More

    ನಿದ್ದೆಯಲ್ಲಿದ್ದ ಬಾಲಕಿಯನ್ನು ಅಪಹರಿಸಿ ರೇಪ್ ಮಾಡಿದ ದುರುಳನಿಗೆ ಗುಂಡಿಕ್ಕಿದ ಪೊಲೀಸರು…

    ಬೆಂಗಳೂರು: ರೈಲು ನಿಲ್ದಾಣದಲ್ಲಿ ನಿದ್ರಿಸುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ತಡರಾತ್ರಿ ಅಪಹರಿಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಶ್ರೀರಾಂಪುರ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ. ತಮಿಳುನಾಡು ಮೂಲದ ದಿನೇಶ್ (32) ಗುಂಡೇಟು ತಿಂದು ಸೆರೆಸಿಕ್ಕ ಆರೋಪಿ. ಆತನನ್ನು ಹಾಗೂ ಆತನಿಂದ ಹಲ್ಲೆಗೊಳಗಾದ ಎಎಸ್‌ಐ ವೆಂಕಟಪ್ಪ ಅವರನ್ನು ಚಿಕಿತ್ಸೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.

    ತಮಿಳುನಾಡಿನ ಸೇಲಂ ಮೂಲದ ದಂಪತಿ, ಕಳೆದ ಆರು ವರ್ಷಗಳಿಂದ ನಗರದಲ್ಲಿ ಮಕ್ಕಳ ಆಟದ ವಸ್ತುಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ದಂಪತಿಗೆ ತಮ್ಮ 4 ವರ್ಷದ ಮಗಳೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಿಂಭಾಗದ ಗೇಟ್ ಬಳಿ ಟಾರ್ಪಾಲಿನ್ ಶೆಡ್‌ನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪ್ರತಿದಿನದಂತೆ ಶನಿವಾರವೂ (ಅ.10) ರಾತ್ರಿ 8.30ರಲ್ಲಿ ವ್ಯಾಪಾರ ಮುಗಿಸಿಕೊಂಡು ಶೆಡ್‌ಗೆ ವಾಪಸಾಗಿದ್ದರು. ಈ ವೇಳೆ ಮಳೆ ಸುರಿಯುತ್ತಿದ್ದರಿಂದ ಶೆಡ್‌ನೊಳಗೆ ನೀರು ನುಗ್ಗಿತ್ತು. ಆದ್ದರಿಂದ ಅಲ್ಲಿ ಮಲಗಲು ಸಾಧ್ಯವಾಗದೆ ಪುತ್ರಿಯೊಂದಿಗೆ ರೈಲು ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಮಲಗಿದ್ದರು. ದಂಪತಿಗೆ ತಡರಾತ್ರಿ ಎಚ್ಚರವಾದಾಗ ಪಕ್ಕದಲ್ಲಿ ಪುತ್ರಿ ಇರಲಿಲ್ಲ. ಇದರಿಂದ ಆತಂಕಗೊಂಡಿದ್ದ ದಂಪತಿ ನಿಲ್ದಾಣದ ಸುತ್ತಮುತ್ತಲಿನ ಸ್ಥಳಗಳಲ್ಲಿ ಹುಡುಕಾಡಿದ್ದಾರೆ. ಆದರೆ, ಆಕೆ ಎಲ್ಲಿಯೂ ಸಿಕ್ಕಿಲ್ಲ. ಭಾನುವಾರ ಬೆಳಗ್ಗೆ ದಂಪತಿ ಶ್ರೀರಾಂಪುರ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಬಗ್ಗೆ ದೂರು ಕೊಟ್ಟಿದ್ದರು. ಆಗ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಅಪರಿಚಿತ ಬಾಲಕಿಯೊಬ್ಬಳು ದಾಖಲಾಗಿರುವುದು ತಿಳಿದುಬಂದಿತ್ತು.

    ಇದನ್ನೂ ಓದಿ: ಕರೊನಾ ಬುಲೆಟಿನ್​: ಸೋಂಕಿತರಿಗಿಂತ ಗುಣವಾದವರೇ ಅಧಿಕ

    ದಂಪತಿ ಆಸ್ಪತ್ರೆಗೆ ತೆರಳಿ ಆಕೆ ತಮ್ಮ ಪುತ್ರಿ ಎಂಬುದನ್ನು ಖಚಿತಪಡಿಸಿದ್ದರು. ಬಾಲಕಿ ತೀರ ಅಸ್ವಸ್ಥಗೊಂಡಿದ್ದರಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿತ್ತು. ಈ ಕುರಿತು ದಂಪತಿ ಕೊಟ್ಟ ದೂರಿನ ಮೇರೆಗೆ ಶ್ರೀರಾಂಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಕೆಎಸ್‌ಆರ್ ರೈಲು ನಿಲ್ದಾಣದ ಟಿಕೆಟ್ ಕೌಂಟರ್ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ, ಆರೋಪಿಯ ಮುಖಚಹರೆ ಗುರುತು ಪತ್ತೆಯಾಗಿತ್ತು. ಅದನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದಾಗ ಆರೋಪಿ ದಿನೇಶ್ ಸೋಮವಾರ ಬೆಳಗಿನ ಜಾವ 4 ಗಂಟೆಯಲ್ಲಿ ಓಕಳಿಪುರದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇನ್‌ಸ್ಪೆಕ್ಟರ್ ಸುನೀಲ್ ಎಸ್. ನಾಯ್ಕ, ಎಎಸ್‌ಐ ವೆಂಕಟಪ್ಪ ಹಾಗೂ ಪೇದೆಗಳು ಆರೋಪಿ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದರು. ಆರ್.ಆರ್.ಕೆ ಜಂಕ್ಷನ್ ಬಳಿ ಕಂಡ ಆರೋಪಿಯನ್ನು ಎಎಸ್‌ಐ ವೆಂಕಟಪ್ಪ ಬಂಧಿಸಲು ಮುಂದಾದಾಗ ಆತ ಮಾರಕಾಸದಿಂದ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಇನ್‌ಸ್ಪೆಕ್ಟರ್ ಸುನೀಲ್ ನಾಯ್ಕ ಗಾಳಿಯಲ್ಲಿ ಒಂದು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರು. ಅದರೂ ಹಲ್ಲೆಗೆ ಮುಂದಾದಾಗ ಆರೋಪಿ ಕಾಲಿಗೆ ಗುಂಡಿಕ್ಕಿಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

    ಆರೋಪಿ ತಮಿಳುನಾಡು ಮೂಲದವನಾಗಿದ್ದು, ಯಾವುದೇ ರೀತಿಯ ಕೆಲಸ ಮಾಡದೆ ನಗರದಲ್ಲಿ ಓಡಾಡಿಕೊಂಡಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಮಾಹಿತಿ ನೀಡಿದ್ದಾರೆ.

    1400 ಕೋಟಿ ರೂ. ಅವ್ಯವಹಾರ: ಕೊನೆಗೂ ಸಿಕ್ಕಿಬಿದ್ದ ಬ್ಯಾಂಕ್ ಅಧ್ಯಕ್ಷ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts