More

    ರಾಣೆಬೆನ್ನೂರ ನಗರಸಭೆ 1.57 ಕೋಟಿ ರೂ. ಉಳಿತಾಯ ಬಜೆಟ್

    ರಾಣೆಬೆನ್ನೂರ: ನಗರಸಭೆ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ 2021-22ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಒಟ್ಟು 1.57 ಕೋಟಿ ರೂಪಾಯಿ ಉಳಿತಾಯ ಬಜೆಟ್ ಮಂಡಿಸಿದರು.

    ನಗರಸಭೆ ಸ್ವಂತ ಆದಾಯ: ನಗರಸಭೆಯ ಸ್ವಂತ ಆದಾಯ ಒಟ್ಟು 15.61 ಕೋಟಿ ರೂಪಾಯಿ ಆಗಿದೆ. ಅದರಲ್ಲಿ ಆಸ್ತಿ ತೆರಿಗೆ 4.09 ಕೋಟಿ, ಮಳಿಗೆ ಬಾಡಿಗೆ 2.67 ಕೋಟಿ, ನೀರಿನ ಕಂದಾಯ 3 ಕೋಟಿ, ಅಭಿವೃದ್ಧಿ ಕರ 2.50 ಕೋಟಿ, ಕಟ್ಟಡ ಪರವಾನಗಿ 40 ಲಕ್ಷ, ವ್ಯಾಪಾರ ಪರವಾನಗಿ 16 ಲಕ್ಷ , ಎಸ್​ಡಬ್ಲ್ಯುಎಂ ಶುಲ್ಕ 55 ಲಕ್ಷ , ಸಂತೆ ಶುಲ್ಕ 40 ಲಕ್ಷ , ನಳ ಸಂಪರ್ಕ 5 ಲಕ್ಷ ರೂಪಾಯಿ ಹಾಗೂ ಇತರ ಕರ ಮತ್ತು ಆದಾಯಗಳು 59 ಲಕ್ಷ ರೂಪಾಯಿ ಒಳಗೊಂಡಿದೆ.

    ರಾಜಸ್ವ ಅನುದಾನ: ನಗರಸಭೆಗೆ ಒಟ್ಟು 14 ಕೋಟಿ ರೂಪಾಯಿ ರಾಜಸ್ವ ಅನುದಾನ ಲಭ್ಯವಿದ್ದು, ಅದರಲ್ಲಿ ಎಸ್​ಎಫ್​ಸಿ ವೇತನ ಅನುದಾನ 5 ಕೋಟಿ, ಎಸ್​ಎಫ್​ಸಿ ವಿದ್ಯುತ್ ಅನುದಾನ 7.5 ಕೋಟಿ, ಎಸ್​ಎಫ್​ಸಿ ಮುಕ್ತಿನಿಧಿ ಅನುದಾನ 1.58 ಕೋಟಿ ಹಾಗೂ ನಲ್ಮ ಯೋಜನೆ ಅನುದಾನದಲ್ಲಿ ರಾಜಸ್ವ ವೆಚ್ಚಗಳಿಗೆ ಸಂಬಂಧಿಸಿದಂತೆ ವರ್ಗಾವಣೆ ಮಾಡಿದ 50 ಲಕ್ಷ ರೂಪಾಯಿ ಒಳಗೊಂಡಿದೆ.

    ರಾಜಸ್ವ ಪಾವತಿಗಳು: ನಗರಸಭೆ ರಾಜಸ್ವ ಪಾವತಿ (ಖರ್ಚು) 26.55 ಕೋಟಿ ರೂಪಾಯಿ ಇದೆ. ಅದರಲ್ಲಿ ವೇತನ ಪಾವತಿ 5.25 ಕೋಟಿ, ಎಸ್​ಡಬ್ಲ್ಯುಎಂ ಹೊರಗುತ್ತಿಗೆ ವಾಹನ ಚಾಲಕರಿಗೆ 2.88 ಕೋಟಿ, ಪೌರಕಾರ್ವಿುಕರಿಗೆ ನೇರವೇತನ ಪಾವತಿಗಾಗಿ 2.20 ಕೋಟಿ, ಬೀದಿ ದೀಪದ ಹೊರಗುತ್ತಿಗೆ 80 ಲಕ್ಷ, ನೀರು ಸರಬರಾಜು ಹೊರಗುತ್ತಿಗೆ 2 ಕೋಟಿ, ನೀರು ಸರಬರಾಜು ವಿದ್ಯುತ್ ಬಿಲ್ 5 ಕೋಟಿ, ಬೀದಿ ದೀಪ ವಿದ್ಯುತ್ ಬಿಲ್ 2.5 ಕೋಟಿ, ರಸ್ತೆ ಹಾಗೂ ಒಳಚರಂಡಿ ದುರಸ್ತಿಗಾಗಿ 55 ಲಕ್ಷ, ರಿಪೇರಿ ಮತ್ತು ನಿರ್ವಹಣೆ 71 ಲಕ್ಷ ರೂಪಾಯಿ ಒಳಗೊಂಡಿದೆ.

    ಶಾಸಕ ಅರುಣಕುಮಾರ ಪೂಜಾರ, ನಗರಸಭೆ ಉಪಾಧ್ಯಕ್ಷೆ ಕಸ್ತೂರೆವ್ವ ಚಿಕ್ಕಬಿದರಿ, ಆಯುಕ್ತ ಡಾ. ಎನ್. ಮಹಾಂತೇಶ ಹಾಗೂ ಎಲ್ಲ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

    ಲೇಔಟ್​ಗಳಿಗೆ ಸಿಸಿ ನೀಡಲು ಆಕ್ಷೇಪ: ಬಜೆಟ್ ಮಂಡನೆಗೂ ಮುನ್ನ ನಗರದಲ್ಲಿ ನೂತನವಾಗಿ ನಿರ್ವಿುಸಿದ ಲೇಔಟ್​ಗಳಿಗೆ ಸಿಸಿ ನೀಡುವ ವಿಚಾರವಾಗಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ವಿರೋಧ ಪಕ್ಷದ ಸದಸ್ಯ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ನೂತನ ಲೇಔಟ್​ಗಳನ್ನು ಸೂಕ್ತ ರೀತಿಯಲ್ಲಿ ನಿರ್ವಿುಸಿಲ್ಲ. ರಸ್ತೆ, ಚರಂಡಿ, ವಿದ್ಯುತ್ ಕಂಬ ಅಳವಡಿಕೆ ಸೇರಿ ವಿವಿಧ ಕಾಮಗಾರಿಯಲ್ಲಿ ನ್ಯೂನತೆಗಳಿವೆ. ಅಲ್ಲದೆ ಕೆಲವರು ವರ್ಕ್​ಆರ್ಡರ್ ದೊರೆಯುವ ಮುನ್ನವೇ ತರಾತುರಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಆದ್ದರಿಂದ ಇವುಗಳನ್ನು ಪರಿಶೀಲಿಸಬೇಕು. ನಂತರ ಸಿಸಿ ನೀಡಬೇಕು ಎಂದು ಆಗ್ರಹಿಸಿದರು. ಆಗ ಆಡಳಿತ ಪಕ್ಷದ ಸದಸ್ಯ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ಎಲ್ಲ ಲೇಔಟ್​ಗಳ ಕಾಮಗಾರಿ ಸರಿಯಾಗಿ ಮಾಡಲಾಗಿದೆ. ವರ್ಕ್ ಆರ್ಡರ್ ದೊರೆತ ಮೇಲೆಯೇ ಎಲ್ಲ ಕೆಲಸ ಮಾಡಲಾಗಿದೆ. ಆದರೆ, ಕೆಲವೊಂದು ಲೇಔಟ್​ಗಳಲ್ಲಿ ಗಿಡಗಂಟೆ, ಕೊಳವೆ ಬಾವಿ, ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಮಾತ್ರ ಮುಂಚಿತವಾಗಿ ಮಾಡಿಕೊಳ್ಳಲಾಗಿದೆ ಎಂದು ಸಮಜಾಯಿಸಿ ನೀಡಿದರು. ಈ ವಿಚಾರವಾಗಿ ಸಭೆಯಲ್ಲಿ ಕೆಲಕಾಲ ಎರಡೂ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಅಧ್ಯಕ್ಷ ರೂಪಾ ಚಿನ್ನಿಕಟ್ಟಿ ಮಾತನಾಡಿ, ನಾವು ಎಲ್ಲ ಲೇಔಟ್​ಗಳನ್ನು ನೋಡಿಕೊಂಡು ಬಂದಿದ್ದೇವೆ. ಸರಿಯಾಗಿವೆ. ಆದ್ದರಿಂದ ಸಿಸಿ ನೀಡಲು ಅನುಮೋದಿಸಲಾಗಿದೆ ಎಂದರು.

    ಹೊಸ ಕಾಮಗಾರಿಗೆ ಅನುದಾನವೆಷ್ಟು?: ವಿದ್ಯುತ್ ಚಿತಾಗಾರ ನಿರ್ವಿುಸಲು 25 ಲಕ್ಷ , ಸೂಪರ್ ಮಾರ್ಕೆಟ್ ಮಳಿಗೆಗಳ ನಿರ್ವಣಕ್ಕಾಗಿ 2 ಕೋಟಿ, ಪಾರ್ಕ್​ಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 6.6 ಕೋಟಿ, ಮೊಬೈಲ್ ಶೌಚಗೃಹ ನಿರ್ವಣಕ್ಕಾಗಿ 12 ಲಕ್ಷ, ಕುಡಿಯುವ ನೀರು ಸರಬರಾಜಿಗಾಗಿ 2 ಕೋಟಿ , ರಸ್ತೆ ಹಾಗೂ ಚರಂಡಿ ನಿರ್ವಣಕ್ಕಾಗಿ 55 ಲಕ್ಷ, ಮಳೆ ನೀರು ನಿರ್ವಹಣೆಗಾಗಿ 10 ಲಕ್ಷ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮೀಸಲಿಡಲಾಗಿದೆ.

    ಬಜೆಟ್​ನ ಸಂಕ್ಷಿಪ್ತ ವಿವರ: ನಗರಸಭೆಯ ಆರಂಭಿಕ ಶುಲ್ಕ 15.61 ಕೋಟಿ ರೂಪಾಯಿ, ರಾಜಸ್ವ ಸ್ವೀಕೃತಿ 31.44 ಕೋಟಿ, ಬಂಡವಾಳ ಸ್ವೀಕೃತಿ 17.57 ಕೋಟಿ , ಅಸಾಮಾನ್ಯ ಸ್ವೀಕೃತಿ 19.32 ಕೋಟಿ ಸೇರಿ ಒಟ್ಟು 83.94 ಕೋಟಿ ರೂಪಾಯಿ ನಗರಸಭೆಯ ಸ್ವೀಕೃತಿಯಾಗಿದೆ. ರಾಜಸ್ವ ಪಾವತಿ 26.55 ಕೋಟಿ, ಬಂಡಾವಳ ಪಾವತಿ 25.67 ಕೋಟಿ ಹಾಗೂ ಅಸಾಮಾನ್ಯ ಪಾವತಿ 19.32 ಕೋಟಿ ರೂಪಾಯಿ ಆಗಿದ್ದು, ಅಂದಾಜು 1.57 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts