More

    ಹತ್ತಿ ಬೆಲೆಯಲ್ಲಿ ದಿಢೀರ್ ಕುಸಿತ

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ: ಬಿಳಿ ಬಂಗಾರವೆಂದೇ ಕರೆಯುವ ಹತ್ತಿ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಲಕ್ಷ್ಮೇಶ್ವರ ಮಾರುಕಟ್ಟೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಪ್ರತಿ ಕ್ವಿಂಟಾಲ್ ಹತ್ತಿಗೆ 5,200 ರಿಂದ 5,500 ರೂ. ವರೆಗೆ ಇದ್ದ ಬೆಲೆ ಶುಕ್ರವಾರ ಏಕಾಏಕಿ 800-1000 ರೂ.ಗಳ ಇಳಿಕೆ ಕಂಡಿದೆ.

    ಪಟ್ಟಣದಲ್ಲಿ ಭಾರತೀಯ ಹತ್ತಿ ನಿಗಮದಿಂದ (ಸಿಸಿಐ) ನ. 25 ರಿಂದ ಕ್ವಿಂಟಾಲ್​ಗೆ 5,775 ರೂ.ದಂತೆ ಖರೀದಿಸಲಾಗುತ್ತಿದೆ. ಆದರೆ, ಸಿಸಿಐದವರು ಕೇವಲ ಉತ್ತಮ ಗುಣಮಟ್ಟದ ಹತ್ತಿ ಮಾತ್ರ ಖರೀದಿಸುತ್ತಿದ್ದಾರೆ. ಇದರಿಂದ ಅನಿವಾರ್ಯವಾಗಿ ಮಾರಾಟಕ್ಕೆ ತಂದ ರೈತರು ಖಾಸಗಿ ಖರೀದಿದಾರರ ಮೊರೆ ಹೋಗಬೇಕಾಗಿದೆ. ಹೀಗಾಗಿ, ಖರೀದಿದಾರರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಇದಕ್ಕೆ ಗುಣಮಟ್ಟದ ಕೊರತೆ, ಮಾರ್ಕೆಟ್​ನಲ್ಲಿ ಹತ್ತಿ ಬೆಲೆ ಕಡಿಮೆಯಾಗಿದೆ ಎಂಬ ಕಾರಣ ಹೇಳುತ್ತಿದ್ದಾರೆ.

    ಹತ್ತಿ ಬೆಳೆಯಲು ಬೀಜ, ಗೊಬ್ಬರ, ಕ್ರಿಮಿನಾಶಕ, ಆಳಿನ ಖರ್ಚು ಸೇರಿ ಫಸಲು ಕೈ ಸೇರುವವರೆಗೂ ಪ್ರತಿ ಎಕರೆಗೆ ಕನಿಷ್ಠ 10 ಸಾವಿರ ರೂ. ಖರ್ಚು ಮಾಡಿದ್ದೇನೆ. ಮಳೆಯಿಂದಾಗಿ ಎಕರೆಗೆ 2 ಕ್ವಿಂಟಾಲ್​ಗಿಂತ ಕಡಿಮೆ ಪ್ರಮಾಣದ ಕಪ್ಪುಗಟ್ಟಿದ ಹತ್ತಿ ಬಂದಿದೆ. ಸಿಸಿಐನವರು ಗುಣಮಟ್ಟ ಇಲ್ಲ ಎನ್ನುತ್ತಿದ್ದಾರೆ. ವ್ಯಾಪಾರಸ್ಥರು 4 ಸಾವಿರ ಕ್ಕಿಂತ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ.

    | ಶಿವಾನಂದ ಲಿಂಗಶೆಟ್ಟಿ, ಬಸವರಾಜ ಆದಿ, ಹತ್ತಿ ಬೆಳೆಗಾರರು- ಲಕ್ಷ್ಮೇಶ್ವರ

    ಈ ವರ್ಷ ಅತಿವೃಷ್ಟಿಯಿಂದಾಗಿ ಬಹುತೇಕ ರೈತರ ಹತ್ತಿ ಬೆಳೆ ಹಾಳಾಗಿದೆ. ಕಡಿಮೆ ಗುಣಮಟ್ಟದ ಹತ್ತಿಯನ್ನು ಸಿಸಿಐನವರು ಖರೀದಿಸುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಸ್ಥರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಸಿಸಿಐನವರು ಎಲ್ಲ ರೈತರ ಹತ್ತಿಯನ್ನು ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಿ ಖರೀದಿಸಿ, ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಮುಂದಾಗಬೇಕು. ಇಲ್ಲದಿದ್ದರೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.

    | ಎಂ.ಎಸ್. ದೊಡ್ಡಗೌಡರ, ಜಿಪಂ ಮಾಜಿ ಸದಸ್ಯ ಲಕ್ಷ್ಮೇಶ್ವರ

    ಮಾರುಕಟ್ಟೆಯಲ್ಲಿ ಹತ್ತಿ ಬೆಲೆಯಲ್ಲಿ ಏಕಾಏಕಿ ಸಾವಿರದಷ್ಟು ಕಡಿಮೆಯಾಗಿದೆ. ಈ ವರ್ಷ ಅತಿವೃಷ್ಟಿಯಿಂದಾಗಿ ಹತ್ತಿಯ ಗುಣಮಟ್ಟ ಕಳಪೆಯಾಗಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಸಿಸಿಐನವರು 30, 29, 28 ಮಿಮೀ ಅಳತೆಯ ಹತ್ತಿಯನ್ನು ಮಾತ್ರ ನಿಗದಿತ ದರಕ್ಕೆ ಖರೀದಿಸುತ್ತಾರೆ. ರೈತರ ಬೇಡಿಕೆಯಂತೆ ಗುಣಮಟ್ಟ ಆಧರಿಸಿ ಕಡಿಮೆ ಬೆಲೆಗಾದರೂ ಹತ್ತಿ ಖರೀದಿಸುವಂತೆ ರೈತರ ಪರವಾಗಿ ಸಿಸಿಐನವರಿಗೆ ಮನವಿ ಮಾಡುತ್ತೇವೆ.

    | ಎನ್.ಎ. ಲಕ್ಕುಂಡಿ, ಎಪಿಎಂಸಿ ಕಾರ್ಯದರ್ಶಿ, ಲಕ್ಷ್ಮೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts