More

    ಚಿತ್ರ ವಿಮರ್ಶೆ: ಹಾಡಿನ ಹಕ್ಕಿ ಸೇಡಿನ ಹಕ್ಕಿಯಾಗುವ ಕಥೆ

    ಚಿತ್ರ; ರೆಮೋ
    ನಿರ್ಮಾಣ: ಸಿ.ಆರ್. ಮನೋಹರ್​
    ನಿರ್ದೇಶನ: ಪವನ್​ ಒಡೆಯರ್​
    ತಾರಾಗಣ: ಇಶಾನ್​, ಆಶಿಕಾ ರಂಗನಾಥ್​, ಶರತ್​ ಕುಮಾರ್​, ಮಧು, ರಾಜೇಶ್​ ನಟರಂಗ, ಅಚ್ಯುತ್​ ಕುಮಾರ್​ ಮುಂತಾದವರು

    ಚಿತ್ರರಂಗದಲ್ಲಿ ಪ್ರೇಮಕಥೆಗಳಿಗೆ ಎಂದೂ ಸಾವಿಲ್ಲ. ಇದುವರೆಗೂ ಅದೆಷ್ಟೇ ಪ್ರೇಮಕಥೆಗಳು ಬಂದಿದ್ದರೂ, ಅದನ್ನು ಇನ್ನಷ್ಟು ಅಪ್​ಡೇಟ್​ ಮಾಡಿ, ಇನ್ನಷ್ಟು ಹೊಸದಾಗಿ ಕಟ್ಟಿಕೊಡುವ ಸಾಧ್ಯತೆಗಳು ಇದ್ದೇ ಇದೆ. ಈ ವಾರ ಬಿಡುಗಡೆಯಾದ ‘ರೆಮೋ’ ಚಿತ್ರದ ಸಹ ಒಂದು ಅಪ್​ಡೇಟೆಡ್​ ಲವ್​ಸ್ಟೋರಿಯೇ.

    ಇದನ್ನೂ ಓದಿ: ಅಜನೀಶ್ ಲೋಕನಾಥ್ ಕಿಡ್ನಾಪ್​ … ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್​

    ಸಾಮಾನ್ಯವಾಗಿ ನಾಯಕಿ ಬಹಳ ದುರಹಂಕಾರಿಯಾಗಿರುತ್ತಾಳೆ. ಅವಳ ಹಠಮಾರಿತನವನ್ನು ಬಿಡಿಸುವ ಕಿಲಾಡಿ ಗಂಡು ನಾಯಕನಾಗಿರುತ್ತಾನೆ. ಆದರೆ, ಇಲ್ಲಿ ಉಲ್ಟಾ. ಇಲ್ಲಿ ನಾಯಕ ಭಯಂಕರ ಅಹಂಕಾರಿ. ಅದಕ್ಕೆ ಕಾರಣ ಅವನ ಹಿನ್ನೆಲೆ. ಆತ ದೊಡ್ಡ ಕುಟುಂಬದ ಹುಡುಗ. ವಿಪರೀತ ಶ್ರೀಮಂತ. ಬಾಲ್ಯದಲ್ಲೇ ತಾಯಿ ಇನ್ನಿಲ್ಲವಾಗಿರುತ್ತಾಳೆ. ತಂದೆ ಇನ್ನೊಂದು ಮದುವೆಯಾದ ಎಂಬ ಸಿಟ್ಟು ಮಗನಿಗೆ. ಹೀಗೆ ತಂದೆಯಿಂದ ದೂರಾಗುವುದರ ಜತೆಗೆ ದಾರಿ ತಪ್ಪಿರುವ ಈ ಮಗನಿಗೆ ಒಬ್ಬ ಕೋಗಿಲೆ ಕಂಠದ ಬೆಡಗಿಯ ಪರಿಚಯವಾಗುತ್ತದೆ. ಆ ದುರಹಂಕಾರಿ ಅವಳ ಒಳ್ಳೆಯತನಕ್ಕೆ ಕರಗುತ್ತಾನೆ. ಅವಳೂ ಅವನಿಗೆ ಹತ್ತಿರವಾಗುತ್ತಾಳೆ. ಇಬ್ಬರೂ ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಇಬ್ಬರ ಮಧ್ಯೆ ದೊಡ್ಡ ಕಂದಕ ಏರ್ಪಡುತ್ತದೆ. ಅದೇನು ಮತ್ತು ಅದನ್ನು ದಾಟಿ ಅವರಿಬ್ಬರೂ ಒಂದಾಗುತ್ತಾರಾ ಎಂಬುದೇ ಚಿತ್ರದ ಕಥೆ.

    ಈ ತರಹದ ಕಥೆ ಹೊಸದೇನಲ್ಲ, ಆದರೆ, ಚಿತ್ರ ನೋಡುವಂತೆ ಮಾಡುವುದಕ್ಕೆ ಚಿತ್ರಕಥೆಯಲ್ಲಿ ಪವನ್​ ಒಡೆಯರ್​ ಸಾಕಷ್ಟು ಆಟ ಆಡಿದ್ದಾರೆ. ಪ್ರಮುಖವಾಗಿ ಚಿತ್ರವನ್ನು ಅದ್ಧೂರಿಯಾಗಿ ಹಿಡಿದಿಟ್ಟಿದ್ದಾರೆ. ಇಡೀ ಚಿತ್ರವನ್ನು ಸ್ಟೈಲಿಶ್​ ಆಗಿ ತೋರಿಸಿದ್ದಾರೆ. ಹಲವು ತಿರುವುಗಳನ್ನು ತಂದು ನೋಡಿಸಿಕೊಂಡು ಹೋಗುವಂತೆ ಮಾಡಿದ್ದಾರೆ. ಮೊದಲಾರ್ಧ ಪ್ರೀತಿಯ ಕಥೆಯಾದರೆ, ದ್ವಿತೀಯಾರ್ಧ ಫ್ಯಾಮಿಲಿ ಕಥೆಯಾಗಿಸಿದ್ದಾರೆ. ಯುವಕರಿಗೆ ಆಕ್ಷನ್​-ರೊಮ್ಯಾನ್ಸ್​, ಹಿರಿಯರಿಗೆ ಸೆಂಟಿಮೆಂಟ್​ ಎಲ್ಲವೂ ಇದೆ. ಅಷ್ಟಾದರೂ, ಚಿತ್ರದ ದ್ವಿತೀಯಾರ್ಧ ಸ್ವಲ್ಪ ನಿಧಾನವೇ. ಚಿತ್ರಕ್ಕೊಂದಿಷ್ಟು ಕತ್ತರಿ ಆಡಿಸಿ, 20 ನಿಮಿಷದಷ್ಟು ಕಡಿಮೆ ಮಾಡಿದ್ದರೆ, ಚಿತ್ರ ಇನ್ನಷ್ಟು ರುಚಿಸುತ್ತಿತ್ತೋ ಏನೋ?

    ಇದನ್ನೂ ಓದಿ: ನನಗೂ ವೈಷ್ಣವಿ ಗೌಡಗೂ ಎಂಗೇಜ್ಮೆಂಟ್ ಆಗಿಲ್ಲ, ಅದೊಂದು ಬೊಟ್ಟು ಇಡುವ ಶಾಸ್ತ್ರ: ವಿದ್ಯಾಭರಣ್

    ನಾಯಕ ಇಶಾನ್​ ಇಲ್ಲಿ ಸರ್​ಪ್ರೈಸ್​ ಎಂದರೆ ತಪ್ಪಿಲ್ಲ. ಸ್ಟೈಲಿಶ್​ ಹುಡುಗನಾಗಿ ಕಾಣಿಸಿಕೊಂಡಿರುವ ಇಶಾನ್​ಗೆ ಪ್ರತಿಭೆ ತೋರಿಸುವ ಅವಕಾಶ ಸಿಕ್ಕಿದೆ. ಹಾಡು, ಡ್ಯಾನ್ಸು, ಫೈಟ್​ನಲ್ಲಿ ಮಿಂಚಿರುವ ಇಶಾನ್​ ನಟನೆಯ ಬಗ್ಗೆ ಇನ್ನೊಂಚೂರು ಗಮನಹರಿಸಿದರೆ, ಭವಿಷ್ಯದ ನಟರಾಗುತ್ತಾರೆ. ನಾಯಕಿ ಆಶಿಕಾಗೆ ಇಲ್ಲಿ ಎರಡು ಶೇಡ್​ ಇರುವ ಪಾತ್ರ ಸಿಕ್ಕಿದೆ. ಎರಡರಲ್ಲೂ ಆಶಿಕಾ ಮಿಂಚಿದ್ದಾರೆ. ಶರತ್​ ಕುಮಾರ್​, ರಾಜೇಶ್​ ನಟರಂಗ, ಅಚ್ಯುತ್​ ಕುಮಾರ್​ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಕನ್ನಡದಲ್ಲಿ ಅಷ್ಟೊಂದು ಪ್ರತಿಭಾವಂತ ನಟಿಯರಿರುವಾಗ ಅವರನ್ನೆಲ್ಲ ಬಿಟ್ಟು ಮಧುಬಾಲ ಯಾಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಅರ್ಜುನ್​ ಜನ್ಯ ಸಂಗೀತ, ವೈದಿ ಛಾಯಾಗ್ರಹಣ ಖುಷಿ ಕೊಡುತ್ತದೆ.

    – ಚೇತನ್​ ನಾಡಿಗೇರ್​

    ರಶ್ಮಿಕಾ ಚಿತ್ರಗಳಿಗೆ ಕರ್ನಾಟಕದಲ್ಲಿ ಬ್ಯಾನ್​? ಸೋಷಿಯಲ್​ ಮೀಡಿಯಾದಲ್ಲಿ ಹೀಗೊಂದು ಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts