More

    ವೈಚಾರಿಕ ಬದ್ಧತೆ ಬಿಜೆಪಿ ಅಜೆಂಡಾ

    ಹುಬ್ಬಳ್ಳಿ: ರಾಜಕೀಯ ಎಂಬುದು ಅಧಿಕಾರ ಮತ್ತು ಹಣ ಗಳಿಸಲು ಇರುವ ಸಾಧನ ಎಂದು ಬಹುತೇಕ ರಾಜಕಾರಣಿಗಳು ಭಾವಿಸಿದ್ದಾರೆ. ಅಂಥವರ ಮಧ್ಯದಲ್ಲಿ ವೈಚಾರಿಕ ಬದ್ಧತೆ, ವೈಯಕ್ತಿಕ ಚಾರಿತ್ರ್ಯ ಅಜೆಂಡಾದೊಂದಿಗೆ ರಾಜಕೀಯ ಮಾಡಬಹುದು ಎಂಬುದನ್ನು ಬಿಜೆಪಿ ಮೊದಲಿನಿಂದಲೂ ತೋರಿಸಿಕೊಟ್ಟಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಭಾರತೀಯ ಜನತಾ ಪಾರ್ಟಿಯ ಪ್ರಶಿಕ್ಷಣ ಪ್ರಕೋಷ್ಠ ವತಿಯಿಂದ ಇಲ್ಲಿನ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಧಾರವಾಡ ಹಾಗೂ ಬೆಳಗಾವಿ ವಿಭಾಗಗಳ ‘ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಕಾಶ್ಮೀರದಲ್ಲಿ 370ನೇ ವಿಧಿ ಕೈಬಿಡಲು ಈ ಹಿಂದೆ ಬಿಜೆಪಿ ಹೋರಾಟ ಮಾಡಿತ್ತು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಅದನ್ನು ಸಾಧಿಸಿದರು. ತ್ರಿವಳಿ ತಲಾಖ್ ರದ್ದು ಮಾಡಲಾಯಿತು. ದೇಶದಲ್ಲಿ ಭಯೋತ್ಪಾದಕರ ಆಟ ನಡೆಯಲು ಬಿಟ್ಟಿಲ್ಲ. ದೇಶ ಕಟ್ಟುವ ಬದ್ಧತೆ ಇದ್ದರೆ ಯಾವ ರೀತಿ ಕೆಲಸ ಮಾಡಬಹುದು ಎಂಬುದನ್ನು ಕೇಂದ್ರ ಸರ್ಕಾರ ತೋರಿಸಿಕೊಟ್ಟಿದೆ ಎಂದರು.

    ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಆರ್​ಎಸ್​ಎಸ್ ಮಾರ್ಗದರ್ಶನದಲ್ಲಿ ಬಿಜೆಪಿ ರಚನಾತ್ಮಕ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸಾಮೂಹಿಕ ನಾಯಕತ್ವದಡಿ ಬೆಳೆದು ಬಂದಿದೆ. ಸಂಘಟನೆ ಮತ್ತು ಕಾರ್ಯಕರ್ತರ ಮೇಲೆ ಅವಲಂಬಿತವಾಗಿದೆ. ಇತರ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಕುಟುಂಬ ಮತ್ತು ವೈಯಕ್ತಿಕ ಹಿಡಿತದಲ್ಲಿವೆ ಎಂದರು.

    ಪ್ರಶಿಕ್ಷಣ ಪ್ರಕೋಷ್ಠದ ರಾಜ್ಯ ಸಂಚಾಲಕ ಶ್ರೀಕಾಂತ ಕುಲಕರ್ಣಿ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪಕ್ಷದ ವಕ್ತಾರ ಗಣೇಶ ಕಾರ್ಣಿಕ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ, ಶಾಸಕರಾದ ಯು.ಬಿ. ಬಣಕಾರ, ಅಭಯ ಪಾಟೀಲ, ಅನಿಲ ಬೆಣಕೆ, ಮಾಜಿ ಶಾಸಕಿ ಸೀಮಾ ಮಸೂತಿ, ಬೆಳಗಾವಿ ಹಾಗೂ ಧಾರವಾಡ ವಿಭಾಗದ 9 ಜಿಲ್ಲೆಗಳ 100ಕ್ಕೂ ಹೆಚ್ಚು ಪ್ರಮುಖ ಪದಾಧಿಕಾರಿಗಳು, ಆಯ್ದ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ ವಂದೇ ಮಾತರಂ ಗೀತೆ ಹಾಡಿದರು. ಧಾರವಾಡ ವಿಭಾಗೀಯ ಪ್ರಭಾರಿ ಲಿಂಗರಾಜ ಪಾಟೀಲ ಸ್ವಾಗತಿಸಿದರು. ಸಹ ಪ್ರಭಾರಿ ನಾರಾಯಣ ಜರತಾರಘರ ನಿರೂಪಿಸಿದರು. ಹು-ಧಾ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ ವಂದಿಸಿದರು.

    ಕಾಂಗ್ರೆಸ್​ಗೆ ಸೋಲಿನ ಭೀತಿ ಶುರುವಾಗಿದೆ

    ಹುಬ್ಬಳ್ಳಿ: ಆರ್​ಆರ್ ನಗರ ಮತ್ತು ಶಿರಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸೋಲಿನ ಭೀತಿ ಶುರುವಾಗಿದೆ. ಹಾಗಾಗಿ, ಡಿ.ಕೆ. ಶಿವಕುಮಾರ್, ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಪ್ರಚಾರಕ್ಕೆ ಜೋಡೆತ್ತು ಬರಲಿ, ಯಾರೇ ಬರಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲ್ಲುವುದು ನಿಶ್ಚಿತ. ಎರಡೂ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಪ್ರಚಾರ ಮಾಡುತ್ತಿದ್ದಾರೆ. ಎರಡೂ ಕಡೆ ಈಗಾಗಲೇ ಗೆದ್ದಂತಾಗಿದೆ. ಎಷ್ಟು ಮತಗಳ ಅಂತರ ಎಂಬುದಷ್ಟೇ ಬಾಕಿ ಇದೆ ಎಂದರು.

    ಆರ್​ಆರ್ ನಗರದಲ್ಲಿ ಕಾಂಗ್ರೆಸ್​ನ ಎಲ್ಲರೂ ಬಿಜೆಪಿಗೆ ಸೇರಿದ್ದಾರೆ. ಹಾಗಾಗಿ, ಅವರು ಹೊರಗಿನಿಂದ ಜನರನ್ನು ಕರೆದುಕೊಂಡು ಚುನಾವಣೆ ಮಾಡುತ್ತಿದ್ದಾರೆ. ಸೋಲು ಖಚಿತ ಎಂಬುದು ಅವರಿಗೆ ಗೊತ್ತಾಗಿದೆ. ಸೋಲಿಗೆ ಕಾರಣಗಳನ್ನು ಈಗಲೇ ಹುಡುಕುತ್ತಿದ್ದಾರೆ. ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಎಂದು ಡಿಕೆಶಿ ಹೇಳುತ್ತಾರೆ. ಅವರ ಬಳಿ ಹಣ ಇಲ್ಲವೇ, ನಯಾಪೈಸೆ ಖರ್ಚು ಮಾಡದೇ ಚುನಾವಣೆ ಮಾಡುತ್ತಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts