More

    ದಾಖಲೆ ನಿರ್ವಹಣೆಯಲ್ಲಿ ಮಾದರಿ

    ಬೆಳಗಾವಿ: ‘ನಮ್ಮ ದಾಖಲೆ ನಮ್ಮ ಹೆಮ್ಮೆ’ ಘೋಷ್ಯವಾಕ್ಯದೊಂದಿಗೆ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿ ದಾಖಲೆಗಳ ನಿರ್ವಹಣೆಯಲ್ಲಿ ಇತರೆ ಇಲಾಖೆಗಳಿಗೆ ಮಾದರಿಯಾಗಿದೆ. ರೈತರು ಹಾಗೂ ಫಲಾನುಭವಿಗಳ ದಾಖಲೆಗಳ ಮಾಹಿತಿಬೇಕೆಂದರೆ ಕ್ಷಣಾರ್ಧದಲ್ಲೇ ಹುಡುಕಿ ತೆಗೆಯುವಂತೆ ವ್ಯವಸ್ಥಿತವಾಗಿ ಜೋಡಿಸಿಡಲಾಗಿದೆ.

    ಈ ಮೊದಲು ದಾಖಲೆಗಳ ನಿರ್ವಹಣೆ ಸರಿ ಇರಲಿಲ್ಲ. ಕಚೇರಿಯ ಎಲ್ಲೆಂದರಲ್ಲಿ ದಾಖಲೆಗಳನ್ನು ಕಟ್ಟಿ ಇಡಲಾಗುತ್ತಿತ್ತು. ಸಕಾಲಕ್ಕೆ ಯಾವುದೇ ಮಾಹಿತಿ ಸಿಗುತ್ತಿರಲಿಲ್ಲ. ದಾಖಲೆ ಹುಡುಕಲು ಸಿಬ್ಬಂದಿ ಸಮಯ ವ್ಯರ್ಥ ಮಾಡುತ್ತಿದ್ದರು. ಇದೀಗ ಸಿಬ್ಬಂದಿಗೆ ಈ ಸಮಸ್ಯೆ ಇರದು.

    ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗೆ ವಿಳಂಬ ಮಾಡದೆ ಮಾಹಿತಿ ನೀಡುವಂತಾಗಲು ಅಗ ತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಆಡಳಿತ ಸುಧಾರಣೆ ಇಲಾಖೆಯು ಎಲ್ಲ ಇಲಾಖೆಗಳಿಗೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ಬಹುತೇಕ ಜಿಲ್ಲೆಗಳಲ್ಲಿ ದಾಖಲೆಗಳ ವ್ಯವಸ್ಥಿತ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಬೆಳಗಾವಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ತಿಂಗಳ ಹಿಂದೆಯೇ ಶಿಸ್ತುಬದ್ಧವಾಗಿ ದಾಖಲೆ ನಿರ್ವಹಿಸಲಾಗಿದೆ.

    ಕೋಶವಾರು ಮಾಹಿತಿ: ಕಚೇರಿಯಲ್ಲಿ ಕೋಶವಾರು ಮಾಹಿತಿ ಕೂಡಲೇ ಲಭ್ಯವಾಗುವಂತೆ ಮುಂದಿನ ದಿನಗಳಲ್ಲಿ ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆ. ಯಾವ ಹಾಗೂ ಎಷ್ಟನೇ ಬಂಡಲ್‌ನಲ್ಲಿ ಯಾವ ಪುಸ್ತಕವಿದೆ ಎಂಬ ನಿಖರವಾದ ದಾಖಲೆ ಲಭಿಸುವಂತಹ ವ್ಯವಸ್ಥೆಯನ್ನು ಇಲಾಖಾಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ.

    5 ವಿಭಾಗದಲ್ಲಿ ದಾಖಲೆಗಳ ವಿಂಗಡಣೆ: ಇಲಾಖೆ ದಾಖಲೆಗಳನ್ನು ಐದು ವಿಭಾಗದಲ್ಲಿ ವಿಂಗಡಿಸಿ, ಪ್ರತ್ಯೇಕ ರ‌್ಯಾಕ್ ಮಾಡಲಾಗಿದೆ. ಐದೂ ವಿಭಾಗದ ದಾಖಲೆಗಳನ್ನು ಬಣ್ಣದ ಬಟ್ಟೆಗಳಿಂದ ಸುತ್ತಿ ಗುರುತು ಮಾಡಲಾಗಿದೆ. ಕೆಂಪು ಬಣ್ಣದ ಬಟ್ಟೆಗಳಲ್ಲಿ ಕಾಯಂ ದಾಖಲಾತಿ ಕಟ್ಟಿಡಲಾಗಿದೆ. ಹಸಿರು ಬಟ್ಟೆಯಲ್ಲಿ 30 ವರ್ಷದವರೆಗೆ ನಿರ್ವಹಿಸಬೇಕಾದ ದಾಖಲೆ ಸಂಗ್ರಹಿಸಲಾಗಿದೆ. ಹಳದಿ ಬಣ್ಣದ ಬಟ್ಟೆಗಳಲ್ಲಿ 10 ವರ್ಷ ಕಾಲಮಿತಿ ಹೊಂದಿರುವ ದಾಖಲೆ ಕ್ರೋಡೀಕರಿಸಲಾಗಿದೆ. ಬಿಳಿ ಬಣ್ಣದ ಬಟ್ಟೆಯಲ್ಲಿ 5 ವರ್ಷ, ತಿಳಿನೀಲಿ ಬಣ್ಣದ ಬಟ್ಟೆಯಲ್ಲಿ 1 ವರ್ಷ ಕಾಲಮಿತಿಯ ದಾಖಲೆ ಹೊಂದಿಸಿಡಲಾಗಿದೆ. ಈ ಎಲ್ಲ ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ ಎಂಟ್ರಿ ಮಾಡಿರುವುದು ಇಲಾಖೆಯ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಿದೆ.

    ದಾಖಲಾತಿ ನಿರ್ವಹಣೆ ವಿಧಾನ ಇಲಾಖೆಯಲ್ಲಿ ಸಿಬ್ಬಂದಿ ಸೇವಾ ಪುಸ್ತಕಗಳು, ನ್ಯಾಯಾಲಯದ ದಾಖಲೆಗಳು, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಜಮೀನುಗಳ ದಾಖಲೆಗಳನ್ನು ಕಾಯಂ ದಾಖಲಾತಿ ವಿಭಾಗದಲ್ಲಿಡಲಾಗಿದೆ. 30 ವರ್ಷದ ದಾಖಲಾತಿ ವಿಭಾಗದಲ್ಲಿ ಇಲಾಖೆಯ ವರ್ಷವಾರು ಯೋಜನೆ ದಾಖಲೆಗಳು, ಹೊಸದಾಗಿ ಜಮೀನು ಮಂಜೂರಾಗಿದ್ದು, ಭೂಮಿ ಖರೀದಿಗೆ ಸಂಬಂಧಿಸಿದೆ ದಾಖಲೆ ಸಂಗ್ರಹಿಸಿಡಲಾಗಿದೆ. 10 ವರ್ಷದ ದಾಖಲಾತಿ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸಹಿ ಆಗಿರುವ ಫೈಲ್, ಸರ್ಕಾರದ ವಿವಿಧ ಯೋಜನೆ ಹಾಗೂ ಫಲಾನುಭವಿಗಳ ನೋಂದಣಿ ಪುಸ್ತಕಗಳಿವೆ. 5 ವರ್ಷದ ವಿಭಾಗದಲ್ಲಿ ಹೊಸ ಯೋಜನೆಗಳ ಕುರಿತಾದ ದಾಖಲೆ ಇಡಲಾಗಿದೆ. 1 ವರ್ಷದ ವಿಭಾಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಆದೇಶಗಳು, ಸುತ್ತೋಲೆ, ನೋಟಿಸ್ ಹಾಗೂ ಫಲಾನುಭವಿಗಳ ವಿವರ ಸಂಗ್ರಹಿಸಿಡಲಾಗಿದೆ.

    ತಕ್ಷಣವೇ ಮಾಹಿತಿ ಲಭ್ಯವಾಗುವ ರೀತಿಯಲ್ಲಿ ದಾಖಲೆಗಳನ್ನು ವ್ಯವಸ್ಥಿತವಾಗಿ ಜೋಡಿಸಿ, ನಿರ್ವಹಿಸುವಂತೆ ಸರ್ಕಾರದಿಂದ ಸುತ್ತೋಲೆ ಬಂದಿತ್ತು. ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾತ್ರಿವೇಳೆಯೂ ದಾಖಲೆಗಳನ್ನು ಹೊಂದಿಸಿ ಅಚ್ಚುಕಟ್ಟಾಗಿ ಇಟ್ಟಿದ್ದಾರೆ. ಇದರಿಂದ ಯಾವುದೇ ಕ್ಷೇತ್ರದ ಅಥವಾ ಫಲಾನುಭವಿಗಳ ದಾಖಲಾತಿಗಳ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ.
    | ರವೀಂದ್ರ ಹಕಾಟೆ ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts