More

    ಶ್ರದ್ಧಾಭಕ್ತಿಯಿಂದ ನಡೆದ ಉಡಿ ತುಂಬುವ ಕಾರ್ಯಕ್ರಮ; ದೇವಿಯ ದರ್ಶನಕ್ಕೆ ಹರಿದು ಬಂದ ಭಕ್ತಸಮೂಹ

    ರಾಣೆಬೆನ್ನೂರ: ನಗರ ದೇವತೆ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರಾಮಹೋತ್ಸವದ ನಿಮಿತ್ತ ಮಂಗಳವಾರ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
    ಸೋಮವಾರ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಚೌಡೇಶ್ವರಿ ದೇವಿಯ ಮೂರ್ತಿಯನ್ನು ಮೂಲ ದೇವಸ್ಥಾನದಿಂದ ಮೆರವಣಿಗೆ ಮೂಲಕ ಗಂಗಾಜಲ ಚೌಡೇಶ್ವರಿ ದೇವಸ್ಥಾನಕ್ಕೆ ತಂದು ಸಾಂಪ್ರದಾಯಕ ಪೂಜೆ ಸಲ್ಲಿಸಿ, ಪ್ರತಿಷ್ಠಾಪಿಸಲಾಯಿತು. ನಂತರ ಮಹಾ ಪೂಜೆ, ಮಂಗಳಾರತಿ ಹಾಗೂ ಸಿಹಿ ನೈವಿಧ್ಯ ಅರ್ಪಿಸಲಾಯಿತು.
    ಆಂಧ್ರ ಪ್ರದೇಶ, ಕೇರಳ, ತಮಿಳನಾಡು, ಮಹಾರಾಷ್ಟ್ರ ರಾಜ್ಯಗಳಿಂದ ಹಾಗೂ ಬೆಂಗಳೂರು, ಹುಬ್ಬಳ್ಳಿ ನಗರ ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ದೇವಿಗೆ ಉಡಿ ತುಂಬಿ, ಹರಿಕೆ ಸಲ್ಲಿಸಿದರು. ಇನ್ನೂ ಕೆಲವರು ಹಣ್ಣು-ಕಾಯಿ ನೈವಿಧ್ಯ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು.
    ಹೂವಿನ ವ್ಯಾಪಾರ ಬಲುಜೋರು…
    ಹೂವಿನ ಹರಿಕೆಗೆ ಪ್ರಸಿದ್ಧಿ ಪಡೆದ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರಾಮಹೋತ್ಸವದ ನಿಮಿತ್ತ ನಗರದ ಮಾರುಕಟ್ಟೆಗೆ ಹೂವಿನ ರಾಶಿಯೇ ಹರಿದು ಬಂದಿದ್ದು, ವ್ಯಾಪಾರ ಕೂಡ ಬಲು ಜೋರಾಗಿ ನಡೆದಿದೆ. ಪ್ರತಿವರ್ಷ ದೇವಿಗೆ ಹರಿಕೆ ಸಲ್ಲಿಸುವ ಭಕ್ತರು 101, 1001ರೂ.ಯಿಂದ ಲಕ್ಷರೂ.ವರೆಗೂ ಹೂವಿನ ಮಾಲೆಗಳನ್ನು ಅರ್ಪಿಸುವುದು ಜಾತ್ರೆಯ ವಿಶೇಷ. ಈ ಹಿನ್ನೆಲೆಯಲ್ಲಿ 5ರಿಂದ 25ಅಡಿಯವರೆಗೂ ಇರುವ ಸುಗಂಧಿ, ಶಾವಂತಿಗೆ, ಮಲ್ಲಿಗೆ ಹೂವಿನ ಮಾಲೆಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯುತ್ತಿವೆ. ಭಕ್ತರು ದೇವಿಗೆ ಹರಿಕೆ ಹೊತ್ತ ಬೆಲೆಗೆ ತಕ್ಕಂತೆ ಮುಗಿಬಿದ್ದು ಮಾಲೆಗಳನ್ನು ಖರೀದಿಸುತ್ತಿರುವ ದೃಶ್ಯಗಳು ಕಂಡುಬಂದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts