

ಬ್ರಾಸಿಲಿಯ: ಮಕ್ಕಳ ತುಂಟಾಟಕ್ಕೆ ರೋಸುಹೋಗಿ ಒಮ್ಮೊಮ್ಮೆ ಹಿರಿಯರು 'ಇವನು ಥೇಟ್ ಮಂಗನಂತೆ, ಬಾಲ ಒಂದಿಲ್ಲ' ಎನ್ನುವುದುಂಟು. ಆ ಮಾತಿಗೆ ವಿಪರೀತವಾಗಿ ಇಲ್ಲೊಂದು ಹುಟ್ಟಿದ ಮಗುವಿಗೆ ಪ್ರಾಣಿಗಳಿಗಿರುವಂತೆಯೇ 12 ಸೆಂಟಿಮೀಟರ್ ಉದ್ದದ ಬಾಲ ಬೆಳೆದಿದ್ದ ಪ್ರಸಂಗ ವರದಿಯಾಗಿದೆ.
ಜರ್ನಲ್ ಆಫ್ ಪೀಡಿಯಾರ್ಟಿಕ್ ಸರ್ಜರಿ ಕೇಸ್ ರಿಪೋರ್ಟ್ಸ್ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಬ್ರೆಜಿಲ್ನ ಫೋರ್ಟಲೇಜಾ ನಗರದ ಅಲ್ಪರ್ಟ್ ಸಬಿನ್ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವಿಗೆ ನಿಜವಾದ ಮನುಷ್ಯ ಬಾಲ ಬೆಳೆದಿತ್ತು ಎನ್ನಲಾಗಿದೆ. ಆ ಮಗುವಿನ ಚಿತ್ರಗಳನ್ನು ಪ್ರಕಟಿಸಿರುವ ಜರ್ನಲ್ನಲ್ಲಿ, ವೈದ್ಯರು ಆ ಬಾಲವನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದೂ ಹೇಳಲಾಗಿದೆ.
ಮಾನವ ಶಿಶುಗಳಲ್ಲಿ ಗರ್ಭದಲ್ಲಿರುವಾಗ ನಾಲ್ಕರಿಂದ ಎಂಟನೇ ವಾರದ ಜೆಸ್ಟೇಷನ್ ಸಮಯದಲ್ಲಿ ಒಂದು ಎಂಬ್ರಿಯಾನಿಕ್ ಬಾಲ ಬೆಳೆಯುವುದು ಸಹಜ. ಆದರೆ ಅದು ಕ್ರಮೇಣ ದೇಹದೊಳಕ್ಕೇ ಸೇರಿಕೊಂಡು ಟೇಲ್ಬೋನ್ಗೆ ದಾರಿಮಾಡುತ್ತದೆ. ಆದರೆ, ಬ್ರೆಜಿಲ್ನ ಈ ಮಗುವಿನ ವಿಷಯದಲ್ಲಿ ಆ ಬಾಲ ಬೆಳೆಯುವುದು ಮುಂದುವರೆದಿತ್ತು. ಅಷ್ಟೇ ಅಲ್ಲ, ಹುಟ್ಟುವವರೆಗೂ ಅದು ಯಾವುದೇ ಸ್ಕಾನ್ ರಿಪೋರ್ಟ್ಗಳಲ್ಲಿ ಕಾಣಿಸಿಕೊಂಡೂ ಇರಲಿಲ್ಲ.
ಸಣ್ಣಗೆ 12 ಸೆಂಟಿಮೀಟರ್ ಉದ್ದವಿದ್ದ ಈ ಬಾಲದ ಕೊನೆಯಲ್ಲಿ ಒಂದು 4 ಸೆಂಟಿಮೀಟರ್ ಡಯಾಮೀಟರ್ನ ಮಾಂಸದ ಚೆಂಡು ಕೂಡ ಇತ್ತು. ಅದರ ಪರೀಕ್ಷೆ ಮಾಡಿದಾಗ ಯಾವುದೇ ಕಾರ್ಟಿಲೇಜ್ ಅಥವಾ ಬೋನ್ ಇರಲಿಲ್ಲ. ಆದ್ದರಿಂದ ಇದು 'ನಿಜವಾದ ಮಾನವ ಬಾಲ'ದ ಉದಾಹರಣೆ ಎಂಬ ನಿರ್ಣಯಕ್ಕೆ ಬರಲಾಯಿತು ಎಂದು ಜರ್ನಲ್ನಲ್ಲಿ ವಿವರಿಸಿದ್ದಾರೆ. ನಿಜವಾದ ಬಾಲಗಳೊಂದಿಗೆ ಜನಿಸಿದ ಮಕ್ಕಳ 40 ದಾಖಲಿತ ಪ್ರಕರಣಗಳು ಮಾತ್ರ ಈವರೆಗೆ ಕಂಡುಬಂದಿದ್ದು, ಈ ಪ್ರಕರಣವು ಜಗತ್ತಿನಲ್ಲೇ ಅತ್ಯಂತ ವಿರಳವಾದದ್ದೆನಿಸಿದೆ. (ಏಜೆನ್ಸೀಸ್)