ್ಟಿಕೊಟ್ಟಿದ್ದೇವೆ. ನಾವು ಅದೆಷ್ಟೋ ದೇವಾಲಯ ಕಟ್ಟಿದ್ದೇವೆ, ಕಟ್ಟುತ್ತಲೇ ಇರುತ್ತೇವೆ. ಅದನ್ನು ರಾಜಕೀಯವಾಗಿ ಮಾತ್ರ ಬಳಕೆ ಮಾಡಲ್ಲ. ಇವರು(ಬಿಜೆಪಿ) ರಾಮಮಂದಿರವನ್ನು ರಾಜಕೀಯವಾಗಿ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

    ನಾನು ಯಾವ ದೇವರಿಗೆ ಹೋಗಬೇಕು ಎನ್ನುವುದು ನನಗೆ ಬಿಟ್ಟ ವಿಚಾರ. ಇವರು(ಬಿಜೆಪಿ) ಮಾಡುತ್ತಿರುವುದೇನು? ಸಿದ್ದರಾಮಯ್ಯ ರಾಮಮಂದಿರಕ್ಕೆ ಹೋಗುತ್ತಾರೋ ಇಲ್ಲವೋ? ಹೋಗಲ್ಲ ಅಂದ್ರಾ ಅವರು ಹಿಂದು ಧರ್ಮ ವಿರೋಧಿ. ನಾವೂ ಅದೇ ಹಿಂದು ಧರ್ಮದಲ್ಲಿ ಇದ್ದವರು. ಎಷ್ಟೋ ವರ್ಷಗಳಿಂದ ಅಸ್ಪಶ್ಯತೆ ಅನುಭವಿಸಿದರೂ ನನ್ನ ಧರ್ಮ ಹಿಂದು ಎನ್ನುವ ಭಾವನಾಜೀವಿಗಳು. ಅಷ್ಟೆಲ್ಲ ನೋವು ಉಂಡರೂ ಇವತ್ತಿಗೂ ನನ್ನ ಧರ್ಮ ಹಿಂದು ಎಂದು ಹೇಳಿಕೊಳ್ಳುತ್ತೇನಲ್ಲ ನಾನೇ ಶ್ರೇಷ್ಠ ಎಂದು ಸಚಿವ ತಿಮ್ಮಾಪುರ ಹೇಳಿಕೊಂಡರು.

    ನಮ್ಮಲ್ಲಿ ತಿಂಗಳುಗಟ್ಟಲೇ ವ್ರತ ಮಾಡುತ್ತಾರೆ

    ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವ್ರತದ ಬಗ್ಗೆ ಲೇವಡಿ ಮಾಡಿದ ಸಚಿವ ತಿಮ್ಮಾಪುರ, ಅಯ್ಯೋ ವ್ರತ ಅವರೊಬ್ಬರೇನಾ ಮಾಡುವುದು? ನಮ್ಮಲ್ಲಿ ಒಂದು ತಿಂಗಳುಗಟ್ಟಲೇ ನೀರು ಕುಡಿಯದೆ ವ್ರತ ಮಾಡುತ್ತಾರೆ. ಅವರು ದೇಶದ ಪ್ರಧಾನಿ ಎಂದು ಗೌರವ ಕೊಡುತ್ತೇನೆ. ಆದರೆ, ಅವರು ಭಾವನಾತ್ಮಕ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದರು.

    ಸೀತೆ ಮನೆ ಅಭಿವೃದ್ದಿ ಪಡಿಸೋಣ

    ಜಿಲ್ಲೆಯಲ್ಲಿ ಇರುವ ರಾಮಾಯಣದ ಕುರುಹು ಪ್ರದೇಶಗಳನ್ನು ಅಭಿವೃದ್ಧಿ ಪಡಿಸುತ್ತೀರಾ ಎನ್ನುವ ಪ್ರಶ್ನೆಗೆ ಯಾಕಾಗಬಾರದು? ನಾವು ಧರ್ಮಾಂಧರಲ್ಲ. ನಾವೂ ಧರ್ಮಿಯರೇ. ಬಾಗಲಕೋಟೆ ತಾಲೂಕಿನ ಸೀತಿಮನೆ ಅಭಿವೃದ್ಧಿ ಬಗ್ಗೆ ಪ್ರಸ್ತಾವನೆ ಬಂದರೆ ಖಂಡಿತ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts