More

    ಅಪೂರ್ಣ ಕಾಮಗಾರಿಗೆ ಹಣ ಬಿಡುಗಡೆ

    ಗುತ್ತಿಗೆದಾರರ ಜತೆ ಅಧಿಕಾರಿಗಳು ಶಾಮೀಲು ಆರೋಪ ; ಶೌಚಗೃಹಕ್ಕೆ ಕದ, ಸೋಕ್‌ಪಿಟ್ಟೇ ಇಲ್ಲ


    ಎನ್.ವಿ. ವೆಂಕಟೇಶ್ ಗುಡಿಬಂಡೆ
    ಕಾಮಗಾರಿ ಅಪೂರ್ಣವಾಗಿದ್ದರೂ ಗುತ್ತಿಗೆದಾರರಿಂದ ಕಮಿಷನ್ ಪಡೆದು ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
    ಹೌದು. ತಾಲೂಕಿನ ವರ್ಲಕೊಂಡ ಗ್ರಾಪಂ ಕೇಂದ್ರದಲ್ಲಿ ಗ್ರಂಥಾಲಯ ಕಟ್ಟಡದ ಬಳಿ 2022-23ನೇ ಸಾಲಿನಲ್ಲಿ ತಾಪಂ ಅನಿರ್ಬಂಧಿತ ಅನುದಾನದಲ್ಲಿ ಶೌಚಗೃಹ ಕಾಮಗಾರಿ ಆರಂಭಿಸಿದ್ದು, ಹಲವು ನೆಪ ಹೇಳಿ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಆದರೆ, ಅಪೂರ್ಣ ಕಾಮಗಾರಿಗೆ ಅಧಿಕಾರಿಗಳು ಹಣ ಬಿಡುಗಡೆ ಮಾಡಿದ್ದು, ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
    ಪರಿಶೀಲನೆಗೂ ನಿರ್ಲಕ್ಷ್ಯ
    ವರ್ಲಕೊಂಡ ಗ್ರಾಮದಲ್ಲಿ ಗ್ರಂಥಾಲಯ ಬಳಿ ಇರುವ ಶೌಚಗೃಹ ಸೇರಿ ಹಲವು ಕಾಮಗಾರಿಗಳು ಕಳಪೆಯಾಗಿವೆ. ಕಾಮಗಾರಿ ಪೂರ್ಣಗೊಂಡಿದೆಯೇ, ಇಲ್ಲವೇ ಎನ್ನುವುದನ್ನು ಪರಿಶೀಲಿಸದೆ ಅಧಿಕಾರಿಗಳು ಹಣ ಬಿಡುಗಡೆ ಮಾಡುತ್ತಿದ್ದರೆ, ಗುತ್ತಿಗೆದಾರರ ಇಷ್ಟಬಂದಂತೆ ಕಾಮಗಾರಿ ನಡೆಸುತ್ತಿದ್ದಾರೆ. ಕೂಡಲೇ ತಾಲೂ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿದ ನಂತರವೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಅನುದಾನ ದುರ್ಬಳಕೆ
    ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆ ಜಾರಿ ಮಾಡಿ, ಲಕ್ಷಾಂತರ ರೂ. ಅನುದಾನ ನೀಡುತ್ತದೆ. ಆದರೆ, ಅಧಿಕಾರಿಗಳು ಅನುದಾನವನ್ನು ಸಮರ್ಪಕವಾಗಿ ಬಳಸದೇ ಹಳೇ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿದು ಗುತ್ತಿಗೆದಾರರು ನೀಡುವ ಆಮಿಷಕ್ಕೆ ಒಳಗಾಗಿ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವರ್ಲಕೊಂಡ ಗ್ರಾಮದಲ್ಲಿ ಶೌಚಗೃಹ ಕಾಮಗಾರಿ ಅಪೂರ್ಣವಾಗಿದೆ. ಕೇವಲ ಗೋಡೆೆ ಕಟ್ಟಿ, ಕೆಲ ವಸ್ತುಗಳನ್ನು ಇಡಲಾಗಿದೆ. ಶೌಚಗುಂಡಿ ವ್ಯವಸ್ಥೆ ಮಾಡಿಲ್ಲ. ಜತೆಗೆ ಶೌಚಗೃಹಕ್ಕೆ ಬಾಗಿಲನ್ನೂ ಅಳವಡಿಸಿಲ್ಲ. ಆದರೆ, ಈ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.

    ಪರವಾನಗಿ ರದ್ದು ಮಾಡಿ
    ತಾಲೂಕಿನಲ್ಲಿ ನಡೆಯುವ ಕಾಮಗಾರಿಗಳು ಕಳಪೆಯಾಗಿದ್ದು, ಗುತ್ತಿಗೆದಾರರು ಇಷ್ಟಬಂದಂತೆ ಕಾಮಗಾರಿ ನಡೆಸುತ್ತಿದ್ದಾರೆ. ತಾಪಂ ಇಒ ಕಾಮಗಾರಿ ಪರಿಶೀಲನೆ ಮಾಡಿ ಗುತ್ತಿಗೆದಾರರ ಪರವಾನಗಿ ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸಬೇಕು. ಅಪೂರ್ಣ ಕಾಮಗಾರಿಗೆ ಬಿಲ್ ನೀಡುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


    ತಾಲೂಕಿನಲ್ಲಿ ಕಳೆದ ವರ್ಷ ಮತ್ತು ಈ ವರ್ಷ ತಾಲೂಕು ಪಂಚಾಯಿತಿ ಅನಿರ್ಬಂಧಿತ ಅನುದಾನಗಳಲ್ಲಿ ಭಾರಿ ಅವ್ಯವಹಾರ ನಡೆದಿದೆ. ಕೆಲವೆಡೆ ಕಾಮಗಾರಿ ಮಾಡದೇ ಬಿಲ್ ಮಾಡಲಾಗಿದೆ. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮಿಲಾಗಿ ಅನುದಾನ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಕೂಡಲೇ ಇಒ ಕಾಮಗಾರಿ ಪರಿಶೀಲನೆ ಮಾಡಬೇಕಿದೆ.
    – ಉಪ್ಪಾರಹಳ್ಳಿ ಶ್ರೀನಿವಾಸ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ


    ಈ ಬಗ್ಗೆ ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಶೌಚಗೃಹಕ್ಕೆ ಅಳವಡಿಸಿದ್ದ ಬಾಗಿಲು ಕಳವಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಅದರ ಅನುದಾನ ಬಿಡುಗಡೆಯಾಗಿದೆ. ಅದು ನನ್ನ ಅವಧಿಯಲ್ಲಿ ಆಗಿರುವ ಕಾಮಗಾರಿಯಲ್ಲ. ಆದರೂ ವರ್ಲಕೊಂಡ ಗ್ರಾಪಂ ಪಿಡಿಒ ಅವರಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ.-
    – ಹೇಮಾವತಿ, ತಾಪಂ ಇಒ, ಗುಡಿಬಂಡೆ

    ವರ್ಲಕೊಂಡ ಗ್ರಾಮದ ಗ್ರಂಥಾಲಯದ ಆವರಣದಲ್ಲಿ ಅಪೂರ್ಣಗೊಂಡಿರುವ ಶೌಚಗೃಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts