More

    ರಾಣೆಬೆನ್ನೂರ ಕಾ ರಾಜಾ ಗಣಪತಿ ಶೋಭಾಯಾತ್ರೆ ನಿಮಿತ್ತ ಹಿಂದು ಧರ್ಮ ಜಾಗೃತಿ ಸಭೆ ಅ. 11ರಂದು

    ರಾಣೆಬೆನ್ನೂರ: ಇಲ್ಲಿಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ ನಗರದ ಮುನ್ಸಿಪಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಅಯೋಧ್ಯಾ ಪ್ರತಿರೂಪದ ರಾಣೆಬೆನ್ನೂರ ಕಾ ರಾಜಾ ಗಣಪತಿ ಶೋಭಾಯಾತ್ರೆ ನಿಮಿತ್ತ ಅ. 11ರಂದು ರಕ್ತದಾನ ಶಿಬಿರ, ಅನ್ನಸಂತರ್ಪಣೆ, ಹಿಂದು ಧರ್ಮ ಜಾಗೃತಿ ಸಭೆ ಜರುಗಲಿದೆ. ಅ. 15ರಂದು ಗಣಪತಿಯ ಶೋಭಾಯಾತ್ರೆ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ತಿಳಿಸಿದರು.
    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಸಾರ್ವಜನಿಕವಾಗಿ ಗಣೇಶನ ಪ್ರತಿಷ್ಠಾಪನೆ ಮಾಡುತ್ತಾ ಬರಲಾಗಿದ್ದರೂ ಈ ವರ್ಷದ ಅಯೋಧ್ಯಾ ಪ್ರತಿರೂಪದ ಗಣಪತಿ ದರ್ಶನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ಜನರು ಆಗಮಿಸಿದ್ದಾರೆ. ಈವರೆಗೂ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಅನೇಕ ಜನರು ಜನದಟ್ಟಣೆಯಿಂದಾಗಿ ದರ್ಶನ ಲಭಿಸದೆ ಮರಳಿದ್ದಾರೆ ಎಂದರು.
    ಗಣಪತಿ ಮೂರ್ತಿ ಶೋಭಾಯಾತ್ರೆ ನಿಮಿತ್ತ ಅ. 11ರಂದು ಬೆಳಗ್ಗೆ 10ರಿಂದ ರಾತ್ರಿ 10ರ ವರೆಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ. ಅಂದು ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 5.30ಕ್ಕೆ ಹಿಂದು ಧರ್ಮ ಜಾಗೃತ ಸಭೆ ಆಯೋಜಿಸಲಾಗಿದೆ.
    ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ವಿಶೇಷ ಆಹ್ವಾನಿತರಾಗಿ ಆಗಮಿಸುತ್ತಿದ್ದಾರೆ. ಸಂಜೆ 7ರಿಂದ ಹಾಸ್ಯ, ನೃತ್ಯ ಮತ್ತು ಸಂಗೀತ ಸಂಜೆ ಆಯೋಜಿಸಲಾಗಿದೆ. ಇದರಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕಿ ಡಾ. ಶಮಿತಾ ಮಲ್ನಾಡ್, ಸರಿಗಮಪ ಖ್ಯಾತಿಯ ಶ್ರೀಹರ್ಷ, ಮೆಹಬೂಬ, ಪೃಥ್ವಿ ಭಟ್, ಜ್ಞಾನ, ಮಜಾಭಾರತದ ಸುಸ್ಮಿತಾ, ಮಂಜು ಪಾವಗಡ, ಕೆಚ್ಚೆದೆಯ ಕನ್ನಡತಿ ಅನು, ಸಾಮಾಜಿಕ ಜಾಲತಾಣದ ಹಾಸ್ಯ ಕಲಾವಿದರಾದ ಪ್ರಿಯಾ ಸವದಿ, ಪ್ರಕಾಶ ಆರ್.ಕೆ., ಕನ್ನಡ ಭುವನೇಶ್ವರಿ ಆರಾಧಕ ನಿಂಗರಾಜ ಸಿಂಗಾಡಿ ಹಾಗೂ ಬೆಂಗಳೂರಿನ ರಿಯಾಲಿಟಿ ಫೇಮ್ ಖ್ಯಾತಿಯ ಕಲರ್ಸ್‌ ಡ್ಯಾನ್ಸ್ ಟೀಮ್ ಕಲಾವಿದರು ಭಾಗವಹಿಸಿ ಪ್ರದರ್ಶನ ನೀಡಲಿದ್ದಾರೆ.
    ಅ. 15ರಂದು ಮಧ್ಯಾಹ್ನ 12ಕ್ಕೆ ಶೋಭಾಯಾತ್ರೆ ಹೊರಡಲಿದ್ದು ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಚಾಲನೆ ನೀಡುವರು. ಶೋಭಾಯಾತ್ರೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಒಂದು ಡಿಜೆ ಹಾಗೂ ಪುರುಷರಿಗೆ ಎರಡು ಡಿಜೆ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ರಾಜ್ಯದ ವಿವಿಧ ಕಲಾತಂಡಗಳ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದರು.
    ನಗರಸಭೆ ಸದಸ್ಯರಾದ ಹನುಮಂತಪ್ಪ ಹೆದ್ದೇರಿ, ಹುಚ್ಚಪ್ಪ ಮೆಡ್ಲೇರಿ, ನಾಗರಾಜ ಅಡ್ಮನಿ, ಮಾಜಿ ಸದಸ್ಯ ರಾಘವೇಂದ್ರ ಚಿನ್ನಿಕಟ್ಟಿ, ಅಜಯ ಮಠದ, ವೀರೇಶ ಹೆದ್ದೇರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts