More

    ಕೋವಿಡ್-19 ಮಾತ್ರವಲ್ಲ, ಕೋವಿಡ್​-20, ಕೋವಿಡ್​-21ಕ್ಕೂ ಜಗತ್ತು ಸಿದ್ಧವಾಗಿ ಇರಬೇಕಾದ ಅಪಾಯವಿದೆಯೇ?

    ವೂಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯ ವೈರಸ್ ಬ್ಯಾಂಕ್​ನಲ್ಲೇ ಸಾವಿರದ 500ಕ್ಕೂ ಹೆಚ್ಚು ವೈರಸ್​ಗಳ ಸಂಗ್ರಹವಿದೆಯೆಂತೆ. ದೇಶದ ಇತರೆಡೆ ಇರುವ ಲ್ಯಾಬ್​ಗಳಲ್ಲೂ ವೈರಸ್ ಬ್ಯಾಂಕ್​ಗಳಿವೆಯಂತೆ ಮತ್ತು ಹೆಚ್ಚಿನೆಡೆ ಸುರಕ್ಷತೆ ಅಗತ್ಯ ಪ್ರಮಾಣದಲ್ಲಿಲ್ಲ. ಇದರರ್ಥ ಕೋವಿಡ್-19 ಜತೆಗೆ ಕೋವಿಡ್-20 ಅಥವಾ ಕೋವಿಡ್-21ಕ್ಕೂ ಜಗತ್ತು ತಯಾರಾಗಿರಬೇಕಾದ ಅಪಾಯವಿದೆ.

    ಕೋವಿಡ್-19 ಮಾತ್ರವಲ್ಲ, ಕೋವಿಡ್​-20, ಕೋವಿಡ್​-21ಕ್ಕೂ ಜಗತ್ತು ಸಿದ್ಧವಾಗಿ ಇರಬೇಕಾದ ಅಪಾಯವಿದೆಯೇ?ನಾವೆಲ್ ಕರೊನಾ ಸೋಂಕು ಜಗತ್ತಿನಾದ್ಯಂತ ಹರಡುತ್ತಿರುವ ವೇಗವನ್ನು ನೋಡಿದರೆ ಮಾನವಜನಾಂಗದ ಭವಿಷ್ಯದ ಬಗ್ಗೇ ಆತಂಕವಾಗುತ್ತದೆ. ಶತಮಾನಕ್ಕೊಮ್ಮೆ ಯಾವುದಾದರೊಂದು ಮಹಾಮಾರಿ ಮನುಷ್ಯಕುಲವನ್ನು ಬಾಧಿಸುವುದು ಕಳೆದ ಮೂರು ನಾಲ್ಕು ಶತಮಾನಗಳಿಂದಲೂ ಒಂದು ನಿರ್ದಿಷ್ಟ ಕ್ರಮದಂತೆ ಜರುಗುತ್ತಿದ್ದರೂ ಭೀಕರತೆಯ ದೃಷ್ಟಿಯಿಂದ ಪ್ರಸಕ್ತ ಪರಿಸ್ಥಿತಿಯಂಥದನ್ನು ಜಗತ್ತು ಎದುರಿಸುತ್ತಿರುವುದು ಲಿಖಿತ ಇತಿಹಾಸದಲ್ಲಿ ಇದೇ ಮೊದಲು. ಕರೊನಾ ಸೋಂಕು ಆರಂಭವಾದ ನಾಲ್ಕು ತಿಂಗಳಲ್ಲಿ ಇಪ್ಪತ್ತು ಲಕ್ಷ ಜನರಿಗೆ ಹರಡಿದೆ ಮತ್ತು ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ, ಸೋಂಕಿತರ ಮತ್ತು ಬಲಿಯಾಗುವವರ ಸಂಖ್ಯೆ ದಿನದಿನವೂ ಏರುತ್ತಲೇ ಇದೆ.

    ಕರೊನಾ ಸೋಂಕು ಮೊದಲಿಗೆ ಕಾಣಿಸಿಕೊಂಡದ್ದು ಚೀನಾದ ವೂಹಾನ್ ನಗರದಲ್ಲಿ, ಕಳೆದ ವರ್ಷದ ನವೆಂಬರ್-ಡಿಸೆಂಬರ್​ನಲ್ಲಿ ಎನ್ನುವುದು ಸದ್ಯಕ್ಕೆ ಸಾಬೀತಾಗಿರುವ ಸತ್ಯ. ಅದು ಉತ್ಪತ್ತಿಯಾದದ್ದು ನಗರದ ಹಸಿ ಮಾರುಕಟ್ಟೆಯಲ್ಲಿ ಆಹಾರಕ್ಕಾಗಿ ಮಾರಾಟವಾಗುತ್ತಿದ್ದ ಬಾವಲಿ, ಹಾವು ಅಥವಾ ಪ್ಯಾಂಗೋಲಿನ್​ಗಳಲ್ಲೇ ಅಥವಾ ಮಾರುಕಟ್ಟೆಗೆ ಹತ್ತಿರದ ವೂಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲೇ ಎನ್ನುವುದು ಮಾತ್ರ ನಿರ್ದಿಷ್ಟವಾಗಿ ತಿಳಿಯಬೇಕಾಗಿದೆ. ಆದರೆ ಒಂದಂತೂ ಸ್ಪಷ್ಟ. ವೈರಸ್ ಹರಡುವಿಕೆ ನಿಯಂತ್ರಣ ತಪ್ಪುವುದರಲ್ಲಿ ಚೀನೀ ಸರ್ಕಾರದ ಪಾತ್ರ ಬಲು ದೊಡ್ಡದು. ಇಡೀ ಪ್ರಕರಣದಲ್ಲಿ ಚೀನೀ ಕಮ್ಯೂನಿಸ್ಟ್ ಸರ್ಕಾರ ಅನುಸರಿಸಿದ/ಅನುಸರಿಸುತ್ತಿರುವ ನೀತಿ ಸುಳ್ಳುಗಳು, ಉದ್ದೇಶಪೂರ್ವಕ ತಪ್ಪುಸಂದೇಶ ಮತ್ತು ಸತ್ಯದ ಮರೆಮಾಚುವಿಕೆಯಿಂದ ಕೂಡಿದೆ.

    ಮೊದಲಿಗೆ, ವೈರಸ್ ಕಾಣಿಸಿಕೊಂಡ ಬಗ್ಗೆ ಡಿಸೆಂಬರ್ ಅಂತ್ಯದಲ್ಲೇ ಸೂಚನೆ ನೀಡಿದ ವೂಹಾನ್ ನಗರದ ಆಸ್ಪತ್ರೆಯ ಒಬ್ಬರು ವೈದ್ಯೆ ಮತ್ತು ಒಬ್ಬರು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಚೀನೀ ಸರ್ಕಾರ ವೈರಸ್ ಬಗೆಗಿನ ಸುದ್ದಿ ಬಹಿರಂಗವಾಗದಂತೆ ಕ್ರಮ ಕೈಗೊಂಡಿತು. ವೈದ್ಯ ಅದೇ ವೈರಸ್​ನಿಂದ ಮೃತಪಟ್ಟ ಎಂದು ಹೇಳಲಾಗುತ್ತಿದೆ. ಅದು ನಿಜವಾದ ಸಾವೇ ಅಥವಾ ಕೊಲೆಯೇ ಎನ್ನುವುದು ಬಹುಶಃ ನಮಗೆಂದಿಗೂ ತಿಳಿಯಲಾರದು. ಬಂಧನಕ್ಕೊಳಗಾದ ವೈದ್ಯೆಯ ಬಗ್ಗೆ ಯಾವ ಸುದ್ದಿಯೂ ಇಲ್ಲ. ನಂತರ ವೂಹಾನ್ ನಗರದಲ್ಲೇ ವೈರಸ್ ಜನರಿಂದ ಜನರಿಗೆ ಹರಡುತ್ತಿದ್ದರೂ, ಈ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುವಂಥದಲ್ಲ ಎಂಬ ಹಸಿಸುಳ್ಳನ್ನು ಚೀನಾ ಜಗತ್ತಿಗೆ ರವಾನಿಸಿತು. ಮಾರಕ ವೈರಸ್ ಬಗ್ಗೆ ಹೊರಜಗತ್ತು ಅಗತ್ಯ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲು ನಿಧಾನಿಸಿದ್ದಕ್ಕೆ ಚೀನಾದ ಈ ಉದ್ದೇಶಪೂರ್ವಕ ಸುಳ್ಳುಸುದ್ದಿ ಕಾರಣ. ಜನವರಿ ಅಂತ್ಯದ ಹೊತ್ತಿಗೆ ವೈರಸ್ ಚೀನಾವನ್ನು ದಾಟಿ ಹೊರಜಗತ್ತಿನಲ್ಲಿ ಮನುಷ್ಯನಿಂದ ಮನುಷ್ಯನಿಗೆ ವೇಗವಾಗಿ ಹರಡತೊಡಗಿದಾಗ ಚೀನೀ ಸರ್ಕಾರ ವೈರಸ್ ಉತ್ಪತ್ತಿಯಾದದ್ದು ಅಮೆರಿಕದಲ್ಲಿ ಎಂದು ಮೊದಲು ಹೇಳಿ ನಂತರ ಅದನ್ನು ಇಟಲಿಯ ತಲೆಗೆ ಕಟ್ಟಲು ನೋಡಿತು. ಅಷ್ಟೇ ಅಲ್ಲ, ಚೀನೀ ಸರ್ಕಾರದ ವಿದ್ಯಾ ಇಲಾಖೆ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಹೊರಡಿಸಿರುವ ಸುತ್ತೋಲೆ ಏನು ಹೇಳುತ್ತದೆ ಗೊತ್ತೇ? ಕರೊನಾ ಸೋಂಕು ಬಗೆಗಿನ ಯಾವುದೇ ಸಂಶೋಧನಾ ಲೇಖನ ಪ್ರಕಟಣೆಗೆ ಮೊದಲು ಚೀನೀ ಸರ್ಕಾರ ನೇಮಿಸಿರುವ ಸಮಿತಿಯ ಪರಿಶೀಲನೆಗೊಳಗಾಗಬೇಕು! ವೈರಸ್ ಮೊದಲು ಕಾಣಿಸಿಕೊಂಡದ್ದು ವೂಹಾನ್ ನಗರದಲ್ಲಿ ಎಂದು ಹೇಳುವ ಯಾವುದೇ ಲೇಖನಕ್ಕೆ ಪ್ರಕಟನಾಭಾಗ್ಯವಿಲ್ಲ! ಕಳೆದ ದಶಕದಲ್ಲಿ ಜಗತ್ತನ್ನು ತಾತ್ಕಾಲಿಕವಾಗಿ ಬಾಧಿಸಿದ್ದ ಸಾರ್ಸ್ ರೋಗದ ವೈರಸ್ ಹೊರಬಿದ್ದದ್ದು ರಾಜಧಾನಿ ಬೀಜಿಂಗ್​ನಲ್ಲೇ ಇದ್ದ ಲ್ಯಾಬ್ ಒಂದರಿಂದ ಎನ್ನುವುದು ಜಗತ್ತಿಗೆ ಢಾಣಾಡಂಗುರವಾದ ಹಿನ್ನೆಲೆಯಲ್ಲಿ ಪ್ರಸಕ್ತ ಕರೊನಾ ಸೋಂಕು ಹೊರಬಿದ್ದದ್ದು ತನ್ನದೇ ಮತ್ತೊಂದು ಲ್ಯಾಬ್​ನಿಂದ ಎಂದು ಜಗತ್ತು ತಿಳಿಯಬಾರದೆಂದು ಚೀನೀ ಸರ್ಕಾರ ಹೆಣಗಾಡುತ್ತಿರುವಂತಿದೆ. ಆದರೆ ಭಯಾನಕ ವಿಷಯವೆಂದರೆ ವೂಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯ ವೈರಸ್ ಬ್ಯಾಂಕ್​ನಲ್ಲೇ ಸಾವಿರದ ಐನೂರಕ್ಕಿಂತಲೂ ಹೆಚ್ಚು ವೈರಸ್​ಗಳ ಸಂಗ್ರಹವಿದೆಯಂತೆ. ದೇಶದ ಇತರೆಡೆ ಇರುವ ಲ್ಯಾಬ್​ಗಳಲ್ಲೂ ವೈರಸ್ ಬ್ಯಾಂಕ್​ಗಳಿವೆಯಂತೆ ಮತ್ತು ಹೆಚ್ಚಿನೆಡೆ ಸುರಕ್ಷತೆ ಅಗತ್ಯ ಪ್ರಮಾಣದಲ್ಲಿಲ್ಲ. ಇದರರ್ಥ ಕೋವಿಡ್-19 ಜತೆಗೆ ಕೋವಿಡ್-20 ಅಥವಾ ಕೋವಿಡ್-21ಕ್ಕೂ ಜಗತ್ತು ತಯಾರಾಗಿರಬೇಕಾದ ಅಪಾಯವಿದೆ.

    ಚೀನಾ ಹೇಳುವುದು ತನ್ನಲ್ಲಿ ಸೋಂಕಿತರ ಸಂಖ್ಯೆ 82,000 ದಾಟಲಿಲ್ಲ ಮತ್ತು ಅದರಲ್ಲಿ ತೊಂಬತ್ತು ಭಾಗ ಗುಣಮುಖರಾಗಿದ್ದಾರೆ ಎಂದು. ಅಷ್ಟು ಪ್ರಮಾಣದಲ್ಲಿ ಸೋಂಕಿತರು ಗುಣಮುಖರಾದದ್ದು ಯಾವ ಔಷಧಗಳಿಂದ ಎಂದು ಮಾತ್ರ ಚೀನೀ ಸರ್ಕಾರ ಹೇಳುತ್ತಿಲ್ಲ! ಚೀನೀ ಸರ್ಕಾರ ಅದೆಷ್ಟೇ ಬಚ್ಚಿಟ್ಟರೂ ಅದರ ಕಣ್ಣು ತಪ್ಪಿಸಿ ಅಲ್ಲಿಂದ ರಹಸ್ಯವಾಗಿ ಹೊರಜಗತ್ತಿಗೆ ಬರುತ್ತಿರುವ ಸುದ್ದಿಗಳು ಭಯಾನಕವಾಗಿವೆ. ಕರೊನಾ ಸೋಂಕಿನಿಂದಾಗಿ ಚೀನಾದಲ್ಲಿ ಒಂದರಿಂದ ಒಂದೂವರೆ ಕೋಟಿ ಜನ ಮೃತಪಟ್ಟಿರುವರಂತೆ! ಇಡೀ ದೇಶದಲ್ಲಿ ವ್ಯಾಪಕವಾಗಿ ಹರಡಿರುವ ರೋಗದಿಂದಾಗಿ ಎಲ್ಲ ಆರ್ಥಿಕ ಚಟುವಟಿಕೆಗಳೂ ಸ್ತಬ್ಧವಾಗಿವೆ. ಕಾರ್ಖಾನೆಗಳು ಮತ್ತೆ ಕಾರ್ಯಾರಂಭ ಮಾಡಿವೆ ಎಂದು ಚೀನೀ ಸರ್ಕಾರ ಹೊರಜಗತ್ತಿಗೆ ಹೇಳುತ್ತಿದೆ. ಆದರೆ ನಿಜವಾಗಿ ನಡೆಯುತ್ತಿರುವುದು ಏನೆಂದರೆ ಕಾರ್ಖಾನೆಗಳಲ್ಲಿ ದೀಪಗಳು ಉರಿಯುತ್ತಿವೆ, ಯಂತ್ರಗಳು ಸದ್ದು ಮಾಡುತ್ತಿವೆ, ಆದರೆ ಆ ಕಾರ್ಖಾನೆಗಳಿಂದ ಯಾವುದೇ ಉತ್ಪನ್ನ ಹೊರಬರುತ್ತಿಲ್ಲ! ತನ್ನಲ್ಲಿ ಅಗತ್ಯ ಪ್ರಮಾಣದ ಆಹಾರಧಾನ್ಯಗಳ ಸಂಗ್ರಹವಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಅದೇ ಸರ್ಕಾರ ಮುಂದಿನ ಆರು ತಿಂಗಳ ಕಾಲ ಆಹಾರಸೇವನೆಯನ್ನು ಮಿತಿಗೊಳಿಸುವಂತೆ ಜನತೆಗೆ ಸೂಚನೆ ನೀಡಿದೆಯೆಂಬ ವರದಿಯಿದೆ!

    140 ಕೋಟಿ ಜನಸಂಖ್ಯೆಯ ಚೀನಾ ಜಾಗತಿಕವಾಗಿ ಆಹಾರದ ಅತಿ ದೊಡ್ಡ ಉತ್ಪಾದಕ ಹಾಗೂ ಆಯಾತಕ, ನಿಜ. ಆದರೆ ವೈರಸ್ ಪ್ರಸರಣದಿಂದಾಗಿ ದೇಶದಲ್ಲಿ ಆಹಾರಸಾಮಗ್ರಿಗಳ ಸಾಗಾಟಕ್ಕೆ ತೀವ್ರ ಧಕ್ಕೆಯೊದಗಿದೆ, ಅಕ್ಕಿಯನ್ನು ಬೃಹತ್ ಪ್ರಮಾಣದಲ್ಲಿ ನೀಡುತ್ತಿದ್ದ ವಿಯೆಟ್ನಾಮ್ ಅದನ್ನೀಗ ನಿಲ್ಲಿಸಿದೆ, ಥಾಯ್ಲೆಂಡ್​ನಿಂದ ಮೊಟ್ಟೆಗಳು ಬರುತ್ತಿಲ್ಲ, ಮಿಡತೆಗಳ ಕಾಟದಿಂದಾಗಿ ತತ್ತರಿಸಿರುವ ಆಫ್ರಿಕಾದ ದೇಶಗಳಿಂದಲೂ ಚೀನಾಗೆ ಆಹಾರಧಾನ್ಯಗಳ ಪೂರೈಕೆ ನಿಂತುಹೋಗಿದೆ. ಇನ್ನು, ಜಗತ್ತು ವೈರಸ್ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಿದೆ ಎಂದು ನೋಡೋಣ.

    ಲಾಕ್​ಡೌನ್ ನಿಯಮಗಳನ್ನು ಸರಿಯಾಗಿ ಜಾರಿಗೊಳಿಸದ ಸರ್ಕಾರ ಹಾಗೂ ಪಾಲಿಸದ ಜನತೆಯಿಂದಾಗಿ ಇಂದು ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಐದೂವರೆ ಲಕ್ಷ ದಾಟಿದೆ ಮತ್ತು ಇಪ್ಪತ್ತೆರಡು ಸಾವಿರಕ್ಕಿಂತಲೂ ಹೆಚ್ಚು ಜನ ಮೃತಪಟ್ಟಿದ್ದಾರೆ, ದೇಶದೊಳಗೇ 150 ಸೇನಾ ನೆಲೆಗಳಿಗೆ ಸೋಂಕು ಹರಡಿದೆ. ಇದರರ್ಥ ತನ್ನ ಸೂಪರ್ ಪವರ್ ಸ್ಥಾನವನ್ನು ಅಮೆರಿಕ ಉಳಿಸಿಕೊಳ್ಳುವುದು ಬಹುಶಃ ಅಸಾಧ್ಯ. ವೈರಸ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ, ‘ಜನರಲ್ಲಿ ಪ್ರತಿರೋಧ ಶಕ್ತಿ ಬೆಳೆಯುವಂತೆ ಮಾಡುವ ವಿಧಾನ ಅನುಸರಿಸುತ್ತೇವೆ’ ಎಂದು ಹೇಳಿಕೊಂಡ ಬ್ರಿಟನ್ ಇಂದು ತೀವ್ರ ಸಂಕಷ್ಟಕ್ಕೊಳಗಾಗಿದೆ. ಪರಿಣಾಮವಾಗಿ ಮಾರ್ಚ್ 23ರಂದು ಆರಂಭವಾದ ಲಾಕ್​ಡೌನ್ ಇನ್ನು ಆರು ತಿಂಗಳವರೆಗೆ ಮುಂದುವರಿಯಲಿದೆಯಂತೆ. ‘ಸೋಂಕಿನ ಬಗ್ಗೆ ನನಗೆ ಯಾವುದೇ ಭಯವಿಲ್ಲ, ಸೋಂಕಿತರೊಂದಿಗೆ ಹಸ್ತಲಾಘವಕ್ಕೆ ನಾನು ಸಿದ್ಧ’ ಎಂದು ಅತೀವ ಬೇಜವಾಬ್ದಾರಿ ಪ್ರದರ್ಶಿಸಿದ ಪ್ರಧಾನಿ ಬೋರಿಸ್ ಜಾನ್ಸನ್ ತಾವೇ ಸೋಂಕು ಅಂಟಿಸಿಕೊಂಡ ಬಗ್ಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಅವರೀಗ ಗುಣಮುಖವಾಗಿದ್ದಾರೆ ಎನ್ನುವುದು ಸಮಾಧಾನದ ವಿಷಯ.

    ಇಂಥದೇ ಬೇಜವಾಬ್ದಾರಿ ಜಾಗತಿಕವಾಗಿಯೂ ಗೋಚರಿಸುತ್ತಿದೆ. ಮಾರ್ಚ್ ತಿಂಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಅಧ್ಯಕ್ಷನಾಗಿದ್ದ ಚೀನಾ ಅಲ್ಲಿ ಕರೊನಾ ಸೋಂಕಿನ ಬಗ್ಗೆ ಯಾವುದೇ ಚರ್ಚೆಯಾಗದಂತೆ ನೋಡಿಕೊಂಡಿತು. ಈ ತಿಂಗಳು ಅಧ್ಯಕ್ಷಪದವಿ ಡೊಮಿನಿಕನ್ ರಿಪಬ್ಲಿಕ್ ಕೈಗೆ ಬಂದಾಗ ಕರೊನಾ ಬಗ್ಗೆ ಚರ್ಚೆಯಾಗುತ್ತದೆಂಬ ಆಶಯ ಸಹಜವಾಗಿಯೇ ಮೂಡಿತು. ಕಳೆದವಾರದ ಭದ್ರತಾ ಸಮಿತಿ ಸಭೆಯಲ್ಲಿ ಅಮೆರಿಕ ಒಂದನ್ನುಳಿದು ಬೇರಾವ ದೇಶವೂ ಚೀನಾದಿಂದ ಸೂಕ್ತ ಮಾಹಿತಿ ಹಾಗೂ ಪರಿಹಾರಾತ್ಮಕ ಯೋಜನೆಗಳ ಬಗ್ಗೆ ವಿವರಗಳನ್ನು ಕೇಳಲಿಲ್ಲ. ತನ್ನ ನೆಲದಲ್ಲಿರುವ ಚೀನೀಯರನ್ನು ಹುಡುಕಿಹುಡುಕಿ ಚೀನಾಗೆ ಅಟ್ಟುತ್ತಿರುವ ರಷ್ಯಾ ಭದ್ರತಾ ಸಮಿತಿಯಲ್ಲಿ ಮಾತ್ರ ಚೀನಾದ ಪರ ನಿಂತಿತು. ಚೀನಾದ ಆರ್ಥಿಕ ಕಬಂಧಬಾಹು ಯಾರಾರನ್ನು ಹೇಗೆಲ್ಲ ಕಟ್ಟಿಹಾಕಿಬಿಟ್ಟಿದೆ ನೋಡಿ.

    ಇಷ್ಟಾಗಿಯೂ, ಕರೊನಾ ವಿರುದ್ಧದ ಯುದ್ಧಕ್ಕೆ ಜಗತ್ತಿಗೆ ಅತ್ಯಗತ್ಯವಾಗಿ ಬೇಕಾಗಿರುವುದು ಲಸಿಕೆ ಹಾಗೂ ಔಷಧ. ಅದರ ತಯಾರಿಗಾಗಿ ಜಗತ್ತಿನಾದ್ಯಂತ ವೈದ್ಯಕೀಯ ಸಂಶೋಧನಾ ಕಾರ್ಯಯೋಜನೆಗಳು ತೀವ್ರಗತಿಯಲ್ಲಿ ಜಾರಿಯಲ್ಲಿವೆ, ನಿಜ. ಆದರೆ ಲಸಿಕೆ ತಯಾರಾಗಲು ಹನ್ನೆರಡರಿಂದ ಹದಿನೆಂಟು ತಿಂಗಳುಗಳು ಬೇಕಾಗುತ್ತವೆಂಬ ಸುದ್ದಿ ಎದೆಗುಂದಿಸುವಂಥದ್ದು. ಸೆಪ್ಟೆಂಬರ್​ನಲ್ಲೇ ಔಷಧ ಪರೀಕ್ಷೆಗೆ ಸಿದ್ಧವಾಗಬಹುದೆಂಬ ಒಂದು ವರದಿ ಆಶಾದಾಯಕವೆನಿಸಿದರೂ ಅಲ್ಲಿಯವರೆಗೆ ಕಾಯುವ ಚೈತನ್ಯ ಮಾನವಜನಾಂಗಕ್ಕಿದೆಯೇ? ಈ ಗಂಭೀರ ಪ್ರಶ್ನೆಯನ್ನು ನಮ್ಮಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿಯೇ ಅವಲೋಕಿಸಲು ಪ್ರಯತ್ನಿಸೋಣ.

    ಅಮೆರಿಕದಲ್ಲಿ ಲಾಕ್​ಡೌನ್ ನಿಯಮಗಳ ಜಾರಿ ಹಾಗೂ ಪಾಲನೆ ಎರಡೂ ಸೂಕ್ತವಾಗಿಲ್ಲದ ಕಾರಣ ಅಲ್ಲಿ ಸೋಂಕಿತರ ಸಂಖ್ಯೆ ಹತ್ತು ದಿನಗಳಿಗೂ ಕಡಿಮೆ ಅವಧಿಯಲ್ಲಿ ಒಂದು ಲಕ್ಷದಿಂದ ಐದೂವರೆ ಲಕ್ಷಕ್ಕೇರಿತು. ನಮ್ಮಲ್ಲಿ ಕೇಂದ್ರ ಸರ್ಕಾರ ಸೂಕ್ತ ಸಮಯದಲ್ಲಿ ಲಾಕ್​ಡೌನ್ ವಿಧಿಸಿತು ಮತ್ತು ಬಹುಪಾಲು ಜನರೂ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಹೀಗಾಗಿ ವೈರಸ್ ಪ್ರಸರಣ ಅಮೆರಿಕದಲ್ಲಾದಷ್ಟು ಪ್ರಮಾಣದಲ್ಲಾಗಿಲ್ಲ. ಆದರೆ ಇದರಿಂದ ನಾವು ನೆಮ್ಮದಿಯಾಗಿರಬಹುದೇ? ಮಾರ್ಚ್ 25ರಂದು ಕೇವಲ 562 ಇದ್ದ ಸೋಂಕಿತರ ಸಂಖ್ಯೆ ಇಂದು ಹತ್ತು ಸಾವಿರ ದಾಟಿದೆ. ಇದರರ್ಥ ಲಾಕ್​ಡೌನ್ ಸಮಯದಲ್ಲಿ ಸೋಂಕು ನಿಧಾನವಾಗಿಯಾದರೂ ಹರಡುತ್ತಲೇ ಇದೆ ಮತ್ತು ಅದರ ಪ್ರಮಾಣ ದಿನದಿನಕ್ಕೂ ಹೆಚ್ಚುತ್ತಲೇ ಇದೆ! ದೇಶದಲ್ಲಿ ಜನಸಂಖ್ಯೆಯ ಪ್ರಮಾಣ ಹಾಗೂ ಸಾಂದ್ರತೆ ಅಧಿಕವಾಗಿರುವ ಕಾರಣ ವೈರಸ್ ಪ್ರಸರಣ ಇನ್ನಷ್ಟು ತೀವ್ರವಾಗುವುದು ನಿಶ್ಚಿತ. ‘ವೈರಸ್ ಗಾಳಿಯಲ್ಲಿ ಹದಿನೇಳು ಅಡಿಗಳಷ್ಟು ದೂರ ಚಲಿಸಬಲ್ಲುದು’ ಎಂದು ಸಿಂಗಾಪುರದ ವೈದ್ಯಕೀಯ ವಿಜ್ಞಾನಿಗಳು ಪತ್ತೆ ಹಚ್ಚಿರುವುದು ಇಂದು ನಾವು ಅನುಸರಿಸುತ್ತಿರುವ ಸುರಕ್ಷಾ ವಿಧಾನಗಳನ್ನೇ ಬಹುತೇಕ ಅರ್ಥಹೀನಗೊಳಿಸುವಂಥದ್ದು. ನಮ್ಮಲ್ಲಿ ಸಾವಿರದಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎಂಬ ವರದಿಯಿದ್ದರೂ ‘ಗುಣಮುಖ’ರಾದವರಿಗೆ ಮತ್ತೆ ಸೋಂಕು ತಗುಲುತ್ತಿರುವ ಸುದ್ದಿ ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿಂದ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲೇಬೇಕು. ಈ ಎಲ್ಲದರ ಹಿನ್ನೆಲೆಯಲ್ಲಿ ಮುಂಬೈ ನಗರ, ಮುಖ್ಯವಾಗಿ ಧಾರಾವಿ ಒಂದು ಟೈಂಬಾಂಬ್​ನಂತಿದೆ. ಅದು ಸ್ಪೋಟಿಸುವುದು ನಿಶ್ಚಿತ. ಯಾವಾಗ ಎನ್ನುವುದಷ್ಟೇ ಪ್ರಶ್ನೆ. ಅದೇ ಪರಿಸ್ಥಿತಿ ಸಣ್ಣ ಪ್ರಮಾಣದಲ್ಲಿ ದೇಶದಾದ್ಯಂತ ಇದೆ. ಭಾರತದಲ್ಲಿ ಕರೊನಾ ಸೋಂಕಿನ ಸುನಾಮಿ ಏಳಲಿದೆ ಎಂದು ಕೆಲ ಪಾಶ್ಚಿಮಾತ್ಯ ಮೂಲಗಳು ಹೇಳುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಲೇಬೇಕು.

    ಲಾಕ್​ಡೌನ್​ನಿಂದಾಗಿರುವ ಒಂದು ಸ್ಪಷ್ಟ ಅನುಕೂಲವೆಂದರೆ ಮುಂದೆ ಒದಗಲಿರುವ ದುರಂತವನ್ನು ಎದುರಿಸಲು ತಕ್ಕ ಮಟ್ಟಿಗಾದರೂ ಸರ್ಕಾರವನ್ನು ಸಿದ್ಧಗೊಳಿಸಿರುವುದು. ಇಪ್ಪತ್ತು ಸಾವಿರ ರೈಲ್ವೇ ಬೋಗಿಗಳನ್ನು ಮೂರು ಲಕ್ಷ ಐಸೋಲೇಷನ್ ವಾರ್ಡ್​ಗಳಾಗಿ ಬದಲಾಯಿಸುವುದು, ಕಡಿಮೆ ವೆಚ್ಚದ ಸಣ್ಣ ಗಾತ್ರದ ವೆಂಟಿಲೇಟರ್​ಗಳ ತಯಾರಿ ಮುಂತಾದ ಅತ್ಯಗತ್ಯ ಕಾರ್ಯಗಳನ್ನು ಸಾಧಿಸಲು ಅಗತ್ಯವಾದ ಸಮಯಾವಕಾಶ ಸಿಕ್ಕಿದೆ. ಆದರೆ ಅಂತಿಮ ಸತ್ಯವೆಂದರೆ ಈ ದೇಶದಲ್ಲಿರುವ ಜನಸಾಂದ್ರತೆಯೇ ಸರ್ಕಾರದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಮುಂದೊಂದು ದಿನ ವ್ಯರ್ಥಗೊಳಿಸುವ ಅಪಾಯವಿದೆ.

    ಸರ್ಕಾರ ನಮ್ಮ ಜೀವ ಉಳಿಸುವ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಇದೆ. ಅದು ಫಲದಾಯಕ ಆಗಬೇಕಾದರೆ ನಾವು ನಾಗರಿಕರಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಲೇಬೇಕು. ಲಾಕ್​ಡೌನ್ ವೈರಸ್ ಪ್ರಸರಣವನ್ನು ತಡೆಯುವುದಿಲ್ಲ ನಿಜ. ಆದರೆ ಅದು ಪ್ರಸರಣವನ್ನು ನಿಧಾನಗೊಳಿಸುತ್ತದೆ ಎನ್ನುವುದು ಅಷ್ಟೇ ನಿಜ. ಆ ನಿಧಾನ ಪ್ರಸರಣವೇ ಮಹಾಮಾರಿಯನ್ನು ತಕ್ಕಮಟ್ಟಿಗಾದರೂ ನಿಭಾಯಿಸಲು ಸರ್ಕಾರವನ್ನು ಸಮರ್ಥವಾಗಿಸುತ್ತದೆ. ಹೀಗಾಗಿ, ಲಾಕ್​ಡೌನ್ ನಿಯಮಗಳನ್ನು ಪಾಲಿಸಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ, ‘ಸಾಧ್ಯವಾದರೆ’ ಲಸಿಕೆ ಮತ್ತು ಔಷಧ ತಯಾರಾಗುವವರೆಗೆ.

    ಊರಿಗೆ ಬಂದ್ರು ಇಕ್ಕಟ್ಟಿಗೆ ಸಿಲುಕಿದ್ರು: ಸ್ವಗ್ರಾಮಕ್ಕೆ ವಾಪಸಾದ ಆರು ಜನರಿಗೆ ನೋ ಎಂಟ್ರಿ; ಶಾಲೆಯಲ್ಲಿ ಕ್ವಾರಂಟೈನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts