More

    ಐಪಿಎಲ್‌ನಲ್ಲಿ ಇಂದು ಡೆಲ್ಲಿ-ಕೆಕೆಆರ್ ‘ಸೆಮಿಫೈನಲ್’

    ಶಾರ್ಜಾ: ಲೀಗ್ ಹಂತದಲ್ಲಿ ಅಗ್ರಸ್ಥಾನ ಅಲಂಕರಿಸಿದರೂ ಮೊದಲ ಕ್ವಾಲಿಫೈಯರ್‌ನಲ್ಲಿ ಎಡವಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಎಇ ಚರಣದ ಟೂರ್ನಿಯಲ್ಲಿ ಭರ್ಜರಿ ನಿರ್ವಹಣೆ ತೋರುತ್ತಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಐಪಿಎಲ್ 14ನೇ ಆವೃತ್ತಿಯಲ್ಲಿ ಬುಧವಾರ ‘ಸೆಮಿಫೈನಲ್’ ಮಾದರಿಯ 2ನೇ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡುವ ಅವಕಾಶ ಪಡೆಯಲಿದ್ದರೆ, ಸೋತ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಡಲಿದೆ.

    ಲೀಗ್ ಹಂತದ ಎರಡೂ ಮುಖಾಮುಖಿಗಳಲ್ಲಿ ಸಿಎಸ್‌ಕೆಗೆ ಸೋಲುಣಿಸಿದ್ದರೂ, ಮೊದಲ ಕ್ವಾಲಿಫೈಯರ್‌ನಲ್ಲಿ ಸವಾಲಿನ ಮೊತ್ತ ರಕ್ಷಿಸಿಕೊಳ್ಳಲು ಡೆಲ್ಲಿ ವಿಫಲವಾಗಿತ್ತು. ಆ ಸೋಲಿನಿಂದ ಪುಟಿದೆದ್ದು ಸತತ 2ನೇ ಬಾರಿ ಫೈನಲ್‌ಗೇರುವತ್ತ ರಿಷಭ್ ಪಂತ್ ಬಳಗ ಗಮನಹರಿಸಿದೆ.
    ಅತ್ತ ಕೆಕೆಆರ್ ತಂಡ ಅರಬ್ ನಾಡಿನ ಚರಣದಲ್ಲಿ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 2ರಲ್ಲಷ್ಟೇ ಸೋತಿದೆ. ಈ ಪೈಕಿ ಒಂದು ಗೆಲುವು ಡೆಲ್ಲಿ ತಂಡದ ವಿರುದ್ಧವೂ ಬಂದಿತ್ತು. ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ತಂಡದ ಕಪ್ ಕನಸು ಭಗ್ನಗೊಳಿಸಿರುವ ಇವೊಯಿನ್ ಮಾರ್ಗನ್ ಬಳಗ 7 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರುವ ಹಂಬಲದಲ್ಲಿದೆ.

    2ನೇ ಚಾನ್ಸ್ ಬಳಸಿಕೊಳ್ಳುವುದೇ ಡೆಲ್ಲಿ?
    ಫೈನಲ್‌ಗೇರುವ ಮೊದಲ ಪ್ರಯತ್ನದಲ್ಲಿ ವಿಫಲವಾಗಿರುವ ಡೆಲ್ಲಿಗೆ ಇದು 2ನೇ ಅವಕಾಶ. ಇದರಲ್ಲಿ ಯಶಸ್ಸು ಕಂಡರಷ್ಟೇ ಸಿಎಸ್‌ಕೆ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶವೂ ಲಭಿಸಲಿದೆ. ಈ ಮೂಲಕ ಚೊಚ್ಚಲ ಪ್ರಶಸ್ತಿ ಗೆಲುವಿಗೆ ಡೆಲ್ಲಿ ತಂಡ 2ನೇ ಬಾರಿ ಪ್ರಯತ್ನಿಸಬಹುದಾಗಿದೆ. 10 ಜಯದೊಂದಿಗೆ 20 ಅಂಕ ಕಲೆಹಾಕಿ ರಿಷಭ್ ಪಂತ್ ಬಳಗ ಅಗ್ರಸ್ಥಾನ ಅಲಂಕರಿಸಿತ್ತು. ಟೂರ್ನಿಯ ಎರಡೂ ಚರಣಗಳಲ್ಲಿ ಡೆಲ್ಲಿ ಸ್ಥಿರ ನಿರ್ವಹಣೆಯನ್ನೇ ತೋರಿತ್ತು. ಆದರೆ ಆಡಿದ ಕೊನೇ 2 ಪಂದ್ಯಗಳಲ್ಲಿ ಡೆಲ್ಲಿಗೆ ಬೌಲಿಂಗ್ ವಿಭಾಗ ಕೈಕೊಟ್ಟಿದೆ. ಬ್ಯಾಟರ್‌ಗಳು ಉತ್ತಮ ಮೊತ್ತ ಕಲೆಹಾಕಿದ್ದರೂ, ಅದನ್ನು ರಕ್ಷಿಸಿಕೊಳ್ಳುವಲ್ಲಿ ಬೌಲರ್‌ಗಳು ಎಡವುತ್ತಿದ್ದಾರೆ. ಆರ್‌ಸಿಬಿ ವಿರುದ್ಧದ ಕೊನೇ ಲೀಗ್ ಪಂದ್ಯದಲ್ಲಿ 164 ಮತ್ತು ಸಿಎಸ್‌ಕೆ ವಿರುದ್ಧ 1ನೇ ಕ್ವಾಲಿಫೈಯರ್‌ನಲ್ಲಿ 173 ರನ್ ರಕ್ಷಿಸಲು ಡೆಲ್ಲಿ ವಿಲವಾಗಿತ್ತು. ಕಳೆದ ಬಾರಿ ಪರ್ಪಲ್ ಕ್ಯಾಪ್ ಗೆದ್ದಿದ್ದ ವೇಗಿ ಕಗಿಸೊ ರಬಾಡ ಈ ಬಾರಿ ಹೆಚ್ಚಿನ ವಿಕೆಟ್ ಕಬಳಿಸದಿರುವುದು ಡೆಲ್ಲಿಗೆ ಹಿನ್ನಡೆಯಾಗಿದೆ. ಭಾರತ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ನಿರ್ವಹಣೆಯೂ ಪರಿಣಾಮಕಾರಿಯಾಗಿಲ್ಲ.

    ಭರ್ಜರಿ ಲಯದಲ್ಲಿ ಕೆಕೆಆರ್
    ಟೂರ್ನಿಯ ಮೊದಲ ಚರಣದಲ್ಲಿ ಆಡಿದ 7 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 5ರಲ್ಲಿ ಸೋತಿದ್ದ ಕೆಕೆಆರ್ ತಂಡ 2ನೇ ಭಾಗದಲ್ಲಿ ಪುಟಿದೆದ್ದಿದೆ. ತಂಡ ಸಂಯೋಜನೆಯಲ್ಲಿ ಮಾಡಿಕೊಂಡ ಕೆಲ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣ. ವೆಂಕಟೇಶ್ ಅಯ್ಯರ್ ಆಲ್ರೌಂಡರ್ ಆಗಿ ಮಿಂಚುತ್ತಿರುವುದು ಮತ್ತು ಸುನೀಲ್ ನಾರಾಯಣ್ ಉತ್ತಮ ಲಯದಲ್ಲಿರುವುದು ತಂಡದ ಬಲ ವೃದ್ಧಿಸಿದೆ. ಭಾರತೀಯ ಬ್ಯಾಟ್ಸ್‌ಮನ್‌ಗಳೇ ತಂಡದ ಶಕ್ತಿಯಾಗಿದ್ದಾರೆ. ಬೌಲಿಂಗ್‌ನಲ್ಲೂ ವಿದೇಶಿ-ದೇಶೀಯ ಆಟಗಾರರು ಮಿಂಚುತ್ತಿದ್ದಾರೆ. ಹೀಗಾಗಿ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಫಿಟ್ನೆಸ್ ಸಮಸ್ಯೆಯಿಂದಾಗಿ ಕಳೆದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದರೂ, ತಂಡಕ್ಕೆ ಹಿನ್ನಡೆಯಾಗಿಲ್ಲ. ನಾಯಕ ಮಾರ್ಗನ್ ಅವರ ರನ್‌ಬರವೊಂದೇ ಸದ್ಯಕ್ಕೆ ಕೆಕೆಆರ್ ಪಾಲಿಗೆ ತಲೆನೋವಾಗಿದೆ.

    ಮುಖಾಮುಖಿ: 27
    ಡೆಲ್ಲಿ: 12
    ಕೆಕೆಆರ್: 15
    ಲೀಗ್ ಮುಖಾಮುಖಿ: ತಲಾ 1ರಲ್ಲಿ ಜಯ.
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

    2: ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ಸತತ 2ನೇ ವರ್ಷ ಐಪಿಎಲ್ ಫೈನಲ್‌ಗೇರಿದ ಸಾಧನೆ ಮಾಡಲಿದೆ.

    3: ಕೆಕೆಆರ್ ಗೆದ್ದರೆ 3ನೇ ಹಾಗೂ ಕಳೆದ 7 ವರ್ಷಗಳಲ್ಲಿ ಮೊದಲ ಬಾರಿ ಫೈನಲ್‌ಗೇರಿದ ಸಾಧನೆ ಮಾಡಲಿದೆ. ಈ ಮುನ್ನ 2012 ಮತ್ತು 2014ರಲ್ಲಿ ಫೈನಲ್‌ಗೇರಿದಾಗ ಪ್ರಶಸ್ತಿ ಜಯಿಸಿತ್ತು.

    ಟೀಮ್ ನ್ಯೂಸ್:

    ಡೆಲ್ಲಿ: ಗಾಯದಿಂದಾಗಿ ಕಳೆದ ಕೆಲ ಪಂದ್ಯ ತಪ್ಪಿಸಿಕೊಂಡಿರುವ ಆಲ್ರೌಂಡರ್ ಮಾರ್ಕಸ್ ಇದೀಗ ಫಿಟ್ ಆಗಿದ್ದು, ಟಾಮ್ ಕರ‌್ರನ್ ಬದಲಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ.

    ಕೆಕೆಆರ್: ಆಲ್ರೌಂಡರ್ ಆಂಡ್ರೆ ರಸೆಲ್ ಫಿಟ್ ಆಗಿದ್ದಾರೆ ಎನ್ನಲಾಗಿದ್ದರೂ, ಶಾರ್ಜಾ ಪಿಚ್‌ನಲ್ಲಿ ಶಕೀಬ್ ಅಲ್ ಹಸನ್‌ಗೆ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಬದಲಾವಣೆ ಅನುಮಾನ.

    8: ಈ ಬಾರಿ ಶಾರ್ಜಾದಲ್ಲಿ ನಡೆದ 9 ಪಂದ್ಯಗಳಲ್ಲಿ 8ರಲ್ಲಿ ಪವರ್‌ಪ್ಲೇನಲ್ಲಿ ಗರಿಷ್ಠ ರನ್ ಗಳಿಸಿದ ತಂಡವೇ ಜಯಿಸಿದೆ.

    ಪಿಚ್ ರಿಪೋರ್ಟ್
    ಕಳೆದ ವರ್ಷದ ಐಪಿಎಲ್‌ನಲ್ಲಿ ಸಿಕ್ಸರ್, ರನ್ ಪ್ರವಾಹವನ್ನೇ ಕಂಡಿದ್ದ ಶಾರ್ಜಾ ಕ್ರೀಡಾಂಗಣದ ಪಿಚ್‌ನಲ್ಲಿ ಈ ಬಾರಿ ರನ್ ಗಳಿಸುವುದೇ ಸವಾಲೆನಿಸಿದೆ. ವೇಗಿಗಳಿಗಿಂತ ಹೆಚ್ಚಾಗಿ ಪಿಚ್ ಸ್ಪಿನ್‌ಸ್ನೇಹಿಯಾಗಿ ವರ್ತಿಸುತ್ತಿದೆ. ಹಾಲಿ ಚರಣದಲ್ಲಿ ಶಾರ್ಜಾದಲ್ಲಿ ನಡೆದ 7 ಪಂದ್ಯಗಳಲ್ಲಿ 5ರಲ್ಲಿ ಚೇಸಿಂಗ್ ನಡೆಸಿದ ತಂಡವೇ ಜಯಿಸಿದೆ. ಡೆಲ್ಲಿ ತಂಡ ಈ ಬಾರಿ ಕಂಡ 5 ಸೋಲುಗಳೂ ಮೊದಲು ಬ್ಯಾಟಿಂಗ್ ಮಾಡಿದಾಗಲೇ ಎದುರಾಗಿದೆ. ಅತ್ತ ಕೆಕೆಆರ್ ತಂಡ ಯುಎಇ ಚರಣದಲ್ಲಿ ಚೇಸಿಂಗ್ ಮಾಡಿದ 5 ಪಂದ್ಯಗಳಲ್ಲೂ ಜಯಿಸಿದೆ. ಹೀಗಾಗಿ ಉಭಯ ತಂಡಗಳೂ ಟಾಸ್ ಗೆದ್ದರೆ ಫೀಲ್ಡಿಂಗ್ ಆಯ್ದುಕೊಳ್ಳಲು ಒಲವು ತೋರುವ ನಿರೀಕ್ಷೆ ಇದೆ.

    ಟೀಮ್ ಇಂಡಿಯಾ ಮೆಂಟರ್ ಹುದ್ದೆಗೆ ಧೋನಿ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತೇ?

    ಆರ್‌ಸಿಬಿ ಸೋಲಿನ ಬಳಿಕ ಡೇನಿಯಲ್ ಕ್ರಿಶ್ಚಿಯನ್ ಮತ್ತು ಗರ್ಭಿಣಿ ಸಂಗಾತಿಗೆ ನಿಂದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts