More

    ಸಂಬಂಧವನ್ನೂ ಕಸಿದ ಕರೊನಾ!

    ಬೆಳಗಾವಿ: ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕರೊನಾ ವೈರಸ್ ಸೃಷ್ಟಿಸಿರುವ ಭೀತಿ ಒಂದೆಡೆಯಾದರೆ ಅದು ಮಾನವೀಯ ಸಂಬಂಧಗಳ ಮೇಲೆ ಬೀರುತ್ತಿರುವ ಅಡ್ಡ ಪರಿಣಾಮ ಮತ್ತಷ್ಟು ತಲ್ಲಣ ತಂದಿಡುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್ ಒಬ್ಬರು ಮಂಗಳವಾರ ತಮ್ಮ ಮುದ್ದಿನ ಮಗಳನ್ನು ಮುಟ್ಟಲೂ ಆಗದೆ ದೂರದಿಂದಲೇ ನೋಡಿ ಸಮಾಧಾನಪಟ್ಟರು.

    ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನರ್ಸ್ ಸುಗಂಧಾ ಕೊರೆಪ್ಪಗೋಳ ಅವರಿಗೆ ಕಣ್ಣೆದುರಿಗೇ ತನ್ನ ಮೂರು ವರ್ಷದ ಮಗಳು ಐಶ್ವರ್ಯಾ ಇದ್ದರೂ ಮುಟ್ಟಿ ಮಾತನಾಡಿಸಲಾಗದ ಸಂದಿಗ್ಧತೆ ಬಂದಿತ್ತು. ಅಮ್ಮ ಬೇಕೆಂದು ಅಳುತ್ತಿದ್ದ ಕಂದಮ್ಮನಿಗೆ ದೂರದಿಂದಲೇ ಅವರು ಸಮಾಧಾನಪಡಿಸಿದ ದೃಶ್ಯ ಮನ ಕಲಕುವಂತಿತ್ತು.

    ಕರೊನಾ ಸೋಂಕಿತರ ಸೇವೆ ಮಾಡುತ್ತಿರುವ ತಾಯಿ(ನರ್ಸ್)ಗೆ ಮನೆಗೆ ಹೋಗಲಾಗದ ಅನಿವಾರ್ಯತೆ. ಇತ್ತ ಮಗಳು ಹತ್ತಿರಕ್ಕೇ ಬಂದಿದ್ದರೂ ನೋಡಲಾಗದೆ ವ್ಯಥೆ. ಆಸ್ಪತ್ರೆಯ ಹೊರ ಭಾಗದಲ್ಲಿ ನಿಂತಿದ್ದ ಪತ್ನಿ ಹಾಗೂ ತನ್ನೊಟ್ಟಿಗೆ ಇರುವ ಮಗಳು ಒಬ್ಬರಿಗೊಬ್ಬರು ಪರಸ್ಪರ ಅಪ್ಪಿಕೊಳ್ಳಲಾಗದ ಸ್ಥಿತಿ ಕಂಡು ತಾಯಿಯ ಮೊಗದಲ್ಲಿ ಹರಿದು ಬರುತ್ತಿದ್ದ ಕಣ್ಣಿರಧಾರೆಯ ದೃಶ್ಯ ವೈದ್ಯಕಿಯ ಸಿಬ್ಬಂದಿಯ ಕರುಳು ಹಿಂಡುವಂತಿತ್ತು. ಅನತಿ ದೂರದಲ್ಲೇ ನಿಂತಿದ್ದ ಪತಿ ಭಾವುಕನಾಗಿದ್ದ.

    ಮನೆಗೆ ಹೋಗಲಾರದ ಸ್ಥಿತಿ: 15 ದಿನಗಳಿಂದ ಮನೆಗೆ ಹೋಗದೆ ನರ್ಸ್ ಸುಗಂಧಾ ಕೊರೆಪ್ಪಗೋಳ ಜಿಲ್ಲಾಸ್ಪತ್ರೆಯಲ್ಲಿ ಕರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ಈ ವೇಳೆ ತನ್ನನ್ನು ನೋಡಲು ಬಂದ ಸ್ವಂತ ಮಗಳನ್ನು ಎತ್ತಿಕೊಳ್ಳಲಾಗದೆ ಸಂಕಷ್ಟ ಪಡುತ್ತಿದ್ದರೆ, ಇತ್ತ ರಸ್ತೆಯಲ್ಲಿ ನಿಂತ ಮಗಳು ತಾಯಿಯನ್ನು ಕಂಡ ಕೂಡಲೇ ಕಣ್ಣೀರಿಡುತ್ತ ಅಮ್ಮಾ ಬಾ ಎನ್ನುತ್ತಿದ್ದಳು. ಕೈ ಸನ್ನೆ ಮೂಲಕವೇ ಸಮಾಧಾನಪಡಿಸಲು ಪ್ರಯತ್ನಿಸಿದ ನರ್ಸ್ ಮಗುವಿನ ಅಳು ನೋಡಲಾಗದೆ ನಿಂತಲ್ಲೇ ಅಳತೊಡಗಿದರು.

    ಕ್ವಾರಂಟೈನ್‌ನಲ್ಲಿ ನರ್ಸ್: ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ನಿವಾಸಿ ಸುಗಂಧಾ ಕೊರೆಪ್ಪಗೋಳ 4 ವರ್ಷಗಳಿಂದ ಬಿಮ್ಸ್‌ನಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಕರೊನಾ ವೈರಸ್ ಸೋಂಕಿತರ ಚಿಕಿತ್ಸೆ ನೀಡುವ ವೈದ್ಯರ ತಂಡದಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು
    ನರ್ಸ್‌ಗಳು ಮನೆಗೆ ಹೋಗುವಂತಿಲ್ಲ. ಹಾಗಾಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯು ವೈದ್ಯರು ಮತ್ತು ನರ್ಸ್‌ಗಳಿಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಸೌಲಕೊಟ್ಟಿದೆ.

    ಅಮ್ಮ ಸಿಗದೆ ಅಳುತ್ತಲೇ ತೆರಳಿದ ಕಂದಮ್ಮ..

    ತಾಯಿಯನ್ನು ನೋಡಲು ಬಂದ ಮಗುವನ್ನು ಎತ್ತಿಕೊಂಡು ಮುದ್ದಿಸಲಾಗದ ತಾಯಿ ದೂರದಿಂದ ನೋಡಿ ಸುಮ್ಮನಾದರು. ಆದರೆ, ಚಿಕ್ಕ ವಯಸ್ಸಿನ ಕಂದಮ್ಮ ಮಾತ್ರ ಅಪ್ಪನ ಬೈಕ್ ಮೇಲೆ ಕುಳಿತು ಅಮ್ಮನಿಗಾಗಿ ಕಣ್ಣೀರು ಹಾಕುತ್ತ ಅಂಗಲಾಚುತ್ತಲೇ ಇತ್ತು. ಅಳುತ್ತಿದ್ದ ಮಗುವನ್ನು ಸಮಾಧಾನ ಪಡಿಸುತ್ತಲೇ ನರ್ಸ್ ಸುಗಂಧಾ ಅವರ ಪತಿ ಬೈಕ್ ಚಲಾಯಿಸಿಕೊಂಡು ಹೊರಟು ಹೋದರು. ದೇಶದಲ್ಲಿ ಕರೊನಾ ವೈರಸ್ ಮನುಷ್ಯರ ಜೀವ ಅಷ್ಟೇ ತೆಗೆಯುತ್ತಿಲ್ಲ. ಬದುಕುಳಿದವರನ್ನೂ ತಮ್ಮವರಿಂದ ದೂರ ಮಾಡುತ್ತಿದೆ. ಈ ಮಹಾಮಾರಿಯ ರೌದ್ರನರ್ತನಕ್ಕೆ ಸಂಬಂಧಗಳೇ ಘಾಸಿಗೊಳಗಾಗುತ್ತಿವೆ ಎಂಬುದಕ್ಕೆ ಈ ತಾಯಿ ಮತ್ತು ಮಗಳ ಅಂತರವೇ ಸಾಕ್ಷಿಯಾಗಿದೆ.

    15 ದಿನಗಳಿಂದ ಕರೊನಾ ವೈರಸ್ ಸೋಂಕಿತರ ಚಿಕಿತ್ಸೆ ಕಾರ್ಯದಲ್ಲಿರುವ ಹಿನ್ನೆಲೆಯಲ್ಲಿ ನನ್ನ ಪತ್ನಿ ಮನೆಗೆ ಬಂದಿಲ್ಲ. ಹಾಗಾಗಿ ತಾಯಿ ಮುಖ ನೋಡಬೇಕು ಎಂದು ಮಗಳು ಹಠ ಮಾಡುತ್ತಿದ್ದುದರಿಂದ ಕರೆದುಕೊಂಡು ಬಂದಿದ್ದೆ. ಮಗಳು ತನ್ನ ತಾಯಿಯನ್ನು ದೂರದಿಂದಲೇ ನೋಡಿ, ಕೈ ಸನ್ನೆ ಮೂಲಕ ಮಾತನಾಡುವಂತಾಯಿತು. ಮಗಳ ಅಳು ಹೆಚ್ಚಾಗಿದ್ದರಿಂದ ಏನು ಮಾಡಬೇಕೆಂದು ತೋಚದೆ ಅಲ್ಲಿಂದ ಹೊರಟೆ.
    | ಸಂತೋಷ ಕೊರೆಪ್ಪಗೋಳ, ನರ್ಸ್ ಪತಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts