More

    ರಟ್ಟಿಹಳ್ಳಿ ತಾಲೂಕಿನಲ್ಲಿ ಹೆಚ್ಚುತ್ತಿದೆ ಜಾನುವಾರು ಕಳ್ಳತನ

    ರಟ್ಟಿಹಳ್ಳಿ: ಅತಿವೃಷ್ಟಿ, ಅನಾವೃಷ್ಟಿಯಿಂದ ಈಗಾಗಲೇ ಬೆಳೆ ಹಾನಿಯಾಗಿ ಕಂಗಾಲಾಗಿರುವ ರೈತರನ್ನು ಕೊಟ್ಟಿಗೆಗಳಲ್ಲಿನ ಎತ್ತು, ಆಕಳು, ಎಮ್ಮೆಗಳ ಕಳವಾಗುವುತ್ತಿರುವುದು ಮತ್ತಷ್ಟು ಕಂಗೆಡಿಸಿದೆ.
    ಈ ಮೊದಲು ತಾಲೂಕಿನಲ್ಲಿ ಸರಣಿ ಮನೆಗಳವು, ದೇವಸ್ಥಾನ ಹುಂಡಿ, ವಾಹನಗಳ ಕಳವು ಪ್ರಕರಣಗಳ ಹೆಚ್ಚಾಗಿದ್ದವು. ಪೊಲೀಸ್ ಇಲಾಖೆ ತಂಡ ಕೆಲವು ಪ್ರಕರಣ ಯಶಸ್ವಿಯಾಗಿ ಭೇದಿಸಿತು. ಇದಾದ ನಂತರ ಕ್ರಮೇಣ ಈ ಕಳವು ಪ್ರಕರಣ ವಿರಳವಾಗಿದ್ದವು. ಆದರೆ, ಸದ್ಯ ಜಾನುವಾರುಗಳ ಕಳವು ಪ್ರಕರಣ ಹೆಚ್ಚಾಗುತ್ತಿವೆ.
    ಕವಳಿಕುಪ್ಪಿ ಗ್ರಾಮದ ಮಲ್ಲಯ್ಯ ಹುಲಗಿನಕಟ್ಟಿ ಅವರಿಗೆ ಸೇರಿದ ಒಂದು ಎತ್ತು, ಒಂದು ಆಕಳು, ಕಡೂರ ಗ್ರಾಮದ ಸಿದ್ದನಗೌಡ ಸೌಹಕಾರ ಅವರ 2 ಎತ್ತು, ಹಿರೇಯಡಚಿ ಗ್ರಾಮದಲ್ಲಿ ಗಜೇಂದ್ರ ಸ್ಥಾನಿಕರ 2 ಎತ್ತು, ಶಿರಗಂಬಿ ಗ್ರಾಮದಲ್ಲಿ ಹುಚ್ಚಪ್ಪ ಮಡಿವಾಳರ ಅವರ 2 ಎತ್ತು, ಎಮ್ಮೆ, ಹಿರೇಮೊರಬ ಗ್ರಾಮದ ಮಂಜಕ್ಕ ಮುದಿಗೌಡ್ರ 2 ಆಕಳು, ಬುಳ್ಳಾಪುರ ಗ್ರಾಮದಲ್ಲಿ ನಾಗಪ್ಪ ಭೀಮಪ್ಪ ನಂದೀಹಳ್ಳಿ 2 ಎತ್ತು ಕಳವು ಆಗಿವೆ. ಕೆಲ ಪ್ರಕರಣಗಳು ಕಳೆದ 2 ತಿಂಗಳಲ್ಲಿ ನಡೆದರೆ, ಇನ್ನು ಕೆಲವು ಐದಾರು ತಿಂಗಳ ಹಿಂದೆ ನಡೆದಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತು, ಆಕಳು, ಎಮ್ಮೆಗಳು ಕಳವು ಹಾವಳಿ ಅಧಿಕವಾಗುತ್ತಿವೆ.
    ಹೊರವಲಯದ ಜಮೀನುಗಳು, ತೋಟದ ಮನೆ ಬಳಿ ಇರುವ ದನದ ಕೊಟ್ಟಿಗೆಗಳಲ್ಲಿನ ಜಾನುವಾರುಗಳೇ ಕಳ್ಳರ ಗುರಿಯಾಗಿವೆ. ಹೊಲದಲ್ಲಿನ ಕೊಟ್ಟಿಗೆಯಲ್ಲಿ ಕಟ್ಟಿ ಬರುವ ಜಾನುವಾರುಗಳು ಕಳವಾಗುತ್ತಿವೆ. ರಾತ್ರಿ ವೇಳೆ ತೋಟದಿಂದ ಸ್ವಲ್ಪ ದೂರದಲ್ಲಿ ತಮ್ಮ ವಾಹನ ನಿಲ್ಲಿಸಿ ಬರುವ ಕಳ್ಳರು, ತೋಟದ ಮನೆ, ದನದ ಕೊಟ್ಟಿಗೆ ಬಳಿ ಇರುವ ವಾಹನಗಳ ಪ್ಲಗ್ ಕಿತ್ತು, ಅವುಗಳ ಟೈರ್‌ನಲ್ಲಿನ ಗಾಳಿ ತೆಗೆದು ಕೆಲ ಮುನ್ನೆಚ್ಚರಿಕೆ ವಹಿಸುತ್ತಾರೆ. ನಂತರ ಕೊಟ್ಟಿಗೆಯ ಬೀಗ ಮುರಿದು ಜಾನುವಾರುಗಳನ್ನು ತಮ್ಮ ವಾಹನದಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ. ಕಳವಾದ ಜಾನುವಾರುಗಳು ಕಸಾಯಿಖಾನೆಗೆ ಸೇರುತ್ತಿವೆಯೋ, ಬೇರಡೆ ಸಂತೆಗಳಲ್ಲಿ ಮಾರಾಟವಾಗುತ್ತಿವೆ ಎಂಬುವುದು ತಿಳಿಯದಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿ, ಕಳ್ಳರನ್ನು ಪತ್ತೆ ಹಚ್ಚಬೇಕಿದೆ.

    ಪ್ರತಿದಿನ ನಮ್ಮ ಮನೆಯಿಂದ ಸ್ವಲ್ಪ ದೂರವಿರುವ ಜಮೀನಿನ ದನದ ಕೊಟ್ಟಿಗೆ ಬಳಿ ಮಲಗುತ್ತಿದ್ದೆವು. ಕೆಲ ದಿನದ ಹಿಂದೆ ದನದ ಕೊಟ್ಟಿಗೆ ಬಳಿ ಹಾವುಗಳು ಹೆಚ್ಚಾಗಿ ಕಂಡುಬಂದಿದ್ದರಿಂದ ಮನೆಗೆ ಹೋಗಿ ಮಲಗುತ್ತಿದ್ದೆವು. ಇದಾದ ಒಂದು ವಾರದಲ್ಲಿ (ನ. 14ರಂದು) ನಮ್ಮ ದನದ ಕೊಟ್ಟಿಗೆಯಲ್ಲಿದ್ದ ಎತ್ತು ಮತ್ತು ಆಕಳು ಕಳವಾದವು. ಸುಮಾರು 70-80 ಸಾವಿರ ರೂಪಾಯಿ ಮೌಲ್ಯದ ಆಕಳು, ಎತ್ತು ಕಳವಾದ ಬಗ್ಗೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ.
    ಮಲ್ಲಯ್ಯ ಹುಲಗಿನಕಟ್ಟಿ ಕವಳಿಕುಪ್ಪಿ ರೈತ

    ತಾಲೂಕಿನಲ್ಲಿ ಕಳೆದ ವರ್ಷದಿಂದ ಅನೇಕ ಎತ್ತು, ಆಕಳು, ಎಮ್ಮೆಗಳ ಕಳವು ಪ್ರಕರಣ ನಡೆಯುತ್ತಲೇ ಇವೆ. ಇತ್ತೀಚೆಗೆ ಎರಡ್ಮೂರು ತಿಂಗಳಲ್ಲಿ ಹೆಚ್ಚು ಪ್ರಕರಣ ಜರುಗಿವೆ. ಆದರೆ ಇಲ್ಲಿಯವರೆಗೆ ಪೊಲೀಸ್ ಇಲಾಖೆ ಯಾವುದೇ ಪ್ರಕರಣ ಭೇದಿಸಿ, ಕಳ್ಳರ ಪತ್ತೆ ಹಚ್ಚಿಲ್ಲ. ಪೊಲೀಸ್ ಅಧಿಕಾರಿಗಳು ಈ ಕಳ್ಳರ ಜಾಲ ಶೀಘ್ರವೇ ಪತ್ತೆ ಹಚ್ಚಬೇಕು. ಭೇದಿಸಬೇಕು.
    ಶಂಕ್ರಗೌಡ ಶಿರಗಂಬಿ ರೈತ ಸಂಘದ ತಾಲೂಕು ಅಧ್ಯಕ್ಷ ರಟ್ಟಿಹಳ್ಳಿ

    ರಟ್ಟಿಹಳ್ಳಿ ತಾಲೂಕಿನಲ್ಲಿ ಈಗಾಗಲೇ 2-3 ಜಾನುವಾರು ಕಳವು ಪ್ರಕರಣ ಜರುಗಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಶೀಘ್ರವೇ ಈ ಪ್ರಕರಣ ಭೇದಿಸಲಾಗುವುದು. ಸಾಧ್ಯವಾದಷ್ಟು ಜಮೀನುಗಳ ದನದ ಕೊಟ್ಟಿಗೆಯಲ್ಲಿ ಇರುವ ಜಾನುವಾರುಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಮಾಲೀಕರು ಅಲ್ಲಿ ಒಬ್ಬರನ್ನು ಮಲಗಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಕಳವು ಪ್ರಕಣರ ಸಾಧ್ಯವಾದಷ್ಟು ನಿಲ್ಲುತ್ತವೆ.
    ಜಗದೀಶ ಜಿ. ಪಿಎಸ್‌ಐ ರಟ್ಟಿಹಳ್ಳಿ ಪೊಲೀಸ್ ಠಾಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts