More

    ಸಿಗದ ಪರಿಹಾರ, ಕೃಷಿಯಿಂದ ವಿಮುಖ

    ಕಾರವಾರ: ಹಾನಿಯ ಆತಂಕದಲ್ಲಿ ರೈತರು ಬಿತ್ತನೆಯನ್ನು ಮಾಡಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ.
    2020 ರ ಅಕ್ಟೋಬರ್​ನಲ್ಲಿ ಅತಿವೃಷ್ಟಿಯಿಂದ ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ಬರ್ಗಲ್ ಹಳ್ಳ ಉಕ್ಕಿ ಹರಿದಿತ್ತು. ಹಳ್ಳದ ಪಕ್ಕದಲ್ಲಿದ್ದ ಹಲ ರೈತರ ಭತ್ತ ಹಾಗೂ ಕಬ್ಬಿನ ಗದ್ದೆಗಳಿಗೆ ನೀರು, ಮಣ್ಣು ತುಂಬಿ ಬೆಳೆ ಹಾನಿ ಸಂಭವಿಸಿತ್ತು. ಪ್ರಮುಖವಾಗಿ ಸಂತೋಷ ಗುನಗಿ ಅವರ ಸುಮಾರು ಎರಡು ಎಕರೆ ಕಬ್ಬು, ಉಮೇಶ ವೈಂಗಣಕರ್ ಅವರ ನಾಲ್ಕು ಎಕರೆಯಷ್ಟು ಭತ್ತದ ಗದ್ದೆಯಲ್ಲಿ ನೀರು ನಿಂತು ಸಾವಿರಾರು ರೂಪಾಯಿ ನಷ್ಟವಾಗಿತ್ತು. ಇನ್ನೂ ಹಲ ರೈತರ ಬೆಳೆ ನಷ್ಟವಾಗಿತ್ತು. ಕೃಷಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಪಡೆದು ಹೋಗಿದ್ದರು. ರೈತರು ಪರಿಹಾರಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಬೆಳೆ ಹಾನಿ ಪರಿಹಾರ ನೇರವಾಗಿ ರೈತರ ಖಾತೆಗೇ ಜಮಾ ಆಗುವುದಾಗಿ ಅಧಿಕಾರಿಗಳು ತಿಳಿಸಿದ್ದರು. ರೈತರು ಹಣ ಬಂದಿದೆಯೇ ಎಂದು ಬ್ಯಾಂಕ್ ಪಾಸ್​ಬುಕ್ ಚೆಕ್ ಮಾಡಿ ಸೋತಿದ್ದಾರೆ. ಆದರೆ, ಇದುವರೆಗೂ ಪರಿಹಾರ ಬಂದಿಲ್ಲ ಎಂಬುದು ರೈತರ ಗೋಳು.
    ಅಲ್ಲಿ, ಇಲ್ಲಿ ಸಾಲ ಪಡೆದು, ಕಷ್ಟಪಟ್ಟು ಕೃಷಿ ಮಾಡಿ, ಬೆಳೆಯೇ ಕೈಗೆ ಸಿಗದೆ ಹೋದರೆ ಭಾರಿ ನಷ್ಟವಾಗುತ್ತದೆ. ಈ ಬಾರಿ ಮತ್ತೆ ಹಳ್ಳದಲ್ಲಿ ನೀರು ಉಕ್ಕಿ ನಷ್ಟ ಸಂಭವಿಸಿದರೆ ಕಷ್ಟವಾಗುತ್ತದೆ ಎಂಬ ಆತಂಕದಲ್ಲಿ ರೈತರು ಅಲ್ಲಿ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ಪ್ರಜ್ವಲ ಬಾಬುರಾಯ ಶೇಟ್.

    ಕಳೆದ ಬಾರಿ ಇನ್ನೇನು ಬೆಳೆ ಕೊಯ್ಲಿಗೆ ಬರುವ ಹೊತ್ತಿಗೆ ಹಳ್ಳ ಉಕ್ಕಿ ಹರಿದು ನಷ್ಟವಾಗಿತ್ತು. ಸರ್ಕಾರದಿಂದ ನಯಾ ಪೈಸೆ ಪರಿಹಾರ ಬಂದಿಲ್ಲ. ಈ ಬಾರಿ ಮತ್ತೆ ಸಾಲ ಮಾಡಿ ಕೃಷಿ ಮಾಡಲು ಭಯವಾಗುತ್ತಿದೆ.
    ಉಮೇಶ ವೈಂಗಣಕರ್

    ಹೆಚ್ಚು ಬೆಳೆ ನಷ್ಟವಾಗಿದ್ದರೆ, ಜಮೀನಿನ ದಾಖಲೆಗಳು ಸರಿಯಾಗಿದ್ದರೆ ಹಾಗೂ ರೈತನ ಬ್ಯಾಂಕ್ ಖಾತೆಗೆ ಆಧಾರ ಕಾರ್ಡ್ ಲಿಂಕ್ ಆಗಿದ್ದರೆ ಬೆಳೆ ಪರಿಹಾರ ನೇರವಾಗಿ ಅವರ ಖಾತೆಗಳಿಗೇ ಜಮಾ ಆಗುತ್ತದೆ. ಜಿಲ್ಲೆಯ ಕೆಲ ರೈತರಿಗೆ ಇದೇ ರೀತಿ ಪರಿಹಾರವೂ ಬಂದಿದೆ. ದೇವಳಮಕ್ಕಿ ಗ್ರಾಮದ ಕೆಲ ರೈತರಿಗೆ ಬೆಳೆ ಪರಿಹಾರ ಬಾರದೇ ಇರುವುದು ಗಮನಕ್ಕೆ ಬಂದಿಲ್ಲ. ಪರಿಶೀಲಿಸಲಾಗುವುದು.
    ಜಿ.ಎನ್.ಗುಡಿಗಾರ
    ಕೃಷಿ ಅಧಿಕಾರಿ, ಕಾರವಾರ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts