More

    ಅಂತೂ ಊರಲ್ಲಿ ವಾಸಿಸಲು ಇಚ್ಛಿಸಿದ ಗುಹೆ ವಾಸಿ ಅನಂತು

    ಕಳಸ: ಗುಹೆಯಲ್ಲಿ ವಾಸಿಸುತ್ತಿದ್ದ ಕಳಸ ಸಮೀಪದ ಬಲಿಗೆ ಕಲ್ಮಕ್ಕಿಯ ಅನಂತು ಕುಟುಂಬವನ್ನು ನಾಡಿಗೆ ಕರೆದುಕೊಂಡು ಬಂದಿದ್ದ ಅಧಿಕಾರಿಗಳು ಆತನಿಗೆ ಕುಂಬಳಡಿಕೆಯಲ್ಲಿ ಮನೆ ನಿರ್ವಿುಸಿಕೊಳ್ಳಲು ಹಕ್ಕುಪತ್ರ ನೀಡಿದ್ದಾರೆ. ಸರ್ಕಾರದಿಂದಲೇ ಮನೆ ನಿರ್ವಿುಸಿಕೊಡಲು ಸಿದ್ಧತೆ ನಡೆಯುತ್ತಿದೆ.

    ಗುಹೆಯಲ್ಲಿ ವಾಸವಿರುವ ಕುರಿತು ಏಪ್ರಿಲ್​ನಲ್ಲಿ ಸುದ್ದಿಯಾಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅನಂತು ಕುಟುಂಬವನ್ನು ಕಾಡಿನಿಂದ ಕರೆತಂದು ಬಲಿಗೆಯ ಶಾಲೆಯಲ್ಲಿ ವಸತಿ ಕಲ್ಪಿಸಿ ಅಧಿಕಾರಿಗಳೇ ಅಡುಗೆ ತಯಾರಿಸಿ ಆತನ ಕುಟುಂಬದವರ ಜತೆ ಆಹಾರ ಸೇವಿಸಿ ಮಾದರಿಯಾಗಿದ್ದರು. ನಂತರ ಹೊರನಾಡು ಗಿರಿಜನ ಆಶ್ರಮ ಶಾಲೆಯಲ್ಲಿ ಆತನ ಕುಟುಂಬಕ್ಕೆ ವಸತಿ ಕಲ್ಪಿಸಿ ಬಟ್ಟೆ, ಗೃಹಬಳಕೆ ಸಾಮಗ್ರಿ, ದಿನಸಿ ತಂದುಕೊಟ್ಟಿದ್ದರು.

    ಆದರೂ ಆತನ ಮನಸ್ಸು ಕಾಡಿನತ್ತಲೇ ಇತ್ತು. ಪ್ರತಿದಿನ ಹೊರನಾಡು ಪಿಡಿಒ ಅರುಣ್, ಮಾವಿನಕೆರೆ ಗ್ರಾಮ ಸಹಾಯಕ ಪ್ರಸನ್ನ ಸ್ಥಳಕ್ಕೆ ತೆರಳಿ ಆತನ ಆರೋಗ್ಯ ವಿಚಾರಿಸಿ ಊರಲ್ಲೇ ನೆಲೆಸುವಂತೆ ಆತನ ಮನವೊಲಿಸುತ್ತಿದ್ದರು. ಅಲ್ಲದೆ ಆತನಿಗೆ ತಾತ್ಕಾಲಿಕ ಉದ್ಯೋಗ ಕೂಡ ನೀಡಲಾಗಿದ್ದು, ಉಚಿತವಾಗಿ ಊಟ ನೀಡಲಾಗುತ್ತಿದೆ. ಇದರಿಂದ ಅನಂತು ಊರಿನಲ್ಲಿ ವಾಸಿಸಲು ಮನಸ್ಸು ಮಾಡಿ ಸರ್ಕಾರ ಕೊಡುವ ಮನೆಯಲ್ಲಿ ಉಳಿದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾನೆ.

    ಅನಂತು ಕುಟುಂಬದ್ದು ವಿಶೇಷ ಪ್ರಕರಣವೆಂದು ಪರಿಗಣಿಸಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರ ನಿರಾಶ್ರಿತರಿಗೆಂದು ಮೀಸಲಿಟ್ಟ ಕಳಸದ ಕುಂಬಳಡಿಕೆ ಸರ್ವೆ ನಂ153ರಲ್ಲಿ ನಿವೇಶನ ಗೊತ್ತುಪಡಿಸಿ ಹಕ್ಕುಪತ್ರ ನೀಡಲಾಗಿದೆ. ಕೂಡಲೇ ಮನೆ ನಿರ್ವಿುಸಿಕೊಡಲೂ ಕ್ರಮ ತೆಗೆದುಕೊಳ್ಳಲಾಗಿದೆ. ಅವರ ಕುಟುಂಬಕ್ಕೆ ಪಡಿತರ ಚೀಟಿ, ಆಧಾರ್ ಕಾರ್ಡ್, ಗುರುತಿನ ಚೀಟಿಯನ್ನು ಮೂರು ದಿನದೊಳಗಾಗಿ ನೀಡಬೇಕು ಎಂದು ಮೂಡಿಗೆರೆ ತಹಸೀಲ್ದಾರ್​ಗೆ ಮೇಲಾಧಿಕಾರಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts