More

    ಮಳೆ ಅವಾಂತರ ಎದುರಿಸಲು ಸಜ್ಜು

    ಸವಣೂರ: ಕರೊನಾ ಮಹಾಮಾರಿಯನ್ನು ನಿಯಂತ್ರಿಸಲು ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ವಿುಕರು ನಿತ್ಯ ಪರಿಶ್ರಮಪಡುತ್ತಿದ್ದಾರೆ. ಇನ್ನೊಂದೆಡೆ ಮಳೆಗಾಲದಲ್ಲಿ ಎದುರಾಗಬಹುದಾದ ಸಂಭಾವ್ಯ ಸಮಸ್ಯೆ ಎದುರಿಸಲು ಪುರಸಭೆ ಆಡಳಿತ ಮಂಡಳಿ ಸಜ್ಜಾಗಿದೆ.

    ಪುರಸಭೆ ವ್ಯಾಪ್ತಿಯಲ್ಲಿ 27 ವಾರ್ಡ್​ಗಳಿವೆ. ಅಂದಾಜು 42000 ಜನಸಂಖ್ಯೆ ಇದೆ. ಬಹುತೇಕ ವಾರ್ಡ್​ಗಳ ಚರಂಡಿಗಳಲ್ಲಿ ತ್ಯಾಜ್ಯ ತುಂಬಿದೆ. ಅಲ್ಪಸ್ವಲ್ಪ ಮಳೆಯಾದರೆ ಸಾಕು, ಗಟಾರುಗಳು ತುಂಬಿ ನೀರಿನೊಂದಿಗೆ ಕೊಳಚೆಯೂ ರಸ್ತೆಯನ್ನು ಆವರಿಸುತ್ತದೆ. ನೂರಾನಿ ಓಣಿ, ಸಮಗಾರ ಓಣಿ, ಕೋರಿಪೇಟೆ, ವಡ್ಡರ ಓಣಿ, ಸುಣಗಾರ ಓಣಿ, ಭೋವಿ ಓಣಿ, ಡೋರ ಓಣಿ, ಶುಕ್ರವಾರಪೇಟೆ ಮತ್ತಿತರೆಡೆ ಮನೆಗಳಿಗೆ ಕೊಳಚೆ ನೀರು ಮನೆಗೆ ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗುತ್ತದೆ. ಈ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪುರಸಭೆಯವರು ಸ್ಪಂದಿಸುತ್ತಿಲ್ಲ ಎಂದು ದೂರುತ್ತಾರೆ ಇಲ್ಲಿನ ನಿವಾಸಿಗಳು.

    ಪಟ್ಟಣದಲ್ಲಿರುವ ರಾಜಕಾಲುವೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದೆ. ಹೂಳೆತ್ತಲು ಯೋಜನೆ ಸಿದ್ಧವಾಗಿದೆಯಾದರೂ ಕಾರ್ಯರೂಪಕ್ಕೆ ಬಂದಿಲ್ಲ. ರಾಜಕಾಲುವೆಯನ್ನು ಸ್ವಚ್ಛಗೊಳಿಸದಿದ್ದರೆ ಮಳೆಗಾಲದಲ್ಲಿ ಸಮಗಾರ ಓಣಿ, ಸುಣಗಾರ ಓಣಿಯ ನಿವಾಸಿಗಳು ತೊಂದರೆಗೀಡಾಗುವುದರಲ್ಲಿ ಸಂದೇಹವಿಲ್ಲ.

    ದೊಡ್ಡಕೆರೆಗೆ ಕೊಳಚೆ ನೀರು: ಮಳೆಗಾಲದಲ್ಲಿ ಪಟ್ಟಣದ ಧರ್ಮರಾಜ ನಗರ, ಖಾದ್ರಿಯಾ ನಗರ ಮತ್ತಿತರ ಸ್ಥಳಗಳ ಕೊಳಚೆ ನೀರು ಪಟ್ಟಣದ ದೊಡ್ಡಕೆರೆ (ಮೋತಿ ತಲಾಬ್)ಗೆ ಹರಿದು ಬರುತ್ತದೆ. ಅಲ್ಲದೆ, ಕಸಾಯಿಖಾನೆ ಹಾಗೂ ಖಬರಸ್ತಾನದ ನೀರು ಕೆರೆಗೆ ಹರಿದು ಬರುತ್ತದೆ. ಈ ಕುರಿತು ಪುರಸಭೆ ಕೂಡಲೆ ಸೂಕ್ತ ಕ್ರಮಕೈಗೊಂಡು ದೊಡ್ಡಕೆರೆ ಮಲಿನವಾಗುವುದನ್ನು ತಡೆಯಬೇಕಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಅವರು, ‘ಈಗಾಗಲೇ ರಾಜಕಾಲುವೆ ಹೂಳೆತ್ತುವ ಕಾರ್ಯ ಆರಂಭಿಸಲಾಗಿದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳೆಗಾಲ ಎದುರಿಸಲು ಪೂರ್ವ ಮುನ್ನಚ್ಚೆರಿಕೆ ಸೂಚನೆ ತಂಡ (5 ಜನರು) ಹಾಗೂ ವಿಶೇಷ ಕಾರ್ಯಪಡೆ (8 ಜನರು) ರಚಿಸಲಾಗಿದೆ. ಪುರಸಭೆಯಲ್ಲಿ 38 ಪೌರ ಕಾರ್ವಿುಕರು, 1 ಜೆಸಿಬಿ, 3 ಟ್ರ್ಯಾಕ್ಟರ್, 6 ಆಟೋ ಹಾಗೂ ಒಂದು 407 ವಾಹನ ಕಾರ್ಯ ನಿರ್ವಹಿಸುತ್ತಿವೆ’ ಎಂದರು.

    ಕೋವಿಡ್ ಹಿನ್ನೆಲೆಯಲ್ಲಿ ಪೌರ ಕಾರ್ವಿುಕರಿಗೆ ಈಗಾಗಲೇ ವ್ಯಾಕ್ಸಿನ್ ಹಾಕಿಸಲಾಗಿದೆ. ಮಳೆಗಾಲದಲ್ಲಿ ಕಾರ್ಯ ನಿರ್ವಹಿಸಲು ಸೂಕ್ತ ತರಬೇತಿ ನೀಡಲಾಗುವುದು. ರೇನ್​ಕೋಟ್, ಫೇಸ್​ವಾಸ್ಕ್ ವಿತರಿಸಲಾಗುವುದು ಎಂದರು.

    ರಾಜ್ಯ ಹೆದ್ದಾರಿಯಲ್ಲಿ ಮಳೆ ನೀರು ಹರಿಯುವುದನ್ನು ನಿಲ್ಲಿಸಲು ಕಚ್ಚಾ ಗಟಾರ ನಿರ್ಮಾಣ ಕಾರ್ಯವನ್ನು ಆರೋಗ್ಯ ನಿರೀಕ್ಷಕ ಮಹೇಂದ್ರ ಮುದಿಯಣ್ಣನವರ ಅವರು ಆರಂಭಿಸಿದ್ದಾರೆ. ಮಳೆ ನೀರು ಮನೆಗೆ ನುಗ್ಗಿದಲ್ಲಿ ಸಂತ್ರಸ್ತರು ವಾಸಿಸಲು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನ, ಅಂಜುಮನ್ ಶಾದಿಹಾಲ್ ಹಾಗೂ ಕಮಾಲಬಂಗಡಿ ಎಚ್​ಕೆಪಿ ಶಾದಿಹಾಲ್​ನಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

    ಮಳೆಗಾಲದಲ್ಲಿ ಉಂಟಾಗುವ ಸಂಕಷ್ಟ ಎದುರಿಸಲು ಪುರಸಭೆ ಸರ್ವ ಸಿದ್ಧತೆ ಕೈಗೊಂಡಿದೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು.

    | ಶೈಲಾ ಹನುಮಂತಗೌಡ ಮುದಿಗೌಡ್ರ, ಪುರಸಭೆ ಅಧ್ಯಕ್ಷೆ

    ಮಳೆ ನೀರು ನುಗ್ಗುವ ಪ್ರದೇಶಗಳಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಳೆಯಿಂದ ಯಾವುದೇ ತೊಂದರೆಯಾದಲ್ಲಿ ಸಾರ್ವಜನಿಕರು ಪುರಸಭೆ ಸಹಾಯವಾಣಿ 08378-241724ಗೆ ಕರೆ ಮಾಡಬಹುದು. ಅಥವಾ ಮೊ.ಸಂ. 97431 02529ಗೆ ವಾಟ್ಸ್ ಆಪ್ ಮೂಲಕ ಗಮನಕ್ಕೆ ತರಬಹುದು.

    | ಕೃಷ್ಣ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts