More

    ಬರಲಿಲ್ಲ ಮರುನೇಮಕ ಆದೇಶ

    ಪರಶುರಾಮ ಕೆರಿ ಹಾವೇರಿ

    ಒಂದೆಡೆ ಕರೊನಾ ಮಹಾಮಾರಿಯ ಹೊಡೆತದಿಂದಾಗಿ ಖಾಸಗಿ ಕಾರ್ವಿುಕರು ಒಬ್ಬೊಬ್ಬರಾಗಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದೇ ವೇಳೆ, ಹೊರಗುತ್ತಿಗೆ ಆಧಾರದಲ್ಲಿ ದಿನಗೂಲಿಯಾಗಿ ಹತ್ತಾರು ವರ್ಷಗಳಿಂದ ದುಡಿಯುತ್ತಿದ್ದವರನ್ನು ಮನೆಗೆ ಕಳುಹಿಸುವ ಕಾರ್ಯಕ್ಕೆ ಸರ್ಕಾರವೂ ಮುಂದಾಗಿದೆ.

    ರಾಜ್ಯದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ವಿುಕರ ಸೇವೆಯನ್ನು ಸರ್ಕಾರ ಈ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಳಿಸಿದೆ. ಮೇ ತಿಂಗಳು ಆರಂಭವಾದರೂ ಮುಂದುವರಿಕೆಗೆ ಯಾವುದೇ ಆದೇಶ ನೀಡಿಲ್ಲ. ಇದರಿಂದಾಗಿ ಕಳೆದ ಅನೇಕ ವರ್ಷಗಳಿಂದ ಅಕ್ಷರ ದಾಸೋಹ ಕಚೇರಿಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಬದುಕು ಕಟ್ಟಿಕೊಂಡ್ದಿದ ಕಾರ್ವಿುಕರು ಆತಂಕಕ್ಕೆ ಒಳಗಾಗಿದ್ದಾರೆ.

    ಅಕ್ಷರ ದಾಸೋಹ ಕಾರ್ಯಕ್ರಮದ ವಿವಿಧ ಹಂತಗಳ ಕಚೇರಿಗಳಲ್ಲಿ ದಿನಗೂಲಿ ಆಧಾರದಲ್ಲಿ 416ನೌಕರರು ರಾಜ್ಯದಲ್ಲಿ ಹಾಗೂ 16 ನೌಕರರು ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿವರ್ಷ ಮಾರ್ಚ್ ಅಂತ್ಯಕ್ಕೆ ಸೇವಾವಧಿ ಅಂತ್ಯಗೊಳಿಸಿ, ಅವರನ್ನೇ ಮರು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಮಾರ್ಚ್ ಅಂತ್ಯಕ್ಕೆ ಸೇವಾವಧಿ ಮುಗಿಸಿರುವವರನ್ನು ಮರು ನೇಮಕ ಮಾಡಿಕೊಳ್ಳದೇ ಕಚೇರಿ ಕರ್ತವ್ಯದಂತೆ ಬಿಡುಗಡೆಗೊಳಿಸಲಾಗಿದೆ. ಮರು ನೇಮಕಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ಪ್ರತಿ ತಾಲೂಕು ಕೇಂದ್ರದ ಅಕ್ಷರ ದಾಸೋಹ ಯೋಜನೆಯ ಕಚೇರಿಯಲ್ಲಿ ಒಬ್ಬ ಕಂಪ್ಯೂಟರ್ ಆಪರೇಟರ್, ಒಬ್ಬ ಡಿ ದರ್ಜೆ ನೌಕರಿರಿದ್ದರು. ಕಳೆದ ಹತ್ತಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ವೇತನ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಕರೊನಾ ಪರಿಣಾಮದಿಂದ ಸರ್ಕಾರವು ವಿವಿಧ ಅನುದಾನಗಳಿಗೆ ಕಡಿತ ಮಾಡಲಾಗಿದ್ದು, ಇದರಲ್ಲಿ ಅಕ್ಷರ ದಾಸೋಹ ನೌಕರರ ನೇಮಕಕ್ಕೂ ಕತ್ತರಿ ಬಿದ್ದಿದೆ.

    ಹತ್ತಾರು ವರ್ಷಗಳಿಂದ ಅಕ್ಷರ ದಾಸೋಹ ಯೋಜನೆ ನಂಬಿ ದುಡಿಯುತ್ತಿದ್ದೇವೆ. ಈಗ ಏಕಾಏಕಿ ಕೆಲಸದಿಂದ ತೆಗೆದು ಹಾಕಿದರೆ ನಾವೆಲ್ಲಿಗೆ ಹೋಗಬೇಕು. ಖಾಸಗಿ ಕಂಪನಿಗಳಿಗೆ ನೌಕರರನ್ನು ಕೆಲಸದಿಂದ ತೆಗೆಯಬೇಡಿ ಎಂದು ಹೇಳುವ ಸರ್ಕಾರ ತನ್ನದೇ ಇಲಾಖೆಯಲ್ಲಿ ಕೆಲಸ ಮಾಡುವವರನ್ನು ಕಿತ್ತು ಹಾಕುತ್ತಿರುವುದು ಯಾವ ನ್ಯಾಯ ಎಂದು ಜಿಲ್ಲೆಯಲ್ಲಿ ಸೇವೆಯಿಂದ ಬಿಡುಗಡೆಗೊಂಡ ನೌಕರರಾದ ರೂಪಾ ದಾಮೋದರ, ಇಸ್ಮಾಯಿಲ್ ಮುಲ್ಲಾ, ಸುಧಾ ಅರಳಿಕಟ್ಟಿ, ಷರೀಫ ಗೊಣ್ಣೆಮ್ಮನವರ, ಮಂಜುನಾಥ ದೊಡ್ಡಮನಿ, ವಿನುತಾ ಬತ್ತಿ, ಚಂದ್ರಕಲಾ ಚಿಂದಿ, ಲಲಿತಾ ಸಂಕ್ರಣ್ಣನವರ ಇತರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದವರನ್ನು ಮುಂದುವರಿಸಲು ಸದ್ಯ ನಮಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಈ ಸಮಸ್ಯೆ ರಾಜ್ಯಾದ್ಯಂತ ಇದೆ. ಸರ್ಕಾರದ ಆದೇಶ ಬಂದ ಕೂಡಲೇ ಮುಂದುವರಿಕೆಗೆ ಕ್ರಮ ವಹಿಸಲಾಗುವುದು.

    | ರಮೇಶ ದೇಸಾಯಿ ಜಿಪಂ ಸಿಇಒ ಹಾವೇರಿ

    ಪ್ರತಿ ವರ್ಷದಂತೆ ಈ ಸಾಲಿನಲ್ಲಿಯೂ ಸೇವೆ ಮುಂದುವರಿಸಬಹುದು ಎಂಬ ನಿರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವು. ಆದರೆ, ಈಗ ಅಧಿಕಾರಿಗಳನ್ನು ಕೇಳಿದರೆ ಸೇವೆ ಮುಂದುವರಿಸುವ ಯಾವುದೇ ಸಾಧ್ಯತೆಗಳಿಲ್ಲ ಎನ್ನುತ್ತಾರೆ. ನಮ್ಮನ್ನೇ ಅವಲಂಬಿಸಿರುವ ಕುಟುಂಬ ಬೀದಿಗೆ ಬರಲಿದೆ. ಸರ್ಕಾರ ಯಾವುದೇ ಮುನ್ಸೂಚನೆಯಿಲ್ಲದೆ, ಸಾಮಾಜಿಕ ಬದ್ಧತೆಯಿಲ್ಲದೆ, ಉದ್ಯೋಗ ಕಸಿದುಕೊಂಡಿದೆ.

    | ಚಂದ್ರಕಲಾ ಚಿಂದಿ ಸೇವೆಯಿಂದ ಬಿಡುಗಡೆಗೊಂಡವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts