More

    ಮೈಸೂರಿನ ಅವಧೂತ ದತ್ತಪೀಠದಲ್ಲಿ ರಾಮನ ರಥೋತ್ಸವ

    ಮೈಸೂರು: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀರಾಮನ ರಥೋತ್ಸವ, ಪಟ್ಟಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆರವೇರಿದವು.
    ಆಶ್ರಮದ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದ ಆವರಣದಿಂದ ರಥೋತ್ಸವ ಆರಂಭಗೊಂಡಿತು. ಶ್ರೀರಾಮ, ಸೀತೆ, ಲಕ್ಷ್ಮಣರ ಮೂರ್ತಿಗಳನ್ನು ಹೊತ್ತ ವೀರಹನುಮಾನ್ ಮೂರ್ತಿಯೊಂದಿಗೆ ಮೆರವಣಿಗೆ ಸಾಗಿತು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿ, ಜತೆಯಲ್ಲಿ ಸಾಗಿ ಆಶ್ರಮದ ನಾದಮಂಟಪ ತಲುಪಿದರು.
    ವೇದಘೋಷದೊಂದಿಗೆ ಪೂರ್ಣಕುಂಭ ಕಳಸ ಹೊತ್ತ ಮಹಿಳೆಯರು ಸಾಗಿದರು. ನಾದಸ್ವರ, ನಂದಿಧ್ವಜ, ಪೂಜಾ ಕುಣಿತ, ಡೊಳ್ಳು, ಕುಣಿತ, ಗಾರುಡಿ ಬೊಂಬೆ, ಬೀಸು ಕಂಸಾಳೆ, ಕೀಲುಬೊಂಬೆ, ತಮಟೆ, ರಾಮಾಯಣದಲ್ಲಿ ಬರುವ ಪಾತ್ರಗಳ ವೇಷಧಾರಿಗಳು ಮೆರವಣಿಗೆಯಲ್ಲಿ ಇದ್ದರು.
    ಇದೇ ವೇಳೆ ಯಾಗಶಾಲೆಯಲ್ಲಿ ಶ್ರೀರಾಮತಾರಕ ಮಹಾಯಾಗ ನೆರವೇರಿಸಲಾಯಿತು. ಬಳಿಕ ಶ್ರೀರಾಮದೇವರ ಮಹಾಸಾಮ್ರಾಜ್ಯ ಪಟ್ಟಾಭಿಷೇಕ ಹಾಗೂ ಶತಶ್ಲೋಕ ರಾಮಾಯಣ ಸಹ ಪಾರಾಯಣ ಮಾಡಲಾಯಿತು.
    ನೆರೆದಿದ್ದವರಿಗೆ ಆಶೀರ್ವಚನ ನೀಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ರಾಮಲಲ್ಲಾ ಪಟ್ಟಾಭಿಷೇಕದ ಪ್ರಯುಕ್ತ ದತ್ತಪೀಠದಲ್ಲೂ ರಾಮೋತ್ಸವ ಹಮ್ಮಿಕೊಂಡಿದ್ದೇವೆ. ಜತೆಗೆ, ರಾಮ ಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿದ್ದೇವೆ. ಹಿಂದೆ ಅಯೋಧ್ಯೆಗೆ ಹೋಗಿದ್ದಾಗ ಶತಶ್ಲೋಕಿ ರಾಮಾಯಣ ಪಾರಾಯಣ ಮಾಡಲಾಗಿತ್ತು. ಆಗಲೇ ಅಯೋಧ್ಯೆಯಲ್ಲಿ ಇನ್ನು 12 ವರ್ಷದೊಳಗೆ ಇಲ್ಲಿ ರಾಮನ ಆಲಯ ನೆರವೇರುತ್ತದೆ ಎಂದು ಸಂಕಲ್ಪ ಮಾಡಿದ್ದೆ. ಅದು ಇಂದು ನೆರವೇರಿದೆ. ಇದು ನನಗೆ ಅತ್ಯಂತ ಸಂತಸ ತಂದಿದೆ ಎಂದು ತಿಳಿಸಿದರು.
    ನಮ್ಮ ಕರ್ನಾಟಕಕ್ಕೂ ರಾಮನಿಗೂ ಸಂಬಂಧವಿದ್ದು, ಇಲ್ಲಿಗೆ ಬಂದುಹೋದ ಅನೇಕ ಕ್ಷೇತ್ರಗಳು ಇಲ್ಲಿವೆ. ಸೀತೆಯನ್ನು ಹುಡುಕಿಕೊಂಡು ಬಂದಿದ್ದರು. ಜತೆಗೆ, ಆಂಜನೇಯಸ್ವಾಮಿ ಹಂಪೆಯ ಪಂಪಾ ನದಿ ತೀರದಲ್ಲಿ ಜನಿಸಿದ್ದರು ಎಂದು ಹೇಳಲಾಗುತ್ತದೆ. ಹಾಗಾಗಿ ಇದು ಹನುಮನಾಡು ಕೂಡ. ಆದರೆ ಕೆಲವರು ತಿರುಪತಿಯಲ್ಲಿ ಆಂಜನೇಯಸ್ವಾಮಿ ಜನನ ಎಂದು ಹೇಳುತ್ತಾರೆ. ಆರು ಕಡೆ ಹನುಮ ಜಯಂತಿ ಮಾಡಲಾಗುತ್ತದೆ ಮಾಡಲಿ. ಇದರಲ್ಲಿ ತಪ್ಪೇನಿಲ್ಲ ಒಳ್ಳೆಯದೇ. ದೇವರು ಎಲ್ಲ ಕಡೆ ಇರುತ್ತಾರೆ ಎಂದು ನುಡಿದರು.
    ಕೆಲವರು ರಾಮಸ್ಮರಣೆ ಮಾಡದೆ, ರಾಮದರ್ಶನ ಮಾಡದೆ ದೂರ ಇದ್ದಾರೆ. ಆದರೆ ಇಂತಹ ಶುಭ ದಿನದಲ್ಲಿ ರಾಮದರ್ಶನ ಮಾಡದೆ ಇರಬಾರದು. ಭರತ ಭೂಮಿಯಲ್ಲಿ ಜನಿಸಿದ ನಾವೆಲ್ಲ ರಾಮನ ಅನುಯಾಯಿಗಳು. ಎಲ್ಲರಿಗೂ ರಾಮನ ಕೃಪೆಯಾಗಲಿ. ಅಯೋಧ್ಯೆಗೆ ಬರುವಂತೆ ಆಹ್ವಾನವಿದ್ದರೂ ಹೋಗಲು ಆಗಲಿಲ್ಲ. ಮುಂದಿನ ದಿನಗಳಲ್ಲಿ ಅಲ್ಲಿಗೆ ಭೇಟಿ ನೀಡುವುದಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts