More

    ಸಂಬಂಧಿಕರಿಂದಲೇ ಛಾಯಾಗ್ರಾಹಕನ ಹತ್ಯೆ

    ಈಶ್ವರಮಂಗಲ: ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ಎಂಬಲ್ಲಿದ್ದ ತನ್ನ ಕೃಷಿ ಭೂಮಿಯನ್ನು ನೋಡಿಕೊಂಡು ಹೋಗಲೆಂದು ಬಂದಿದ್ದ ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರ ನಿವಾಸಿ, ಛಾಯಾಗ್ರಾಹಕ ಜಗದೀಶ್ (58) ನಾಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಜಾಗವನ್ನು ನೋಡಿಕೊಳ್ಳುತ್ತಿದ್ದ ಸಂಬಂಧಿಯೇ ಇತರರೊಂದಿಗೆ ಸೇರಿ ಕೊಲೆಗೈದು ಕಾಡಿನಲ್ಲಿ ಹೂತು ಹಾಕಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಪ್ರಕರಣಕ್ಕೆ ಸಂಬಂಧಿಸಿ ಪಡುವನ್ನೂರು ಗ್ರಾಮದ ಪಟ್ಲಡ್ಕ ನಿವಾಸಿ ಬಾಲಕೃಷ್ಣ ರೈ ಯಾನೆ ವಿಲಿಯರ್ಸ್ ಸುಬ್ಬಯ್ಯ ರೈ, ಪತ್ನಿ ಜಯಲಕ್ಷ್ಮಿ ರೈ, ಪುತ್ರ ಪ್ರಶಾಂತ್ ರೈ, ನೆರೆಮನೆಯ ಜೀವನ್ ಎಂಬುವರನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.

    ಮೈಸೂರಿನಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ವಾಸವಿದ್ದ ಜಗದೀಶ್ ಮೂರು ವರ್ಷದ ಹಿಂದೆ ಆರ್ಯಾಪು ಗ್ರಾಮದ ಕುಂಜೂರುಪಂಜದಲ್ಲಿ ಸುಮಾರು 2 ಎಕರೆ ಭೂಮಿ ಖರೀದಿಸಿ ಕೃಷಿ ಮಾಡುತ್ತಿದ್ದು, ತಿಂಗಳಿಗೊಮ್ಮೆ ಬಂದು ನೋಡಿಕೊಂಡು ಹೋಗುತ್ತಿದ್ದರು. ನ.18ರಂದು ಜಮೀನಿಗೆ ಬಂದಿದ್ದ ಅವರು ನಾಪತ್ತೆಯಾಗಿದ್ದಾರೆ. ಬಾಲಕೃಷ್ಣ ರೈ ಮತ್ತು ಪ್ರಶಾಂತ್ ರೈ ಮೇಲೆ ಸಂಶಯವಿದೆ ಎಂದು ಸಹೋದರ, ಮಂಗಳೂರಿನ ಕಾವೂರು ನಿವಾಸಿ ಶಶಿಧರ ದೂರು ನೀಡಿದ್ದರು.

    ಕತೆ ಕಟ್ಟಿದ ಆರೋಪಿ: ಜಗದೀಶ್ ಜಮೀನಿಗೆ ನ.18ರಂದು ಬೆಳಗ್ಗೆ ಬಂದಿದ್ದು, ಅಲ್ಲಿಂದ ನಾವು ಪುತ್ತೂರು -ಪಾಣಾಜೆ ರಸ್ತೆಯ ಒಳತ್ತಡ್ಕಕ್ಕೆ ನಡೆದುಕೊಂಡು ಹೋಗಿ, ನಂತರ ಬಸ್ಸಿನಲ್ಲಿ ಪುತ್ತೂರಿಗೆ ಹೋಗಿ ಹೋಟೆಲ್‌ನಲ್ಲಿ ಊಟ ಮಾಡಿ ಬಸ್ಸಿನಲ್ಲಿ ಪುಳಿತ್ತಡಿಗೆ ಹೋಗಿ, ಪಡುವನ್ನೂರು ಗ್ರಾಮದ ಪಟ್ಲಡ್ಕಕ್ಕೆ ಬಂದಿದ್ದೆವು. ಸಂಜೆ ಮೈಸೂರಿಗೆ ಹೋಗಲಿದ್ದ ಜಗದೀಶ್ ಅವರನ್ನು ಪುಳಿತ್ತಡಿಯಲ್ಲಿ ಗೋಲ್ಡನ್ ಕಲರಿನ ಓಮ್ನಿ ಕಾರಿನಲ್ಲಿ ಸುಳ್ಯಕ್ಕೆ ಕಳುಹಿಸಿಕೊಡಲಾಗಿತ್ತು. ಅಲ್ಲಿಂದ ಬಸ್ಸಿನಲ್ಲಿ ಮೈಸೂರಿಗೆ ತೆರಳಿದ್ದರು ಎಂದು ಆರೋಪಿ ಬಾಲಕೃಷ್ಣ ರೈ ಕತೆ ಸೃಷ್ಟಿಸಿ ಪೊಲೀಸರ ಹಾಗೂ ಸಂಬಂಧಿಕರ ಎದುರು ನಾಟಕವಾಡಿದ್ದ. ಸಂಶಯಗೊಂಡ ಪೊಲೀಸರು ಬಾಲಕೃಷ್ಣ ರೈ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಜಗದೀಶ್‌ರನ್ನು ಕೊಲೆಗೈದು ಮೃತದೇಹವನ್ನು ಮನೆಯ ಸಮೀಪದ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿರುವ ವಿಚಾರ ಬಾಯ್ಬಿಟ್ಟಿದ್ದಾರೆ. ಬುಧವಾರ ಎಸ್‌ಐ ಉದಯರವಿ ನೇತೃತ್ವದಲ್ಲಿ ಪೊಲೀಸರು ಅರಣ್ಯ ಪ್ರದೇಶಕ್ಕೆ ತೆರಳಿ ಹೂತು ಹಾಕಲಾಗಿದ್ದ ಜಗದೀಶ್ ಮೃತದೇಹವನ್ನು ಹೊರ ತೆಗೆದಿದ್ದಾರೆ. ಎಸ್ಪಿ ಋಷಕೇಶ್ ಸೊನಾವಣೆ, ಡಿವೈಎಸ್ಪಿ ಡಾ.ಗಾನಾ ಕೆ.ಕುಮಾರ್, ಗ್ರಾಮಾಂತರ ಇನ್‌ಸ್ಪೆಕ್ಟರ್ ಉಮೇಶ್ ಉಪ್ಪಳಿಗೆ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಜೀವಕ್ಕೆ ಮುಳುವಾದ ಜಮೀನು?:
    ಬಾಲಕೃಷ್ಣ ರೈ ಪುತ್ರಿಯನ್ನು ಜಗದೀಶ್‌ರ ತಾಯಿಯ ಸಹೋದರಿಯ ಪುತ್ರನಿಗೆ ವಿವಾಹ ಮಾಡಿಕೊಡಲಾಗಿತ್ತು. ಹಾಗಾಗಿ ಸಂಬಂಧದಲ್ಲಿ ಬಾಲಕೃಷ್ಣ ರೈ ಜಗದೀಶ್‌ಗೆ ಮಾವ. ಈ ಸಂಬಂಧ- ವಿಶ್ವಾಸದ ಹಿನ್ನೆಲೆಯಲ್ಲಿ ಪುತ್ತೂರಿನ ಆರ್ಯಾಪು ಗ್ರಾಮದ ಕುಂಜೂರು ಪಂಜ-ಒಳತ್ತಡ್ಕ ಸಮೀಪ ಹಾಗೂ ಪಡುವನ್ನೂರು ಗ್ರಾಮದ ಪಟ್ಲಡ್ಕದಲ್ಲಿ ಕೃಷಿಭೂಮಿ ಖರೀದಿಗೆ ಜಗದೀಶ್ 65 ಲಕ್ಷ ರೂ. ನೀಡಿದ್ದರು ಎನ್ನಲಾಗಿದೆ. ಈ ಎರಡೂ ಜಮೀನುಗಳನ್ನು ಬಾಲಕೃಷ್ಣ ರೈ ಹೆಸರಿನಲ್ಲೇ ನೋಂದಣಿ ಮಾಡಿದ್ದು, ಆತನೇ ಉಸ್ತುವಾರಿ ವಹಿಸಿದ್ದ. ಬಾಲಕೃಷ್ಣ ರೈ ತನ್ನ ಸಹೋದರಿಯ ಪಟ್ಲಡ್ಕದ ಜಾಗವನ್ನು ಜಗದೀಶ್‌ರ ಹಣದಲ್ಲಿ ಖರೀದಿಸಿ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದು, ಈ ಜಾಗವನ್ನು ಇತ್ತೀಚೆಗೆ ಜಗದೀಶ್ ಗಮನಕ್ಕೆ ತಾರದೆ ಆರೋಪಿ ಮಾರಾಟ ಮಾಡಿರುವ ವಿಚಾರ ತಗಾದೆ ಸೃಷ್ಟಿಸಿತ್ತು. ಇದೇ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

    ಸುತ್ತಿಗೆಯಿಂದ ಹೊಡೆದು ಕೊಂದರು!:
    ಆರೋಪಿಗಳು ಸೇರಿಸಿಕೊಂಡು ಕಾರಿನಲ್ಲಿ ಕುಳಿತಿದ್ದ ಜಗದೀಶ್ ಅವರ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದರು. ಒಂದು ದಿನ ಮೃತದೇಹವನ್ನು ಕಾರಿನೊಳಗಿಟ್ಟು, ಮರುದಿನ ಮನೆಯ ಸಮೀಪದ ಅರಣ್ಯ ಪ್ರದೇಶದೊಳಗೆ ಹೂತು ಹಾಕಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಜಗದೀಶ್ ಅವರಲ್ಲಿದ್ದ ಮೊಬೈಲನ್ನು ಮೈಸೂರಿನ ಇನಿಕಲ್ ಎಂಬಲ್ಲಿಗೆ ಕೊಂಡೊಯ್ದು ಬಿಸಾಡಿ ಬಂದಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts