More

    ರಾಣೆಬೆನ್ನೂರ-ಶಿವಮೊಗ್ಗ ರೈಲು ಮಾರ್ಗ ಬದಲಿಸಿ; ರಟ್ಟಿಹಳ್ಳಿ ನಿವಾಸಿಗಳ ಆಗ್ರಹ

    ಹಾವೇರಿ: ರಾಣೆಬೆನ್ನೂರ-ಶಿಕಾರಿಪುರ-ಶಿವಮೊಗ್ಗ ರೈಲು ಮಾರ್ಗ ಅವೈಜ್ಞಾನಿಕವಾಗಿದ್ದು ಕೂಡಲೇ ರೈಲ್ವೆ ಇಲಾಖೆಯವರು ಹಾಗೂ ಜಿಲ್ಲಾಧಿಕಾರಿಯವರು ಸ್ಥಳ ಪರಿಶೀಲನೆ ಮಾಡಿ ಮಾರ್ಗ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ ರಟ್ಟಿಹಳ್ಳಿಯ ನಿವಾಸಿಗಳು ಮಂಗಳವಾರ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರಿಗೆ ಮನವಿ ಸಲ್ಲಿಸಿದರು.
    ಈಗಾಗಲೇ ತುಂಗಾ ಮೇಲ್ದಂಡೆ ಯೋಜನೆ, ರಸ್ತೆ ಅಗಲೀಕರಣ ಇತರ ಅನೇಕ ನೀರಾವರಿ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಮರ್ಪಕ ಪರಿಹಾರ ಕೂಡ ಕೈಗೆ ತಲುಪದೆ ತೊಂದರೆಯಲ್ಲಿರುವ ರಟ್ಟಿಹಳ್ಳಿ ಭಾಗದ ರೈತರ ಭೂಮಿಯನ್ನು ಇದೀಗ ರೈಲ್ವೆ ಹಳಿ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ.
    ಒಂದು ಕಡೆ ಗುಡ್ಡ, ನದಿ ಮತ್ತು ಅನೇಕ ಯೋಜನೆಗಳಿಗೆ ಭೂಮಿ ಕಳೆದುಕೊಂಡಿರುವ ಕಡಿಮೆ ಪ್ರಮಾಣದಲ್ಲಿ ಸಮತಟ್ಟಾದ ಭೂಮಿಯನ್ನು ಹೊಂದಿರುವ ರಟ್ಟಿಹಳ್ಳಿ ತಾಲೂಕಿನ ಗ್ರಾಮದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು ಯೋಜನೆಗೆ ಭೂಮಿ ಸ್ವಾಧೀನ ಮಾಡಿಕೊಳ್ಳುತ್ತಿರುವುದು ಖಂಡನೀಯ ಮತ್ತು ಅಮಾನವೀಯ.
    ರಾಣೆಬೆನ್ನೂರ-ಹೊನ್ನಾಳಿ-ಶಿವಮೊಗ್ಗ ಮಾರ್ಗದಲ್ಲಿದ್ದ ರೈಲ್ವೆ ಹಳಿಯನ್ನು ಇದೀಗ ರಟ್ಟಿಹಳ್ಳಿ ಮೇಲೆ ವರ್ಗಾಯಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ. ಈಗಾಗಲೇ ಈ ಜಾಗದಲ್ಲಿ ದೇವಸ್ಥಾನ, ಶಾಲೆ, ಮನೆಗಳು, ತೋಟಗಳು, ಬೋರ್‌ವೆಲ್‌ಗಳು ಬಹಳಷ್ಟು ಇವೆ. ಅವುಗಳನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಜನರಿಗೆ ಇದರಿಂದ ತೀವ್ರ ತೊಂದರೆ ಆಗಲಿದೆ.
    ಆದ್ದರಿಂದ ಕೂಡಲೇ ರೈಲ್ವೆ ಇಲಾಖೆ ಯೋಜನೆ ಕುರಿತು ಮತ್ತೊಂದು ಬಾರಿ ಪರಿಶೀಲಿಸಿ ಮಾರ್ಗ ಬದಲಾಯಿಸಬೇಕು ಎಂದು ಒತ್ತಾಯಿಸಿದರು.
    ಪ್ರಮುಖರಾದ ಉಜಿನೆಪ್ಪ ಕೋಡಿಹಳ್ಳಿ, ಶಂಕ್ರಗೌಡ ಚೆನ್ನಗೌಡ್ರ, ರೂಪಾ ಅಂಬ್ಲೇರ, ಗುಡ್ಡನಗೌಡ ಪ್ಯಾಟಿಗೌಡ್ರ, ರಾಜು ಮಳಗೊಂಡರ, ಪ್ರಭು ಮುದಿವೀರಣ್ಣನವರ, ಗಣೇಶ ಸಾಳುಂಕೆ, ಹನುಮಂತಪ್ಪ ಗಾಜೇರ, ಷಣ್ಮುಖಪ್ಪ ಪ್ಯಾಟಿಗೌಡ್ರ, ರವಿ ಹದಡೇರ, ಬಸನಗೌಡ ಗಂಟೆಪ್ಪಗೌಡ್ರ, ನಾಗನಗೌಡ ಪಾಟೀಲ, ದೇವರಾಜ ಸೂರ್ಯವಂಶಿ, ಉಜ್ಜಪ್ಪ ದ್ಯಾವಕ್ಕಳವರ, ವೀರನಗೌಡ ಮಕರಿ, ಸಿದ್ದು ಹಲಗೇರಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts