More

    ರ‌್ಯಾಂಡಮ್ ಟೆಸ್ಟ್‌ಗೆ ಒಳಪಡಿಸಿ

    ರಾಯಬಾಗ: ಕರೊನಾ ವೈರಸ್ ಪಾಸಿಟಿವ್ ಪ್ರಕರಣಗಳಿಂದಾಗಿ ಸೀಲ್‌ಡೌನ್ ಮಾಡಲಾದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಯಾವುದೇ ಕೊರತೆಯಾಗದಂತೆ ನೀರು, ವಿದ್ಯುತ್, ಹಾಲು, ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಸರಿಯಾಗಿ ತಲುಪಿಸುವಂತೆ ಕುಡಚಿ ಶಾಸಕ ಪಿ. ರಾಜೀವ ಅಧಿಕಾರಿಗಳಿಗೆ ಸೂಚಿಸಿದರು.

    ಬುಧವಾರ ಪಟ್ಟಣದ ಮಿನಿವಿಧಾನ ಸೌಧ ಸಭಾಭವನದಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸೀಲ್‌ಡೌನ್ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬರನ್ನು ರ‌್ಯಾಂಡಮ್ ಟೆಸ್ಟ್‌ಗೆ ಒಳಪಡಿಸುವಂತೆ ಸೂಚಿಸಿದರು.

    ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ಪ.ಪಂ. ಮುಖ್ಯಾಧಿಕಾರಿಗಳು ಮತ್ತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ನಿಗಾ ಇಡಬೇಕು. ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಹೊರಗಡೆ ತಿರುಗಾಡುತ್ತಿರುವುದು ಕಂಡು ಬಂದರೆ ಅಂತಹವರ ಮೇಲೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.

    ಶಾಸಕ ಡಿ.ಎಂ. ಐಹೊಳೆ ಮಾತನಾಡಿ, ಇಲ್ಲಿವರೆಗೆ ಕೋವಿಡ್-19 ನಿರ್ವಹಣೆಗಾಗಿ ತಾಲೂಕು ಆಡಳಿತ ಕೈಗೊಂಡ ಟಾಸ್ಕ್‌ಫೋರ್ಸ್ ಸಭೆಗಳ ಬಗ್ಗೆ ಮತ್ತು ಅದರ ಖರ್ಚು ವೆಚ್ಚಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಿ, ತೀವ್ರ ತರಾಟೆಗೆ ತೆಗೆದುಕೊಂಡರು. ಹಿಂದಿನ ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರು ಕೋವಿಡ್-19 ನಿರ್ವಹಣೆಯ ಲೆಕ್ಕಪುಸ್ತಕ ಮತ್ತು ಚೆಕ್‌ಬುಕ್‌ಗಳನ್ನು ವೈಯಕ್ತಿಕವಾಗಿ ಮನೆಯಲ್ಲಿ ಇಟ್ಟಿಕೊಂಡಿದ್ದಾರೆ ಎಂದು ರಾಯಬಾಗ ಕಂದಾಯ ನಿರೀಕ್ಷಕ ಸಸಾಲಟ್ಟಿ ಸಭೆಗೆ ಮಾಹಿತಿ ನೀಡಿದಾಗ, ಗರಂ ಆದ ರಾಯಬಾಗ ಶಾಸಕರು, ಕೋವಿಡ್-19 ನಿರ್ವಹಣೆಯ ಖರ್ಚುವೆಚ್ಚಗಳ ಬಗ್ಗೆ ಮತ್ತು ಸರ್ಕಾರದ ಹಣ ಸಮರ್ಪಕ ವ್ಯಯದ ಬಗ್ಗೆ ಮಾಹಿತಿ ಕೊರತೆ ಉಂಟಾಗಿದ್ದು, ಇದರ ಕುರಿತು ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ನೂತನ ತಹಸೀಲ್ದಾರ್ ಎಂ.ಬಿ. ಗೆಜ್ಜೆ ಅವರಿಗೆ ಸೂಚಿಸಿದರು.

    ಚಿಕ್ಕೋಡಿ ಉಪವಿಭಾಗಾಧಿಕಾರಿ ರವಿ ಕರಲಿಂಗಣ್ಣವರ, ಜಿಲ್ಲಾ ಪಂಚಾಯಿತಿ ಸದಸ್ಯ ನಿಂಗಪ್ಪ ಪಕಾಂಡಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಪಾಟೀಲ, ತಾ.ಪಂ. ಇಒ ಪ್ರಕಾಶ ವಡ್ಡರ, ಗ್ರೇಡ್-2 ತಹಸೀಲ್ದಾರ್ ಪರಮಾನಂದ ಮಂಗಸೂಳಿ, ಸಿಪಿಐ ಕೆ.ಎಸ್. ಹಟ್ಟಿ, ಟಿಎಚ್‌ಒ ಡಾ. ಎಸ್.ಎಸ್. ಬಾನೆ, ಅಧಿಕಾರಿಗಳಾದ ಆರ್.ಎಫ್. ಹಂದಿಗುಂದ, ಸಂತೋಷಕುಮಾರ ಕಾಂಬಳೆ, ರಾಮು ರಾಠೋಡ, ಎಸ್.ಆರ್. ಮಾಂಗ, ಎಚ್.ಎ. ಭಜಂತ್ರಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts