More

    ಹೊಸ ಹಳ್ಳಿ ಸೇರ್ಪಡೆ ಹೆಸರಲ್ಲಿ ರಿಯಲ್ಟಿ ಉದ್ಯಮ

    *ಈಗಿನ ಹಳ್ಳಿಗಳಿಗೇ ಸೌಲಭ್ಯವಿಲ್ಲ *ಭೂಮಿ ಬೆಲೆ ಹೆಚ್ಚಾಗಿದ್ದೊಂದೆ ಲಾಭ

    | ರಮೇಶ ದೊಡ್ಡಪುರ

    ಬೆಂಗಳೂರು: ಹದಿಮೂರು ವರ್ಷದ ಹಿಂದೆ ಬಿಬಿಎಂಪಿಗೆ ಸೇರಿದ್ದ 110 ಹಳ್ಳಿಯ ನಾಗರಿಕರು ಮೂಲಸೌಕರ್ಯವೂ ಇಲ್ಲದೆ ಬಳಲುತ್ತಿರುವಾಗಲೇ ಮತ್ತೆ 65 ಹಳ್ಳಿಗಳ ಸೇರ್ಪಡೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದ ರಿಯಲ್​ಎಸ್ಟೇಟ್​ಗೆ ಮಾತ್ರ ಲಾಭ ಎಂಬ ಮಾತು ಕೇಳಿಬರುತ್ತಿದೆ. ಬೆಂಗಳೂರಿಗೆ ಹೊಸ ಹಳ್ಳಿಗಳ ಸೇರ್ಪಡೆ ಕುರಿತು ಜಂಟಿ ಸದನ ಸಮಿತಿಯಲ್ಲೂ ಸಾಕಷ್ಟು ಚರ್ಚೆಯಾಗಿದೆ. ಆದರೆ ಈ ಪ್ರದೇಶಗಳಲ್ಲಿ ಈಗಾಗಲೆ ರಿಯಲ್​ಎಸ್ಟೇಟ್ ವ್ಯವಹಾರ ಗರಿಗೆದರಿದ್ದು, ನಿವೇಶನಗಳ ಬೆಲೆಯಲ್ಲಿ ಶೇ.10-15 ಏರಿಕೆ ಮಾಡಲಾಗುತ್ತಿದೆ.

    65 ಸೇರ್ಪಡೆ ಆಗುತ್ತದೆಯೇ?‘
    ಬಿಬಿಎಂಪಿ ಕಾಯ್ದೆ ಜಾರಿಯಾಗಬೇಕೆಂದು ವಿಧಾನ ಮಂಡಲದಲ್ಲಿ ಮಂಡಿಸಿದಾಗ ಅದರಲ್ಲಿನ ಲೋಪದೋಷ ತಿದ್ದಲು ಜಂಟಿ ಸದನ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ಸಭೆಗಳನ್ನು ನಡೆಸುತ್ತಿದ್ದು, ಈಗಿನ ಬೆಂಗಳೂರಿಗೆ 65 ಹೊಸ ಹಳ್ಳಿಗಳ ಸೇರ್ಪಡೆ ಕುರಿತು ಚರ್ಚೆ ನಡೆಯುತ್ತಿದೆ. ಕೆಲ ಸದಸ್ಯರು ಇದರ ಪರವಾಗಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಗೊಂದಲಗಳ ನಡುವೆಯೇ ಈ ಪ್ರದೇಶದ ರಿಯಲ್​ಎಸ್ಟೇಟ್ ವ್ಯಾಪಾರಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ‘ಮುಂದೆ ಇದು ಬಿಬಿಎಂಪಿಗೆ ಸೇರುತ್ತದೆ’ ಎನ್ನುತ್ತಲೇ ನಿವೇಶನ ಮಾರಾಟ ನಡೆಸಿದ್ದಾರೆ. 65 ಹೊಸ ಹಳ್ಳಿಗಳ ಸೇರ್ಪಡೆ ಆಗಿ ಹೋಗಿದೆ, ಅಧಿಕೃತ ಸಹಿ ಮಾತ್ರ ಬಾಕಿ ಇದೆ ಎಂದು ಜನರ ದಾರಿ ತಪ್ಪಿಸಲಾಗುತ್ತಿದೆ. ನಿವೇಶನ ದರಗಳಲ್ಲಿ ಶೇ.10-15 ಏರಿಕೆಯನ್ನು ಮಧ್ಯವರ್ತಿಗಳು ಮಾಡಿದ್ದಾರೆ ಎಂದು ಚಿಕ್ಕಬಾಣಾವರದ ನಿವಾಸಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಜನಪ್ರತಿನಿಧಿಗಳನ್ನು ಅಣಕಿಸಿ ರಸ್ತೆ ಹಳ್ಳದಲ್ಲಿ ಬಾಗಿನ ಸಲ್ಲಿಸಿದ ರೈತ ಸಂಘ

    65 ಹಳ್ಳಿ ಮೀರಿದ ವ್ಯಾಪಾರ:
    ರಿಯಲ್ ಎಸ್ಟೇಟ್ ಉದ್ಯಮಿಗಳ ಕಣ್ಣು ಈಗಾಗಲೆ 65 ಹಳ್ಳಿಗಳ ನಂತರದ ಗ್ರಾಮಗಳ ಮೇಲೆ ಬಿದ್ದಿದೆ. 65 ಹಳ್ಳಿ ನಂತರದ ಗ್ರಾಮಗಳಲ್ಲಿನ ಕೃಷಿ ಭೂಮಿಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ನಡೆಸಲು ಉದ್ಯಮಿಗಳು ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಮೀನು ಮಾಲೀಕರನ್ನು ಮಾತುಕತೆಗೆ ಕರೆಯುವ ಪ್ರಮಾಣ ಹೆಚ್ಚಾಗಿದೆ ಎಂದು ರಾಜಾನುಕುಂಟೆ ವ್ಯಾಪ್ತಿಯ ರಿಯಲ್​ಎಸ್ಟೇಟ್ ಉದ್ಯಮಿಯೊಬ್ಬರು ತಿಳಿಸಿದ್ದಾರೆ.

    2007-08ರಲ್ಲಿ ಸೇರ್ಪಡೆ ಮಾಡಿಕೊಂಡ ಗ್ರಾಮಗಳಲ್ಲಿ ಶೇ.90 ಪ್ರದೇಶಕ್ಕೆ ನೀರು, ಒಳಚರಂಡಿ, ವಿದ್ಯುತ್ ದೀಪ, ರಸ್ತೆಯಂತಹ ಮೂಲಸೌಕರ್ಯವನ್ನೂ ನೀಡಲು ಸಾಧ್ಯವಾಗಿಲ್ಲ. 110 ಹಳ್ಳಿಗಳ ಸೇರ್ಪಡೆಯಿಂದ ರಿಯಲ್​ಎಸ್ಟೇಟ್ ಉದ್ಯಮಕ್ಕೆ ಬಿಟ್ಟರೆ ಯಾರಿಗೂ ಲಾಭವಾಗಿಲ್ಲ. ಮೊದಲು ಹಿಂದಿನ ತಪ್ಪನ್ನು ಸರಿಪಡಿಸಿಕೊಂಡು ನಂತರ ಹೊಸ ಸೇರ್ಪಡೆ ಬಗ್ಗೆ ಯೋಚಿಸಲಿ ಎಂದು ನಗರ ಯೋಜನಾ ತಜ್ಞ ಎನ್.ಆರ್. ಸುರೇಶ್ ಹೇಳಿದ್ದಾರೆ.

    ಇದನ್ನೂ ಓದಿ: ಶ್ರೇಷ್ಠಮಾರ್ಗದಲ್ಲಿ ನಡೆಯಲೂ ಛಾತಿ ಬೇಕು!

    ಅಂಕಿ-ಅಂಶಗಳೇ ಇಲ್ಲ
    ಹೊಸ ಪ್ರದೇಶಗಳ ಸೇರ್ಪಡೆ ಎಂಬುದು ಕಣ್ಮುಚ್ಚಿ ಕೈಗೊಳ್ಳುವ ನಿರ್ಧಾರವಲ್ಲ ಎಂದು ನಮ್ಮ ಬೆಂಗಳೂರು ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕ ಹರೀಶ್ ತಿಳಿಸಿದ್ದಾರೆ. ಹೊಸ ಹಳ್ಳಿಗಳನ್ನು ಸೇರ್ಪಡೆ ಮಾಡುವುದರಿಂದ ಆಗುವ ಲಾಭ, ನಷ್ಟಗಳೇನು ಎಂಬುದನ್ನು ರ್ಚಚಿಸಲು ಅಗತ್ಯ ಅಂಕಿ-ಅಂಶಗಳೇ ಇಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ನಿರ್ಧಾರ ಸರಿಯಲ್ಲ ಎಂದಿದ್ದಾರೆ.

    ಮನೆ ಬಾಡಿಗೆಗೆ ಕೇಳ್ತಾ ಬಂದವರು ಮಾಲೀಕನ ಹತ್ಯೆಗೆ ಯತ್ನಿಸಿದ್ರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts