More

    ರಂಗಭೂಮಿ ನಿಲ್ಲಲ್ಲ, ಕಲಾವಿದರೂ ಸೋಲಲ್ಲ

    *ಕರೊನಾದಿಂದ ಮತ್ತಷ್ಟು ಅಭದ್ರತೆ
    *ಒಂದೇ ಸಂಸ್ಥೆಗೆ ಕೋಟಿಗಟ್ಟಲೇ ಹಣ ನೀಡುವುದು ಸರಿಯಲ್ಲ
    *ಸಂವಾದದಲ್ಲಿ ರಂಗಕರ್ಮಿಗಳ ಅಭಿಪ್ರಾಯ

    – ಇಂದು ವಿಶ್ವ ರಂಗಭೂಮಿ ದಿನಾಚರಣೆ

    ವಿಜಯವಾಣಿ ವಿಶೇಷ ಮೈಸೂರು
    ಮೊದಲೇ ಅಭದ್ರತೆ ಹೊಂದಿರುವ ರಂಗಭೂಮಿ ಕಲಾವಿದರು ಕರೊನಾದಿಂದ ಮತ್ತಷ್ಟು ಅಭದ್ರತೆ ಎದುರಿಸುತ್ತಿದ್ದಾರೆ. ಆದರೂ, ರಂಗಭೂಮಿ ನಿಲ್ಲಲ್ಲ, ಕಲಾವಿದರೂ ಸೋಲಲ್ಲ. ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುವ ಭರವಸೆ ಇದ್ದೇ ಇರುತ್ತದೆ. ಈ ಬಾರಿಯ ರಂಗಭೂಮಿ ಸಂದೇಶವೂ ಅದರ ಬಗ್ಗೆಯೇ ತಿಳಿಸುತ್ತದೆ ಎಂದು ರಂಗನಿರ್ದೇಶಕಿ, ಮೈಸೂರು ವಿವಿ ಲಲಿತಕಲಾ ಕಾಲೇಜಿನ ಉಪನ್ಯಾಸಕಿ ಕೆ.ಆರ್.ಸುಮತಿ ಹೇಳಿದರು.
    ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಕಚೇರಿಯಲ್ಲಿ ವಿಶ್ವ ರಂಗಭೂಮಿ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.
    ರಂಗಭೂಮಿ ಪ್ರಪಂಚದಲ್ಲಿ ಎಲ್ಲರನ್ನೂ ಒಳಗೊಳ್ಳುತ್ತ ಹೋಗುತ್ತದೆ. ಈ ಒಳಗೊಳ್ಳುವ ಪ್ರಕ್ರಿಯೆಯಿಂದ ಕರೊನಾದಂತ ಸವಾಲು ಎದುರಿಸುವ ಶಕ್ತಿ ರಂಗಭೂಮಿಗೆ ಬಂದಿದೆ. ನಾವು ಕೂಡ ಕರೊನಾ ನೀತಿ ನಿಯಮಗಳಿಗೆ ಅನುಗುಣವಾಗಿ ನಮ್ಮ ಚಟುವಟಿಕೆಗಳನ್ನು ಸ್ವಲ್ಪದಿನ ಸ್ಥಗಿತಗೊಳಿಸಿದ್ದೆವು. ಈಗ ಮತ್ತೆ ಆರಂಭಿಸಿದ್ದೇವೆ. ರಂಗಭೂಮಿ ನಿರಂತರ ಚಲನೆಯಲ್ಲಿರುವ ಮಾಧ್ಯಮವಾಗಿದೆ ಎಂದರು.
    ಸಾಹಸಿ ಮನೋವೃತ್ತಿ ಇರುವವರು ಮಾತ್ರ ರಂಗಭೂಮಿಗೆ ಬರುತ್ತಾರೆ. ರಂಗಭೂಮಿಯನ್ನು ಬದುಕಿನ ವೃತ್ತಿಯಾಗಿ ಸ್ವೀಕರಿಸುವುದು ದೊಡ್ಡ ಸವಾಲಾಗಿದೆ. ಪ್ರಪಂಚ ಹುಟ್ಟಿದ ದಿನ ನಾಟಕವೂ ಹುಟ್ಟಿತ್ತು. ಪ್ರಪಂಚ ಮುಗಿದರೂ ನಾಟಕ ಇರುತ್ತದೆ. ಮನುಷ್ಯನ ವ್ಯಕ್ತಿತ್ವದ ಅಭಿವ್ಯಕ್ತಿಗೆ ರಂಗಭೂಮಿ ಬಹಳ ಅದ್ಬುತ ಮಾಧ್ಯಮವಾಗಿದೆ ಎಂದು ಅಭಿಪ್ರಾಯಪಟ್ಟರು.
    ರಂಗಭೂಮಿಯನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ರಂಗಭೂಮಿಯ ಮೂಲಕ ಹೇಳುವ ವಿಷಯ ಮುಖ್ಯವೇ ಹೊರತು, ನಟ, ನಿರ್ದೇಶಕ ಹಾಗೂ ಸರ್ಕಾರ ಮುಖ್ಯವಾಗಬಾರದು. ಆದರಿಂದ ನಮ್ಮ ಸಮಾಜ ಹಿಂದಕ್ಕೆ ಹೋಗುತ್ತಿದೆ. ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತುಂಬಾ ತಲ್ಲಣ ಅನುಭವಿಸುತ್ತಿದ್ದಾರೆ. ಯಾವುದೇ ಸಂಘರ್ಷಗಳು ಮಹಿಳೆಯ ಗ್ಯಾಂಗ್ ರೇಪ್ ಮೂಲಕ ಅಂತ್ಯವಾಗುತ್ತಿವೆ. ಇಷ್ಟು ದಿನದ ಅಧಿವೇಶನದಲ್ಲೂ ಏನು ನಡೆಯುತ್ತಿದೆ ಎಂದು ಪ್ರಶ್ನಿಸಿದರು.
    ಪ್ರಾಥಮಿಕ ಶಾಲಾ ಪಠ್ಯ ಕ್ರಮದಲೇ ರಂಗಭೂಮಿ ವಿಷಯವನ್ನು ಸೇರಿಸಬೇಕು ಎಂದು ಕೆ.ಆರ್.ಸುಮತಿ ಸಲಹೆ ನೀಡಿದರು.

    ಡಿಸೆಂಟ್ರಲೈಸ್ ಆಗಬೇಕು
    ಸರ್ಕಾರಿ ಸಂಸ್ಥೆಯಾಗಿರುವ ರಂಗಾಯಣಕ್ಕೆ ಮಾತ್ರ ಒಂದು ಕೋಟಿ ರೂ. ಅನುದಾನ ಏಕೆ ಕೊಡಬೇಕಿತ್ತು. ರಂಗಾಯಣಕ್ಕೆ ಚಾಲೆಂಜ್ ಹಾಕುವಂತಹ ನಾಟಕಗಳನ್ನು ಮೈಸೂರಿನಲ್ಲಿ ಅನೇಕ ತಂಡಗಳು ಪ್ರದರ್ಶಿಸುತ್ತಿವೆ. ಅದನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಬೇಕು. ಅದನ್ನು ಬಿಟ್ಟು ಒಂದೇ ಸಂಸ್ಥೆಗೆ ಕೋಟಿಗಟ್ಟಲೇ ಹಣ ನೀಡುವುದು ಸರಿಯಲ್ಲ. ಹಣ ನೀಡಿದ್ದರಿಂದ ರಂಗಾಯಣದಲ್ಲಿ ಯಾವ ಅದ್ಬುತವು ಸೃಷ್ಟಿಯಾಗಲಿಲ್ಲ ಎಂದರು.
    ‘ನಮಗೆ ರಂಗಾಯಣ ಮುಖ್ಯವಲ್ಲ. ಭೈರಪ್ಪ ಅವರ ಪರ್ವ ಮುಖ್ಯ’ ಎಂದು ಸಂಸ್ಕೃತಿ ಇಲಾಖೆ ಸಚಿವರು ತಿಳಿಸುತ್ತಾರೆ. ಹಾಗಾದರೆ 1 ಕೋಟಿ ರೂ. ಕೊಟ್ಟು ನಾಡಿಗೆ ಏನು ಸಂದೇಶ ನೀಡಿದ್ದೀರಿ ಎಂದು ಪ್ರಶ್ನಿಸಿದರು.
    ಕುವೆಂಪು ಅವರು ರಾಮಾಯಣವನ್ನು ಮರುಸೃಷ್ಟಿಸಿದರು. ಅದು ಸಾಕಷ್ಟು ವೇದಿಕೆಯಲ್ಲಿ ಚರ್ಚೆಯಾಗಿತ್ತು. ಆದರೆ, ಪರ್ವ ಬಗ್ಗೆ ಏನು ಚರ್ಚೆ ನಡೆದಿದೆ ಎಂದು ಪ್ರಶ್ನಿಸಿದ ಅವರು, ಕೋಟಿ ಹಣವನ್ನು ನೂರು ರಂಗ ತಂಡಗಳಿಗೆ ಒಂದೊಂದು ಲಕ್ಷ ನೀಡಿದ್ದರೂ ನೂರು ಪರ್ವಗಳು ಹುಟ್ಟುತ್ತಿದ್ದವು. ಹಾಗಾಗಿ ಅನುದಾನಗಳು ಡಿಸೆಂಟ್ರಲೈಸ್ ಆಗಬೇಕು ಎಂದು ಕೆ.ಆರ್.ಸುಮತಿ ಒತ್ತಾಯಿಸಿದರು.

    ಕಲಾವಿದರಲ್ಲಿ ಹಣದ ಸಮಸ್ಯೆ ಹೆಚ್ಚಾಗಿದೆ
    ಹಿರಿಯ ರಂಗಕರ್ಮಿ ಮೈಮ್ ರಮೇಶ್ ಮಾತನಾಡಿ, ಕಲಾವಿದನಿಗೆ ಭದ್ರತೆ ಬೇಕು. ನಮಗೆ ರಂಗಾಯಣದಲ್ಲಿ ಭದ್ರತೆ ಸಿಕ್ಕಿದ್ದು ಬೇರೆ ವಿಚಾರ. ನಿಜವಾಗಿ ರಂಗಭೂಮಿ ಹುಟ್ಟಿದ್ದೇ ಸಾಮಾಜಿಕ ಚಿಂತನೆಗಾಗಿ. ಸಮಾಜದಲ್ಲಿ ಆಗುತ್ತಿರುವ ಅನ್ಯಾಯವನ್ನು ಜನರಿಗೆ ತೋರಿಸವ ಹಕ್ಕು ನಟನಿಗೆ, ರಂಗಭೂಮಿಗೆ ಇದೆ. ನಾವು ರಂಗಭೂಮಿ ಕಟ್ಟುವಾಗ ಭದ್ರತೆ ಬಗ್ಗೆ ಯೋಚನೆ ಮಾಡಿರಲಿಲ್ಲ. ನಾವು ರಂಗಭೂಮಿಗೆ ಹಾಗೂ ಸಮಾಜಕ್ಕೆ ಏನನ್ನು ನೀಡಬೇಕು ಎಂದು ಚಿಂತಿಸುತ್ತಿದ್ದೇವೆ. ನಮ್ಮ ಹಣದಲ್ಲೇ ಸಮಾಜದಲ್ಲಿನ ಅನ್ಯಾಯದ ಬಗ್ಗೆ ಯೋಚಿಸುವ ಬೀದಿ ನಾಟಕ ಮಾಡುತ್ತಿದ್ದವು. ಆದರೀಗ ಸರ್ಕಾರ ಕೊಡುವ ಅನುದಾನದಿಂದ ಎರಡು ನಾಟಕ ಮಾಡಿ, ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ ಎಂದು ಬೇಸರಿಸಿದರು.
    ಕರೊನಾದಿಂದಾಗಿ ಕಲಾವಿದರಲ್ಲಿ ಹಣದ ಸಮಸ್ಯೆ ಹೆಚ್ಚಾಗಿದೆ. ಕೆಲ ಕಲಾವಿದರು ರಸ್ತೆ ಬದಿಯಲ್ಲಿ ದೋಸೆ ಮಾರಿ ಜೀವನ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿಯಲ್ಲಿ ನಮ್ಮ ಸಮಾಜ ಮತ್ತು ಸರ್ಕಾರ ಕಲಾವಿದರನ್ನು ಹೇಗೆ ನೋಡುತ್ತಿದೆ. ಅವರಿಗೆ ಹೇಗೆ ಸಹಕಾರ ಮಾಡುತ್ತಿದೆ ಎನ್ನುವುದು ಮುಖ್ಯ ಎಂದರು.

    ಮಕ್ಕಳ ರಂಗಭೂಮಿಗೆ ಒತ್ತು ನೀಡಿ
    ಸ್ವೀಡನ್ ದೇಶದಲ್ಲಿ ಮಕ್ಕಳ ರಂಗಭೂಮಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಅದೇ ಮಾದರಿಯಲ್ಲಿ ನಮ್ಮಲ್ಲೂ ಮಕ್ಕಳ ರಂಗಭೂಮಿಗೆ ಒತ್ತು ನೀಡಬೇಕು. ಆ ಮೂಲಕ ಮಕ್ಕಳ ಮನೋವಿಕಾಸ ಹೆಚ್ಚಿಸಬೇಕು. ಮಕ್ಕಳಿಗೆ ರಂಗಭೂಮಿ ಮೂಲಕ ನೀಡುವ ಶಿಕ್ಷಣ ಒಳ್ಳೆ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾಗಿ, ವಿಶ್ವರಂಗಭೂಮಿ ದಿನದ ಅಂಗವಾಗಿ ಮಕ್ಕಳ ರಂಗಭೂಮಿಗೆ ಹೆಚ್ಚು ಒತ್ತು ನೀಡಲು ಎಲ್ಲರೂ ಮುಂದಾಗಬೇಕು ಎಂದು ಮೈಮ್ ರಮೇಶ್ ಸಲಹೆ ನೀಡಿದರು.

    ಎಲ್ಲ ವಿಷಯ ದಾಖಲೀಕರಣವಾಗಲಿ
    ಎಲ್ಲ ರೀತಿಯ ಸಾಧ್ಯತೆಗಳನ್ನು ಕಂಡುಕೊಳ್ಳುವ ಶಕ್ತಿ, ಸಾಮರ್ಥ್ಯ ರಂಗಭೂಮಿಗೆ ಇದೆ. ಕರೊನಾ ಬಂದರೂ ರಂಗಭೂಮಿ ನಿಂತ ನೀರಾಗಿರಲಿಲ್ಲ. ಒಂದಲ್ಲಾ ಒಂದು ಕಡೆ ಪ್ರಯತ್ನ ನಡೆಯುತ್ತಿತ್ತು. ಕೆಲವರು ನಾಟಕಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಪರಸ್ಪರ ಪ್ರೇಕ್ಷಕ ಮತ್ತು ನಟನ ನಡುವಿನ ಅನುಸಂಧಾನ ಹೆಚ್ಚಾಗಿರುವುದು ರಂಗಭೂಮಿಯಲ್ಲಿ ಮಾತ್ರ. ಇಲ್ಲಿ ನಟನನ್ನು ಹತ್ತಿರದಿಂದ ನೋಡಲು ಸಾಧ್ಯವಾಗುತ್ತದೆ. ನಟನ ಉಸಿರು ಕೇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಸಿನಿಮಾದಲ್ಲಿ ಸಾಧ್ಯವಿಲ್ಲ. ಯುವಕರು ಹೆಚ್ಚು ರಂಗಭೂಮಿಗೆ ಬರುವಂತಾಗಬೇಕು. ರಂಗಭೂಮಿಯ ಎಲ್ಲ ವಿಷಯಗಳನ್ನು ದಾಖಲೀಕರಣ ಮಾಡುವ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು.
    ಧನಂಜಯ ರಂಗ ಕಲಾವಿದ

    ಕಲಾವಿದರಿಗೆ ಅಭದ್ರತೆ ಅಭ್ಯಾಸವಾಗಿ ಬಿಟ್ಟಿದೆ
    ಯುವರಂಗ ನಿರ್ದೇಶಕ ಮೇಘ ಸಮೀರ ಮಾತನಾಡಿ, ಕಲಾವಿದರಿಗೆ ಅಭದ್ರತೆ ಅಭ್ಯಾಸವಾಗಿಬಿಟ್ಟಿದೆ. ಕರೊನಾ ಸಂದರ್ಭದಲ್ಲಿ ಮೂರು ನಾಲ್ಕು ತಿಂಗಳು ತಟಸ್ಥವಾಗಿದ್ದೆವು. ಆದರೂ, ನಾವು ಸುಮ್ಮನೆ ಕೂತಿರಲಿಲ್ಲ. ನಟರಾಗಿ, ಕಲಾಭ್ಯಾಸಿಯಾಗಿ, ಏನು ಕಲಿಯ ಬೇಕು. ಏನು ಓದಬೇಕು ಎಂಬ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೇವು. ಒಂದು ಕಾಲಘಟ್ಟದವರೆಗೆ ಸರ್ಕಾರಗಳು ನಾಟಕ, ಸಾಹಿತ್ಯ, ಕಲೆಯನ್ನು ಪ್ರೋತ್ಸಾಹಿಸುತ್ತಿದ್ದವು. ಆದರೀಗ ನಾವು ಸರ್ಕಾರವನ್ನು ನಂಬಿಲ್ಲ. ಬದಲಿಗೆ ಜನರನ್ನು ನಂಬಿ ನಾಟಕ ಮಾಡುತ್ತಿದ್ದೇವೆ. ಈಗ ಆ ಟ್ರೆಂಡ್ ಮುಂದುವರಿದ ಕಾರಣ ಅನೇಕ ತಂಡಗಳು ಹುಟ್ಟುಕೊಂಡಿವೆ. ರಂಗಭೂಮಿ ಮಾಧ್ಯಮಕ್ಕೆ ದೊಡ್ಡ ಶಕ್ತಿಯಿದೆ ಎಂದು ಅನೇಕರಿಗೆ ಗೊತ್ತಾಗಿದೆ. ಹಾಗಾಗಿ, ಅನೇಕ ತಂಡಗಳು ಹುಟ್ಟುತ್ತಿವೆ ಎಂದರು.

    ಎಲ್ಲ ತಂಡಗಳನ್ನು ಗುರುತಿಸಿ ಅನುದಾನ ನೀಡಲಿ
    ಯುವ ರಂಗಕರ್ಮಿ ಮಂಡ್ಯ ಚಂದ್ರು ಮಾತನಾಡಿ, 10 ರಿಂದ 20 ವರ್ಷಕ್ಕೆ ನಮ್ಮ ಆಲೋಚನೆಗಳ ಬದಲಾಗುತ್ತವೆ. ಯಾವುದೇ ಕ್ಷೇತ್ರದಲ್ಲಿ ಹೆಚ್ಚು ವರ್ಷಗಳ ಕಾಲ ಒಬ್ಬರೇ ಇದ್ದರೆ ಆ ಕ್ಷೇತ್ರ ನಿಂತ ನೀರಂತಾಗುತ್ತದೆ. ಹಾಗಾಗಿ, ರಂಗಭೂಮಿಗೂ ಹೊಸ ತಂಡಗಳು ಬರಬೇಕು. ಆಗ ರಂಗಭೂಮಿಯ ಬೆಳವಣಿಗೆಯೂ ಸಾಧ್ಯವಾಗುತ್ತದೆ ಎಂದರು.
    ಸರ್ಕಾರದ ಸವಲತ್ತುಗಳನ್ನು ಪಡೆಯುವ ಉದ್ದೇಶದಿಂದ ರಂಗ ತಂಡಗಳನ್ನು ಕಟ್ಟಬಾರದು. ಸಮಾಜ ಬದಲಾವಣೆಗಾಗಿ ರಂಗ ತಂಡಗಳನ್ನು ಕಟ್ಟಬೇಕು. ಆ ತಂಡಗಳ ಮೂಲಕ ಸಮಾಜದ ಬದಲಾವಣೆಗೆ ಅರಿವು ಮೂಡಿಸಬೇಕು. ಹಸಿವು ಇದ್ದರೆ ಮಾತ್ರ ಕ್ರಿಯೇಟಿವಿಟಿ ಹುಟ್ಟುತ್ತದೆ. ರಂಗಭೂಮಿಯ ಮೇಲಿನ ಹಸಿವು ಯುವಕರಿಗೆ ಇರಬೇಕು ಎಂದರು.
    ಸರ್ಕಾರ ಒಂದೇ ಸಂಸ್ಥೆಗೆ ಅನುದಾನ ನೀಡುವ ಬದಲು ಎಲ್ಲ ತಂಡಗಳನ್ನು ಗುತಿಸುವ ಕೆಲಸ ಮಾಡಬೇಕು. ನಮ್ಮ ತಂಡ ಇಲ್ಲಿವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಂದು ರೂ. ಅನುದಾನ ಪಡೆದಿಲ್ಲ. ಸಂಸ್ಕೃತಿ ಇಲಾಖೆ ಪ್ರತಿ ವರ್ಷ ನಾಲ್ಕು ತಂಡಗಳಿಗೆ ಮಾತ್ರ ಅನುದಾನ ನೀಡುತ್ತಿದೆಯೇ ಹೊರತು ಹೊಸ ತಂಡಗಳಿಗೆ ನೀಡುತ್ತಿಲ್ಲ. ಮುಂದಾದರೂ, ಸಂಸ್ಕೃತಿ ಇಲಾಖೆ ಎಲ್ಲ ತಂಡಗಳನ್ನು ಗುರುತಿಸಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

    * ವಿಜಯವಾಣಿ ಟೀಂ: ಸಿ.ಕೆ.ಮಹೇಂದ್ರ, ಅವಿನಾಶ್ ಜೈನಹಳ್ಳಿ, ಚಿತ್ರಗಳು: ಕೆ.ಎಚ್.ಚಂದ್ರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts