More

    ದಕ್ಷಿಣ ಕನ್ನಡ ರೆಡ್‌ಜೋನ್

    ಮಂಗಳೂರು: ಇದುವರೆಗೆ 9 ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೊವಿಡ್ ರೆಡ್‌ಜೋನ್ ಎಂದು ಗುರುತಿಸಲಾಗಿದೆ. ಈಗಾಗಲೇ 5000ಕ್ಕೂ ಹೆಚ್ಚು ಮಂದಿ ಜಿಲ್ಲೆಯಲ್ಲಿ ಕ್ವಾರಂಟೈನ್ ಆಗಿರುವುದು, ಜತೆಯಲ್ಲಿ ಅತ್ಯಧಿಕ ಪಾಸಿಟಿವ್ ರೋಗಿಗಳಿರುವ ಕೇರಳದ ಕಾಸರಗೋಡು ಜಿಲ್ಲೆಯನ್ನು ಗಡಿಯಾಗಿ ಹೊಂದಿರುವುದರಿಂದ ದಕ್ಷಿಣ ಕನ್ನಡವನ್ನು ರೆಡ್‌ಜೋನ್ನಲ್ಲಿ ಸೇರಿಸಲಾಗಿದೆ.

    ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್‌ಸಿಡಿಸಿ) ಈ ಮೊದಲು ಬೆಂಗಳೂರನ್ನು ರೆಡ್‌ಜೋನ್ ಆಗಿ ಗುರುತಿಸಿತ್ತು. ಪ್ರಸ್ತುತ ಹೊಸ ಅಧಿಸೂಚನೆಯಂತೆ ದಕ್ಷಿಣಕನ್ನಡ, ಮೈಸೂರು, ಉತ್ತರಕನ್ನಡ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೂ ರೆಡ್‌ಜೋನ್ ಆಗಿ ಗುರುತಿಸಲಾಗಿದೆ.

    ದೆಹಲಿಗೆ ಹೋಗಿದ್ದ 12 ಮಂದಿ ಮೇಲೆ ನಿಗಾ: ಇನ್ನೊಂದೆಡೆ, ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಪ್ರವಚನ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗವಹಿಸಿದ್ದ 21 ಮಂದಿಯನ್ನು ಇದುವರೆಗೆ ಗುರುತಿಸಲಾಗಿದೆ.

    ಅವರೆಲ್ಲರನ್ನೂ ಸಂಪರ್ಕಿಸಿ, ಅವರನ್ನು ಆಸ್ಪತ್ರೆ ನಿಗಾ ಕೇಂದ್ರದಲ್ಲಿಡಲಾಗಿದೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಗಂಟಲ ದ್ರವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪ್ರಕರಣದ ಕುರಿತು ಪರಿಶೀಲನೆ ಮುಂದುವರಿದಿದೆ.

    ದೆಹಲಿಯಲ್ಲಿ ಮಾ8ರಿಂದ 20ರ ವರೆಗೆ ಈ ಧಾರ್ಮಿಕ ಸಭೆ ನಡೆದಿತ್ತು. ಇನ್ನೂ ಯಾರಾದರೂ ಭಾಗವಹಿಸಿದ್ದಲ್ಲಿ ಅವರು ಕೊವಿಡ್ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ. ಹಾಗಾಗಿ ಅವರು ತಮ್ಮ ಮಾಹಿತಿಯನ್ನು ಕೂಡಲೇ ಜಿಲ್ಲಾ ಸಹಾಯವಾಣಿ ಸಂಖ್ಯೆ 1077ಕ್ಕೆ ಕರೆ ಮಾಡಿ ತಿಳಿಸಲು ಕೋರಲಾಗಿದೆ. ಇದೊಂದು ಗಂಭೀರವಾದ ವಿಚಾರವಾಗಿದ್ದು ಯಾರೂ ನಿರ್ಲಕ್ಷಿಸದಂತೆ ತಿಳಿಸಲಾಗಿದೆ.

    ಉಳ್ಳಾಲದ ಇಬ್ಬರು ಕ್ವಾರಂಟೈನ್‌ಗೆ: ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎನ್ನುವ ನೆಲೆಯಲ್ಲಿ ಉಳ್ಳಾಲ ವ್ಯಾಪ್ತಿಯ ಇಬ್ಬರನ್ನು ಬುಧವಾರ ವೆನ್ಲಾಕ್ ಆಸ್ಪತ್ರೆಯ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

    ದೆಹಲಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವರಿಗೆ ಕರೊನಾ ಬಂದಿರುವ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹುಡುಕಾಟ ಮಾಡಿದಾಗ ಇವರಿಬ್ಬರ ಉಳ್ಳಾಲ ನಗರಸಭಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಒಬ್ಬರ ಮಾಹಿತಿ ಲಭಿಸಿತು. ಈ ವ್ಯಕ್ತಿ ಬುಧವಾರ ತೊಕ್ಕೊಟ್ಟಿನಲ್ಲಿ ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಆರೋಗ್ಯ ಇಲಾಖೆಯವರು ತೊಕ್ಕೊಟ್ಟಿಗೆ ಆಗಮಿಸಿದ್ದರು. ಒಳಪೇಟೆಯಲ್ಲಿ ಚೆಂಬುಗುಡ್ಡೆ ಮೂಲದ ಇನ್ನೋರ್ವ ವ್ಯಕ್ತಿ ಜತೆ ತಿರುಗಾಡುವುದು ಕಂಡುಬಂತು. ಅವರಿಬ್ಬರನ್ನೂ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇವರ ಪೈಕಿ ಪಿಲಾರ್ ಮೂಲದ ವ್ಯಕ್ತಿ ದೆಹಲಿಯ ಜಮಾತ್‌ನಲ್ಲಿ ಪಾಲ್ಗೊಂಡಿದ್ದು, ಅದಕ್ಕೂ ಮೊದಲು ವಿದೇಶಕ್ಕೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಇವರಿಬ್ಬರಲ್ಲೂ ಅನಾರೋಗ್ಯದ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ನಲ್ಲಿ ಕ್ವಾರಂಟೈನ್ ಇಡಲಾಗಿದೆ. ಇಬ್ಬರ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದ್ದು, ಗುರುವಾರ ವರದಿ ಬರಲಿದೆ ಮಾಹಿತಿ ಬರಲಿದೆ.

    ಸಮಾವೇಶದಲ್ಲಿ ಉಡುಪಿಯವರಿಲ್ಲ: ಉಡುಪಿ: ದೆಹಲಿಯ ಜಮಾತ್ ಸಭೆಯಲ್ಲಿ ಜಿಲ್ಲೆಯ ಯಾರೂ ಭಾಗವಹಿಸಿರಲಿಲ್ಲ ಎಂದು ಉಡುಪಿ ಡಿಸಿ ಜಿ.ಜಗದೀಶ್ ತಿಳಿಸಿದ್ದಾರೆ. ನಿಜಾಮುದ್ದೀನ್ ಸಮಾವೇಶಕ್ಕೆ ಉಡುಪಿ ಜಿಲ್ಲೆಯಿಂದಲೂ ಹಲವರು ಭಾಗಿಯಾಗಿದ್ದರು ಎಂಬ ವದಂತಿ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ಮೂರು ಜನರಿಗೆ ಸೋಂಕು ದೃಢವಾಗಿದೆ. ಅವರನ್ನು ಮತ್ತು ಅವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಿದ್ದೇವೆ. ಜಿಲ್ಲೆಯ ಜನ ಸರ್ಕಾರದ ಲಾಕ್‌ಡೌನ್‌ಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಪುತ್ತೂರು ವ್ಯಕ್ತಿಗೆ ಕೊವಿಡ್ ಪಾಸಿಟಿವ್: ಬುಧವಾರ ಬಂದ 17 ಲ್ಯಾಬ್ ವರದಿಗಳಲ್ಲಿ ಪುತ್ತೂರು ತಾಲೂಕಿನ ವ್ಯಕ್ತಿಯ ವರದಿ ಪಾಸಿಟಿವ್ ಬಂದಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ ಒಳಗಾದವರ ಸಂಖ್ಯೆ 9ಕ್ಕೆ ಏರಿದೆ. ಪುತ್ತೂರು ತಾಲೂಕಿನ 49 ವರ್ಷದ ನಿವಾಸಿ ಮಾ.20ರಂದು ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಂದ ಖಾಸಗಿ ಟ್ಯಾಕ್ಸಿಯಲ್ಲಿ ಪುತ್ತೂರಿಗೆ ಆಗಮಿಸಿದ್ದರು. ಮಾ.28ರಂದು ಸಣ್ಣದಾಗಿ ಗಂಟಲು ನೋವಿನಿಂದ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಬುಧವಾರ ವರದಿ ಸ್ವೀಕೃತವಾಗಿದ್ದು ಕರೊನಾ ಸೋಂಕು ದೃಢಪಟ್ಟಿದೆ. ಬುಧವಾರ 53 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಸದ್ಯ 5875 ಮಂದಿಯನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ. 27 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿದ್ದು 300 ಮಂದಿ ಇದುವರೆಗೆ 28 ದಿನಗಳ ಮನೆ ದಿಗ್ಬಂಧನ ಅವಧಿಯನ್ನು ಪೂರೈಸಿದ್ದಾರೆ. 27 ಮಂದಿಯ ಮೇಲೆ ನಿಗಾ ಇರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

    ಉಡುಪಿಯಲ್ಲಿ 13 ಮಂದಿ ಐಸೋಲೇಶನ್ ವಾರ್ಡ್‌ಗೆ: ಉಡುಪಿ: ಜಿಲ್ಲೆಯಲ್ಲಿ ಬುಧವಾರ ಕರೊನಾ ಶಂಕಿತ 13 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 11 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

    9 ಮಂದಿ ಪುರುಷರು ಹಾಗೂ ಓರ್ವ ಮಹಿಳೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಒಬ್ಬ ಪುರುಷ, ಇಬ್ಬರು ಮಹಿಳೆಯರು ಶಂಕಿತ ಕರೊನಾದಿಂದ ಆಸ್ಪತ್ರೆಯ ಪ್ರತ್ಯೇಕ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. 11ಮಂದಿ ಐಸೋಲೇಶನ್ ವಾರ್ಡ್‌ನಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 171 ಮಂದಿ ಶಂಕಿತರ ಸ್ಯಾಂಪಲ್‌ಗಳನ್ನು ಈಗಾಗಲೇ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇವರಲ್ಲಿ 140 ಮಂದಿಯ ವರದಿ ಬಂದಿದೆ. ಇದರಲ್ಲಿ 137 ಮಂದಿಯ ವರದಿ ನೆಗೆಟಿವ್ ಆಗಿದ್ದರೆ, ಮೂವರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಇನ್ನು ಮಂಗಳವಾರ ಕಳುಹಿಸಿದ 20 ಹಾಗೂ ಇಂದು ಕಳುಹಿಸಿದ 11 ಮಂದಿ ಸೇರಿದಂತೆ ಒಟ್ಟು 31 ಮಂದಿಯ ಸ್ಯಾಂಪಲ್ ವರದಿ ಬರಬೇಕಾಗಿದೆ. ಶಂಕಿತ ಕೊವಿಡ್ ಹಾಗೂ ಅವರ ಸಂಪರ್ಕಕ್ಕೆ ಬಂದವರು ಮತ್ತು ಉಸಿರಾಟದ ತೊಂದರೆಗೆ ಸಿಲುಕಿದವರು ಸೇರಿ ಈವರೆಗೆ ಜಿಲ್ಲೆಯಲ್ಲಿ ಒಟ್ಟು 1766 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಬುಧವಾರ 15 ಮಂದಿ ಸೇರಿದಂತೆ ಒಟ್ಟು 826 ಮಂದಿ 28 ದಿನಗಳ ನಿಗಾವಣೆ ಹಾಗೂ 665 ಮಂದಿ 14 ದಿನಗಳ ನಿಗಾವಣೆಯನ್ನು ಪೂರ್ಣಗೊಳಿಸಿದ್ದಾರೆ.

    ಕಾಸರಗೋಡಿನಲ್ಲಿ 12 ಸೋಂಕಿತರು: ಕಾಸರಗೋಡು: ಬುಧವಾರ ಕಾಸರಗೋಡಿನ 12 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕಾಸರಗೋಡಿನಲ್ಲಿ ಬಾಧಿತರ ಸಂಖ್ಯೆ 120ಕ್ಕೇರಿದೆ. ಜಿಲ್ಲೆಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ 4 ದಿವಸಗಳ ಒಳಗಾಗಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಲಾಗುವುದು. ಜಿಲ್ಲೆಯಲ್ಲಿ 8971 ಮಂದಿ ನಿಗಾದಲ್ಲಿದ್ದಾರೆ. ಇದರಲ್ಲಿ 177 ಮಂದಿ ಆಸ್ಪತ್ರೆಗಳಲ್ಲಿ, 8794 ಮಂದಿ ಮನೆಗಳಲ್ಲೂ ನಿಗಾದಲ್ಲಿದ್ದಾರೆ. ಈವರೆಗೆ 1109 ಮಂದಿಯ ಸ್ಯಾಂಪಲ್‌ಗಳನ್ನು ತಪಾಸಣೆಗೆ ಕಳುಹಿಸಲಾಗಿದೆ. ಇದರಲ್ಲಿ 371 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts